ನೀನಿಲ್ಲದಿದ್ದಾಗ ನಿನ್ನ ಮನೆಗೆ ಹೋಗಿ ಬಂದಿದ್ದೇನೆ. ಅದೂ ಒಂದಲ್ಲ.. ಮೂರ್ನಾಲ್ಕು ಬಾರಿ..! ಆ ಹೆತ್ತ ತಾಯಿಯ ಪ್ರೀತಿ-ವಿಶ್ವಾಸ, ಮನೆಯೊಡೆಯನ ಆದರಾತಿಥ್ಯ, ದೊಡ್ಡಕ್ಕನ ಕೈ ಅಡುಗೆ, ತಮ್ಮನ ಬಾಂಧವ್ಯ, ಪುಟ್ಟ ತಂಗಿಯ ತುಂಟಾಟ, ನನ್ನಂಥ ಒರಟನನ್ನೂ ಕಳೆದು ಹೋಗುವಂತೆ ಮಾಡಿದ್ದಂತೂ ಸತ್ಯ..

   ಹುಟ್ಟಿದ್ದು ಒಂದೂರಿಯಲ್ಲಿ.. ಬೆಳೆದದ್ದು ಮತ್ತೊಂದೂರಿನಲ್ಲಿ.. ಜೀವನ ನಡೆಸುತ್ತಿರೋದು ಮಗದೊಂದೂರಿನಲ್ಲಿ.. ಈ ಜಗ ಕಂಡಾಗಿನಿಂದಲೂ ಒಂಟಿ ಪಿಶಾಚಿಯೇ ಒಂದರ್ಥದಲ್ಲಿ..! ಸುತ್ತಲೂ ಗೆಳೆಯರಿದ್ದರೂ ನಾನು ಮಾತ್ರ ಸಾಗರದ ದಡದಲ್ಲಿ ಬೀಡು ಬಿಟ್ಟ ನೌಕೆಯಂತೆ..

   "दोस्तों की ख़ातिर जिंदगि देसक्ता हूं। मगर ऐसे दोस्त किसीको भी मिलते नहीं है।।" ನನ್ನೆಲ್ಲಾ ಗೆಳೆಯರಿಗೂ ಅವರದ್ದೇ ಆದ ಸ್ವಂತದ್ದೊಂದು ಬದುಕಿದೆ. ಆದರೆ ನನಗೆ ಅವರೇ ಜೀವನ. ಸ್ನೇಹಿತರಿದ್ದರೇ ಸೂರ್ಯೋದಯ.. ಚಂದ್ರೋದಯ.. ಅವರಿಲ್ಲದಿದ್ದರೆ ಅಮಾವಾಸ್ಯೆಯ ಕಾರ್ಗತ್ತಲು.!! ಹಾಗಿದ್ದ ಜೀವನಕ್ಕೆ ನೀನ್ಯಾಕೆ ಕಾಲಿಟ್ಟೆ..?

   ಹೇಗೆ? ಯಾಕೆ? ಯಾವ ಮುಹೂರ್ತದಲ್ಲಿ ಈ ಪುಟ್ಟ ಹೃದಯದೊಡತಿಯಾದೆ? ಯಾರನ್ನು ಕೇಳಲಿ...! ಉತ್ತರ ಹೇಳುವವರ್ಯಾರು? ನಿನ್ನನ್ನು ಕೇಳೋಣವೆಂದರೆ ಮಾತಿನೊಂದಿಗೆ ವಿರಸವಾಡುತ್ತಾ.. ಮೌನದೊಂದಿಗೆ ಸರಸವಾಡುತ್ತ ಹೆಜ್ಜೆ ಹಾಕುತ್ತಿಯ.. ನಿನ್ನೆಡೆಗೆ ಬರುವ ಎಲ್ಲ ಹಾದಿಗಳೂ  ಮುಚ್ಚಿ ಹೋಗಿವೆಯ? ಅಥವಾ ನೀನೇ ಅದರಾಚೆ ನಿಂತು ಅಗುಳಿ ಹಾಕಿದ್ದೀಯಾ...? ಅದು ಗೊತ್ತಿಲ್ಲ.! ನಾನಂತೂ ಹುಡುಕಾಟದಲ್ಲಿದ್ದೇನೆ.
ಏನು ಮಾಡುತ್ತಿ ನೀನೇ ಹೇಳಬೇಕು?


   ಯಾರೇನೇ ಅಂದರೂ ನೀನು ಕಾಡಿದಷ್ಟು ಮತ್ಯಾರೂ ನನ್ನ ಕೆಣಕಿಲ್ಲ. ಏನೇ ತೊಂದರೆ, ತೊಡಕುಗಳಿದ್ದರೂ ಕಿರುಬೆರಳಲ್ಲಿ ಪಕ್ಕಕ್ಕಿಟ್ಟು ಮುಂದಡಿ ಇಡಬಲ್ಲೆ.. ಆದರೆ ನಿನ್ನ ನಗು, ಆ ಮುಂಗುರುಳು, ಉದ್ದವಾದ ಹೇರಳೆ, ಮುಡಿದ ಮಲ್ಲಿಗೆ, ಹೀಗೆ ಹೇಳುತ್ತಾ ಹೋದರೆ ಒಂದಾ.. ಎರಡಾ.. ಅದೆಲ್ಲಕ್ಕಿಂತ ಮಿಗಿಲಾದ ನಿನ್ನ ಗಾಂಭೀರ್ಯ..! ಇದಕ್ಕೆ ಮಾತ್ರ ಎಂಥವರೂ ಮಾರು ಹೋಗುತ್ತಾರೆ. ಆದರೂ ನೀನು ಆಗಸದಲ್ಲಿರುವ ಹುಣ್ಣಿಮೆಯ ಚಂದಿರನಂತೆ.. ಕಣ್ಣೆದುರಿಗಿದ್ದರೂ ಕೈಗೆಟುಕುವುದಿಲ್ಲ.. ಹುಡುಕ ಹೊರಟರೆ ಸಿಗುವುದಿಲ್ಲ.!

   ಇಂತಿಪ್ಪ ನಿನ್ನ ನೋಡಿದ ಮೇಲೆ ನಾನೆಷ್ಟು ಬದಲಾದೆ.. ನನ್ನೆಲ್ಲ ಗೆಳೆಯರಿಗೂ ಇಂದಿಗೂ ಆಶ್ಚರ್ಯ. ಆದರೆ ವಿಚಾರ ಮಾತ್ರ ಯಾರಿಗೂ ಗೊತ್ತಿಲ್ಲ. ನಿನ್ನೊಂದಿಗೆ ಗೆಳೆತನ ಸಂಪಾದಿಸಲು ಹೊರಟಾಗಲೆಲ್ಲ ಏನಾದರೊಂದು ಅಡ್ಡಿ ಆತಂಕ.. ಸಾಕಷ್ಟು ಪ್ರಯತ್ನಿಸಿದರೂ ಅದು ಮಾತ್ರ ಮಾಯಾಜಿಂಕೆಯೇ..!

   ಇದೆಲ್ಲದರ ನಡುವೆಯೇ ಕಾಲೇಜಿನಲ್ಲಿ ಮೊದಲು ನೀನು ದೂರಾದೆ..! ನಾನು ಮತ್ತೇನೋ ಸಾಧಿಸುತ್ತೇನೆ ಅಂತ ಪಣತೊಟ್ಟು ದೂರದೂರಿಗೆ ಹೆಜ್ಜೆ ಹಾಕಿದ್ದೆ. ಅಲ್ಲಿಂದ ಮರಳುವ ವೇಳೆಗೆಲ್ಲ ಕಾಲೇಜು ಅಂಗಳ ಖಾಲಿ.. ಖಾಲಿ..! ಉತ್ತರ ತಿಳಿಯುವ ಕುತೂಹಲಕ್ಕಿಂತ, ಪ್ರಶ್ನೆ ಏನಿರಬಹುದು ಅನ್ನೋ ಆತಂಕವೂ ಮನದಲ್ಲಿ ಮರೆಯಾಗಿ ಹೋಗಿತ್ತು.

   ಅಷ್ಟೇ! ಅಲ್ಲಿಗೆ  ನಿನ್ನೆಡೆಗಿದ್ದ ಎಲ್ಲವೂ ಮುಗಿದ ಅದ್ಯಾಯ ಎಂದುಕೊಂಡಿದ್ದವನ ಬಾಳಲ್ಲಿ ಬಿಸಿದ್ದು ಹಿಂಗಾರಿನ ಬಿರುಗಾಳಿ ಸಹಿತ ಮಳೆ. ಅದಕ್ಕೆ ತತ್ತರಿಸಿ ಹೋದೆ..

   ಅದರರ್ಥ ಎಲ್ಲವು ಮುಗಿದಿದೆ ಸಾವರಿಸಿಕೊಳ್ಳುವುದರೊಳಗೆ ನಿನ್ನೊಂದಿಗಿನ ಹೊಸ ಸಾಂಗತ್ಯ ಮನಸ್ಸಿಗೆ ಸಾಂತ್ವನ ನೀಡಿತ್ತು. ಇದೆ ಹುರುಪು ಮತ್ತೊಂದು ಸಾಹಸಕ್ಕೆ ಮುನ್ನುಡಿ ಕೂಡ ಬರೆದಿತ್ತು..!


   ಇಷ್ಟೆಲ್ಲಾ ಆದ ಮೇಲೆಯೇ ಏನೇನೋ ಮಾಡಿ ನಿನ್ನ ತವರಿಗೆ ಕಾಲಿಡುವ ಕಲ್ಪನೆ ಮಾಡಿದ್ದು. ಅದು ಆಯಿತು. ಆದರೆ ವಿಶೇಷ ನೋಡು ಗೆಳತಿ, (ಅಲ್ಲಿ ಆಗ ನೀನಿರಲಿಲ್ಲ..) ಅಂದು ನಾನು ನನಗಿರಲಿಲ್ಲ. ಈ ಜಗತ್ತಿನಲ್ಲಿದ್ದರೆ ಅಂಥವರ ಜತೆ ಬಾಳ್ವೆ ಮಾಡಬೇಕೆಂಬ ಹೊಸ ಆಲೋಚನೆ ಮೊಳೆತಿದ್ದು. ಅವರೆಲ್ಲರ ಪ್ರೀತಿ, ವಿಶ್ವಾಸ, ಗೌರವ, ನಡವಳಿಕೆ, ಮೊದಲಾದ ಬಾಂಧವ್ಯಗಳಿಗೆ ಮೂಕನಾಗಿದ್ದೆ. ಹಾಗಾಗಿಯೇ ಮೂರ್ನಾಲ್ಕು ಬಾರಿ ನಿನ್ನ ತವರಿಗೆ ಕಾಲು ಸವೆಸಿದ್ದು. ಅದನ್ನು ಬಿಟ್ಟು ನನಗೆ ಬೇರೆ ಉದ್ದೇಶಗಳಿರಲಿಲ್ಲ.

"ಏ ಚೋಟಿಸಿ ಹೈ ಜಿಂದಗಿ.. ಉಸ್ ಸೆ ಛೋಟಾ ಸಾ ಹೈ ಏಕ್ ಸಪ್ನ.."

   ಅವೆಲ್ಲ ಏನೇ ಇದ್ದರೂ ನೀನು ಮಾತ್ರ ಆಷಾಢದ ಜಡಿ ಮಳೆಯಂತೆ... 
ಕಾಡಿದ ಹುಡುಗಿಯ ಬೆನ್ನ ಬಿದ್ದರೆ.. ಸಿಗುತ್ತಾಳಾ ಎಂಬ ಪ್ರಶ್ನೆ, ಆತಂಕ, ದುಗುಡ, ಮೊದಲಾದ ಇರೋ ಬರೋ ಎಲ್ಲ ಭಾವಗಳೂ ಇಂದಿಗೂ ಮನದಲ್ಲಿ ಮೂಡಿವೆ.
ಒಮ್ಮೆ ಉತ್ತರ ನೀಡಿ ಹೋಗು... 

===================================================================
#ಕಾಲೇಜು, #ಅಂಗಳ, #ಖಾಲಿ, #ಉತ್ತರ #ಕುತೂಹಲ, #ಪ್ರಶ್ನೆ, #ಆತಂಕ, #ಮನ, #ಪ್ರೀತಿ, #ವಿಶ್ವಾಸ, #ಗೌರವ, #ನಡವಳಿಕೆ, #ಬಾಂಧವ್ಯ, #ಮೂಕ, #ಗೆಳತಿ, #ಕಲ್ಪನೆ, #ಆಷಾಢ, #ಜಡಿಮಳೆ, #ಹುಡುಗಿ, #ಭಾವ, #ಹುರುಪು, #ಸಾಹಸ, #ಸಾಂಗತ್ಯ, #ಹಿಂಗಾರು, #ಬಿರುಗಾಳಿ, #ಮಳೆ, #ನಗು, #ಮುಂಗುರುಳು, #ಹೇರಳೆ, #ಮಲ್ಲಿಗೆ, #ಗಾಂಭೀರ್ಯ, #ಆಗಸ, #ಹುಣ್ಣಿಮೆ, #ಚಂದಿರ, #ಹುಡುಕಾಟ, #ಅಮಾವಾಸ್ಯೆ, #ಸೂರ್ಯೋದಯ, #ಚಂದ್ರೋದಯ, #ಕಾರ್ಗತ್ತಲು, #ಸಾಗರ, #ದಡ, #ನೌಕೆ, #ತಂಗಿ, #ತುಂಟಾಟ, #ಒರಟ, #ತಾಯಿ, #ಅಡುಗೆ, #ಉತ್ತರ
Tags: featureslifeloveloveandlifetravel

Post a Comment

0 Comments

Skip to main content