ಸ್ಥಳಾಭಾವಕ್ಕೆ 
ಬದಲಾದ ಕಾಲ-ಮಾನ-ಸ್ವಭಾವಕ್ಕೆ 
ಹೊಸ ಭಾಷ್ಯ 

ಬೆಳೆಯುತ್ತಿರುವ ನಗರಗಳ ಪ್ರಮುಖ ಸಮಸ್ಯೆ ಎಂದರೆ ಸೀಮಿತ ಸ್ಥಳಾವಕಾಶ. ದಿನದಿಂದ ದಿನಕ್ಕೆ ಜನ ಸಂಖ್ಯೆ ಹೆಚ್ಚಿದಂತೆ ಹೆಚ್ಚು ಹೆಚ್ಚು ಮನೆಗಳನ್ನೂ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಜಾಗವೂ ಬೇಕಾಗುತ್ತದೆ. ಇದರಿಂದಾಗಿ ಕೆರೆ ಒತ್ತುವರಿ, ಬೇರೆಯವರ ಸ್ಥಳವನ್ನು ಅತಿಕ್ರಮಿಸಿಕೊಳ್ಳುವುದು ಹೀಗೆ ಹಲವು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ. ಆದರೆ ಮಿತ ಸ್ಥಳಾವಕಾಶದಲ್ಲಿ ಹಲವು ಮಹಡಿಗಳ ಕಟ್ಟಡ ನಿರ್ಮಾಣ ಮಾಡಿದರೂ ಕೆಲ ಸಮಸ್ಯೆ ಎದುರಾಗುತ್ತವೆ. ಇವುಗಳಿಗೆ ಇತಿಶ್ರೀ ಹಾಡಲು ಹೊಸದಾಗಿ ಕೇಳಿಬರುತ್ತಿರುವುದು ಮೈಕ್ರೋ ಅಪಾರ್ಟ್ಮೆಂಟ್ಗಳು

   ಉದ್ಯೋಗಸ್ಥರು ವಿಶಾಲವಾದ ಎರಡು-ಮೂರು ಬೆಡ್ ರೂಂ ಮನೆಗಳಿಗೆ ಅತಿಯಾದ ಬಾಡಿಗೆ ನೀಡಲು ಹಿಂದೇಟು ಹಾಕುವುದು, ಜೊತೆ ಜೊತೆಯಲ್ಲಿ ಪತಿ-ಪತ್ನಿ ಹಾಗೂ ಒಂದು ಮಗು ವಾಸಿಸುವ ಸಂಸಾರಗಳು ನಗರಗಳಲ್ಲಿ ಕಾಣಿಸಿಕೊಳ್ಳುವುದು, ಮೊದಲಾದ ವ್ಯವಸ್ಥೆಗಳಿಗೆ ಪರಿಹಾರವಾಗಿ ಮೈಕ್ರೋ ಅಪಾರ್ಟ್ಮೆಂಟ್ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

   ವಿಶ್ವದ ಬೆಳೆಯುತ್ತಿರುವ ನಗರಗಳಲ್ಲಿ ಸ್ಥಳದ ಅಭಾವ ನೀಗಿಸಲು ಎಂಜಿನಿಯರ್ಗಳು ಕಂಡುಕೊಂಡಿರುವ ಹೊಸ ತಂತ್ರಜ್ಞಾನ ಇದಾಗಿದೆ. ಸದ್ಯ ಅಮೆರಿಕಾದ ನ್ಯೂಯಾರ್ಕ್ನಲ್ಲಿ ಕಾಣಿಸಿಕೊಂಡಿರುವ ಮೈಕ್ರೋ ಅಪಾರ್ಟ್ಮೆಂಟ್ ಕಾನ್ಸೆಪ್ಟ್ ಕೆಲ ದಿನಗಳಲ್ಲಿ ದೇಶದ ಇತರ ನಗರಗಳಿಗೂ ಕಾಲಿಡುವ ತವಕದಲ್ಲಿದೆ.


   ವಿನೂತನ ಕಾನ್ಸೆಪ್ಟ್ ಹುಟ್ಟುಹಾಕಿರುವ ಮೊನಾಡ್ನೊಕ್ ಡೆವಲಪರ್ ಸಂಸ್ಥೆಯ ಪ್ರಾಜೆಕ್ಟ್ ಡೆವಲಪರ್ ಟೋಬಿಯಾಸ್ ಓರಿವಾಲ್ ಪುಟ್ಟ ಮನೆಯ ವಿಚಾರವಾಗಿ ಸಾಕಷ್ಟು ಧನಾತ್ಮಕವಾಗಿ ಮಾತನಾಡಿದ್ದಾರೆ. ಅಮೆರಿಕಾದ ಶೇ. 31 ರಷ್ಟು ಜನ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದರಲ್ಲಿ ಯುವ ಜನತೆ ಮಾತ್ರವಲ್ಲ, ವೃದ್ಧರೂ ಕೂಡಾ ಸೇರಿದ್ದಾರೆ. ಹೀಗಾಗಿ ನಾವು ರೂಢಿಗತವಾಗಿ ಬಂದಿರುವ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿಲ್ಲ. ಬದಲಾಗಿ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸಿಸುತ್ತಿದ್ದೇವೆ ಎಂದಿದ್ದಾರೆ




   ಜೊತೆಯಲ್ಲಿ ಅಮೆರಿಕಾದಲ್ಲಿ ಜನ ತಡವಾಗಿ ಮದುವೆಯಾಗುತ್ತಾರೆ. ಡೈವೋರ್ಸ್ಗಳು ಕಾಮನ್, ಲೀವಿಂಗ್ ಟುಗೆದರ್ ನಡೆಸುತ್ತಿದ್ದಾರೆ. ಅಲ್ಲದೆ ಹಳೆಯದಾದ ಸಿಂಗಲ್ ಬೆಡ್ ರೂಂ, ಡಬಲ್ ಬೆಡ್ ರೂಂ, ತ್ರಿಬಲ್ ಬೆಡ್ ರೂಂ ಅಪಾರ್ಟ್ಮೆಂಟ್ಗಳ ಬಾಡಿಗೆಗೆ ಜನತೆ ಮುಂದಾಗುತ್ತಿದ್ದಾರೆ. ಆದರೆ ಅವರ್ಯಾರಿಗೂ ನೂತನ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲ. ಆದ್ದರಿಂದ ಮೈಕ್ರೋ ಅಪಾರ್ಟ್ಮೆಂಟ್ಗಳು ಸ್ವಲ್ಪ ನಿಧಾನವಾಗಿ ಪ್ರಸಿದ್ಧಿಗೆ ಬರುತ್ತಿವೆ ಎನ್ನುತ್ತಾರೆ ಓರಿವಾಲ್.


    ಮೈಕ್ರೋ ಅಪಾರ್ಟ್ಮೆಂಟ್ಗಳನ್ನು ಸದ್ಯ 260*370 ಚದರ ಅಡಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಸುವ್ಯವಸ್ಥಿತವಾದ ಕಿಚನ್, ಸ್ಟೋರ್ ರೂಂ, ಶವರ್ ರೂಂ, ದೊಡ್ಡದಾದ ಕಿಟಕಿಗಳು, 9 ಅಡಿ ಎತ್ತರದ ಮೇಲ್ಛಾವಣಿ, ಸುಂದರವಾದ ಬಾಲ್ಕನಿಗಳು ಸೇರಿವೆ

ಮನೆಯ ವಿನ್ಯಾಸ 
   ಇವುಗಳ ನಿರ್ಮಾಣಕ್ಕೆ ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಬದಲಿಗೆ ಕೆಲ ತಿಂಗಳುಗಳಲ್ಲಿ ಕಟ್ಟಬಹುದಾಗಿದೆ. ಒಂದೆರಡು ವಾರಗಳಲ್ಲಿ ಮನೆ ನಿರ್ಮಾಣ ಮಾಡುವ ಕೆಲಸಗಾರರು ಗೋಡೆಗಳನ್ನು ಕಟ್ಟುತ್ತಾರೆ. ಬಳಿಕ ಬಳಿಕ ಮೇಲ್ಛಾವಣಿ ಹಾಗೂ ಉಳಿದ ಇಂಟೀರಿಯರ್ ಡಿಸೈನ್ಗಳನ್ನು ಮಾಡಿ ಮುಗಿಸುತ್ತಾರೆ ಎಂದು ಡಿಸೈನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


   
ಪುಟ್ಟ ಮನೆಯಲ್ಲಿರುವ ಇಂಚಿಂಚು ಜಾಗಕ್ಕೂ ಮಹತ್ವ ನೀಡಲಾಗಿದ್ದು, ವಿಶೇಷ ಜತನದಿಂದ ಅಲ್ಲಿರುವ ವಸ್ತುಗಳನ್ನು ಜೋಡಿಸಲಾಗಿದೆ. ಉದಾಹರಣೆಗೆ ಅಡುಗೆ ಕೋಣೆಯ ವಿಚಾರಕ್ಕೆ ಬಂದಾಗ ಪಾತ್ರೆ ತೊಳೆಯಲು ಮಿನಿ ಡಿಷ್ವಾಷರ್, ಚಿಕ್ಕ ಫ್ರಿಡ್ಜ್, ಟ್ರೆಡೀಷನಲ್ ಓವನ್ ಬದಲಿಗೆ ಪುಟ್ಟ ಮೈಕ್ರೋವೇವ್ ಹೀಗೆ ವಿಭಿನ್ನ ರೀತಿಯಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿಡಲಾಗಿದೆ

   ಎಲ್ಲಾ ವಯಸ್ಸಿನ ಹಾಗೂ ವಿಭಿನ್ನ ಪ್ರವೃತ್ತಿಯ ಜನ ಅಪೇಕ್ಷಿಸುವಂತೆ ಹೆಚ್ಚು ಸ್ಥಳಾವಕಾಶ, ದೊಡ್ಡ ಅಡುಗೆ ಕೋಣೆ, ಟಿವಿ ಹಾಲ್, ಲಾಂಡ್ರಿ, ಬೈಕ್ ಪಾರ್ಕಿಂಗ್ಗೆ ಸೂಕ್ತ ಜಾಗ ಜೊತೆಯಲ್ಲಿ ಜಿಮ್ ಕೂಡಾ ಮೈಕ್ರೋ ಅಪಾರ್ಟ್ಮೆಂಟ್ನಲ್ಲಿ ಒಳಗೊಂಡಿರುತ್ತದೆ. ಜೊತೆಯಲ್ಲಿ ಜನರ ಅಭಿರುಚಿಗೆ ತಕ್ಕಂತೆ ಸಾಕಷ್ಟು ಸಂಶೋಧನೆಗಳನ್ನೂ ಮಾಡಿದ್ದರಿಂದ ಅವರಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಸಹ ನೀಡುತ್ತೇವೆ. ಇಂದಿನವರ ಅವಶ್ಯಕತೆಗಳಿಗನುಗುಣವಾಗಿ ತಯಾರಿಸಲಾಗಿದೆ

   ಈಗಾಗಲೇ ಒಟ್ಟು 55 ಇಂಥ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುತ್ತಿದ್ದು, ಅದರಲ್ಲಿ 22 ಮನೆಗಳು ಕೈಗೆಟಕುವ ದರದಲ್ಲಿ ತಯಾರಾಗಲಿದೆ. ಉಳಿದ 33 ಮಾರುಕಟ್ಟೆಯ ರೇಟ್ಗನುಗುಣವಾಗಿ ನಿರ್ಮಾಣ ಮಾಡುತ್ತಿದ್ದು, ಇವುಗಳನ್ನು ಬಾಡಿಗೆಗೆ ಪಡೆಯಲು ಅವಕಾಶಗಳಿವೆ ಎಂದು ಓರಿವಾಲ್ ಹೇಳಿದ್ದಾರೆ.


   ನಾವು ನಡೆಸುತ್ತಿರುವ ಪ್ರಯೋಗಾತ್ಮಕ ನಡೆಯನ್ನು ಇತರ ಡೆವಲಪರ್ಗಳು ಹಾಗೂ ಕಂಪನಿಗಳು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೈಕ್ರೋ ಅಪಾರ್ಟ್ಮೆಂಟ್ಗಳು ಹೆಚ್ಚು ಪ್ರಸಿದ್ಧಿ ಪಡೆಯಲಿದೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ ಓಲಿವರ್


   ಇದಕ್ಕೆ ಪೂರಕವಾಗಿ ನ್ಯೂಯಾರ್ಕ್ ಮೇಯರ್ ಕೂಡಾ ನಗರದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತಿರುವ ಹಾಲಿ ಕಾನೂನನ್ನೂ ಸಡಿಲಿಸಿ ಹೊಸ ಪ್ರಯೋಗಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಒಂದು ವೇಳೆ ಪ್ರಯೋಗ ಯಶಸ್ವಿಯಾದರೆ ಕಾನೂನು ತಿದ್ದುಪಡಿ ನಡೆಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ಮೈಕ್ರೋ ಅಪಾರ್ಟ್ಮೆಂಟ್ ಪ್ರಯೋಗವು ಸದ್ಯ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದ್ದು, ಯಶಸ್ವಿಯಾದರೆ ದೇಶದ ಇತರ ಬೆಳೆಯುತ್ತಿರುವ ಪಟ್ಟಣಗಳಾದ ಬೂಸ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ಸಿಯಾಟಲ್, ವಾಷಿಂಗ್ಟನ್ ಮೊದಲಾದೆಡೆಗಳಲ್ಲೂ ಚಿಕ್ಕ ಅಪಾರ್ಟ್ಮೆಂಟ್ಗಳ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತದೆ.


   ಇದರ ಜೊತೆಯಲ್ಲಿ ಮೈಕ್ರೋ ಅಪಾರ್ಟ್ಮೆಂಟ್ಗಳು ಈಗಿರುವ ರೀತಿಯಲ್ಲಿ ಕೊಂಚ ಬದಲಾವಣೆಗಳೊಂದಿಗೆ ಹೊಸ ಶೈಲಿಯ ಮನೆಗಳು ವಿಶ್ವದ ಇತರ ಮಹಾನಗರಗಳಲ್ಲೂ ತಲೆ ಎತ್ತುವ ದಿನಗಳು ದೂರವಿಲ್ಲ

Published in 'Life 360' magazine 

=========================================================================
#features, #stories, #microapartment, #concept, #life, #apartment, #Love, #Concept, #New #Innovation #Lifestyle #Reviews #World, #Magazine, #Life360 #Kannada #Newspaper 
Tags: #Features#reviews#stories

Post a Comment

2 Comments

Skip to main content