ಹೃದಯ ತುಂಬಿದ ಧನ್ಯವಾದಗಳು..
ಯಾಕೆಂದರೆ ನನ್ನ आउकात ಏನು ಅಂತ ಹತ್ತಾರು ಬಾರಿ ಅರ್ಥೈಸಿ ಕೊಟ್ಟಿದ್ದಕ್ಕೆ.

   ಇದನ್ನು ನಿನ್ನ ತಪ್ಪು ಎಂದು ದೂರಲಾರೆ.. ನಾನೇನು ಎಂದು ನನಗೆ ತಿಳಿಸಿಕೊಡಲು ಅಂತಿಮವಾಗಿ ನಿನಗೆ ಸಿಕ್ಕ ಕೊನೆಯ ಮರ‍್ಗವೇ ಇದಾಗಿತ್ತ..! ಉತ್ತರ ಗೊತ್ತಿಲ್ಲದ ಪ್ರಶ್ನೆ. ತಿಳಿಯಬೇಕಾದ ಅನಿವಾರ್ಯಾತೆಯೂ ಸತ್ತು ಸುಡುಗಾಡಲ್ಲಿ ಮಲಗಿದೆ. ಆದರೂ ನೀನಿಷ್ಟೇ ಎಂದು ನಿನಗರ್ಥವಾಗಿದ್ದನ್ನು ಕೊಂಚ ಮೊದಲೇ ನನಗರ್ಥವಾಗುವಂತೆ ವಿವರಿಸಿದ್ದಿದ್ದರೆ...!!!

   ಕನಿಷ್ಟ ಪಕ್ಷ ಈ ಸಂಬಂಧ ಹೀಗೆ ಹಳ್ಳದ ಹಾದಿ ಹಿಡಿಯುತ್ತಿರಲಿಲ್ಲ ಎಂದಷ್ಟೇ ಹೇಳಬಲ್ಲೆ. ಅಥವಾ ನಿನಗಿಂತ ಮೊದಲು ನಾನೇ ಈ ಜಾಗದಿಂದ ಏನೂ ಹೇಳದೆ ತಂಗಾಳಿಯಂತೆ ಮರೆಯಾಗಿರುತ್ತಿದ್ದೆನಾ.. ಆದರೆ ಈಗ ಉಸಿರಾಡೋಣವೆಂದರೆ ಮಟ-ಮಟ ಮಧ್ಯಾಹ್ನದ ಸೂರ್ಯನ ನಿಟ್ಟುಸಿರು. ಅತ್ತ ಸಾಯಲೂ ಆಗದೆ, ಇತ್ತ ಬದುಕಲೂ ಆಗದೆ ಅಂತರ್ ಪಿಶಾಚಿಯಂತಾಗಿದ್ದೇನೆ.


   ಸುಮ್ಮನೇ ಕುಳಿತು ಬದುಕ ಅವಲೋಕಿಸಿದಾಗ ಮರಳುವ ಯೋಜನೆ ಪೂರ್ವ ನಿಯೋಜಿತ ಅಲ್ಲ ಅನ್ನೋದನ್ನು ನಿನ್ನ ಕೈಲಿ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಅಚ್ಚುಕಟ್ಟಾಗಿ ನಿಭಾಯಿಸಿದ್ದೀಯ. ಹತ್ತಾರು ಬಾರಿ ಸೂಕ್ಷ್ಮವಾಗಿ ತಿಳಿ ಹೇಳುವ ಸಾಹಸಕ್ಕೂ ಇಳಿದಿದ್ದೀ. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳದಿದ್ದಾಗ ಕೊನೆಯದಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಲ್ಲಿಂದ ಹೊರಟು ಹೋಗಿದ್ದೀ. ಎಲ್ಲವನ್ನೂ ಅದೆಷ್ಟು ಚಂದ ವಿವರಿಸುತ್ತಾ ಬಂದಿದ್ದೀ ಎನ್ನುವುದು ಈಗ ಕಣ್ಣ ಮುಂದಿದೆ.


   ಊರಿಗೆಂದು ಹೋಗುವ ಮೊದಲು ಗಂಟೆಗಳ ಲೆಕ್ಕದಲ್ಲಿ ಆಡುತ್ತಿದ್ದ ಮಾತು ಅಲ್ಲಿಂದ ಬರುವುದರೊಳಗೆ ಮೌನಕ್ಕಿಂತಾ ವಿರಳವಾಗಿತ್ತು. ಇದ್ಯಾಕೆ ಹೀಗೆ ಅಂದರೂ ಉತ್ತರಿಸುವ ಗೋಜಿಗೂ ಮುಂದಾಗಿಲ್ಲ. ಅದು ಮೊದಲ ಹೆಜ್ಜೆಯಾಗಿತ್ತಾ?? ನಿಧಾನವಾಗಿ ಭೇಟಿಯಾಗುವುದೂ ಅಪರೂಪವಾಗಿತ್ತು. ನಾ ಕೇಳುವ ಪೂರ್ವದಲ್ಲೇ ಕೆಲಸ ಹುಡುಕುವ ನೆಪ ಹೇಳಿದ್ದೆ... ಕೆಲಸ ಸಿಕ್ಕ ನಂತರ, ಸಂಬಂಧಿಕರ ಮನೆಯಲ್ಲಿ ಇರೋದು, ತಡ ರಾತ್ರಿವರೆಗೂ ಎಚ್ಚರವಿದ್ದರೆ ಬೈಯ್ಯುತ್ತಾರೆ ಎಂದು ನನ್ನ ತಲೆ ಸವರಿದ್ದಿ... ಕಚೇರಿಯಲ್ಲಿ ಸಹೋದ್ಯೋಗಿಗಳು ಹತ್ತಾರು ಪ್ರಶ್ನೆ ಕೇಳುತ್ತಾರೆ, ಉತ್ತರಿಸಲು ಕಷ್ಟವಾಗುತ್ತದೆ ಎನ್ನುತ್ತಲೇ ಮಾತಿಗೆ ಪೂರ್ಣ ವಿರಾಮ ಇಟ್ಟಿದ್ದಿ. ಆತ್ಮೀಯವಾಗಿಯೇ ನನ್ನದೆಲ್ಲವನ್ನು ಮರಳಿಸಿ ಮರೆಯಾಗಿದ್ದಿ.  

   ಕಣ್ಣೀರು ಒರೆಸಿದ ಬೆರಳಲ್ಲಿ ರಕ್ತದ ಕಲೆ. ತಲೆಯಿಟ್ಟು ವಿಶ್ರಮಿಸಿ ಹೆಗಲು ಹಳಸಿದೆ. ಜೊತೆಯಲ್ಲಿ ನಡೆದ ಪಾದ ಪಾತಾಳ ಸೇರಿದೆ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಕ್ಷಣವೇ ನೆನಪಿಗೆ ಬರುತ್ತಿಲ್ಲ. ಜನ್ಮ ದಿನದ ಶುಭಾಶಯಕ್ಕೂ ಪ್ರತ್ಯುತ್ತರ ಬಯಸದಷ್ಟು ದೂರವಾಗಿದ್ದೇನೆ. ಹೀಗೆ ಮತ್ತೆಂದಿಗೂ ಸಿಗಲಾರೆ ಎಂದು ಯಾವತ್ತೋ ಹೇಳಿದ್ದು ಈಗ ಧ್ವನಿಸುತ್ತದೆ.


   ಕಳೆದ ಹಲವು ವರ್ಷದಲ್ಲಿ ದಿನ ಲೆಕ್ಕ ಹಾಕಿದ್ದಕ್ಕಿಂತ ನಿಮಿಷದ ವೇಗ ಹೆಚ್ಚೆನ್ನುವುದು ಅರಿವಿಗೆ ಬಂದಿದೆ. ನೀನೊಮ್ಮೆ ಒಡೆದು ಎಲ್ಲೆಲ್ಲೋ ಬಿಸಾಡಿ ಹೋಗಿದ್ದ ಗಾಜಿನ ಚೂರುಗಳನ್ನು ಒಟ್ಟಿಗೇ ಸೇರಿಸಿ ಹೊಸ ಆಕೃತಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ರೂಪಕ್ಕಿಂತ ವಿರೂಪವೇ ಮೂಡುತ್ತಿದೆ. ಇಲ್ಲಿಗೆ ಎಲ್ಲವೂ ನಿಚ್ಚಳ.

   ಒಟ್ಟಾರೆ ನಾನೇ ಹುಂಬ. ಕೇವಲ ಎದುರು ಕಂಡಿದ್ದಷ್ಟೇ ಸತ್ಯ, ನೀನೆಂದಿಗು ನನ್ನ ಬಿಟ್ಟು ಹೋಗಲಾರೆ ಎನ್ನೋ ನಂಬಿಕೆಯಲ್ಲಿ ಹುಳದಂತೆ ಚಿಪ್ಪಿನೊಳಗೆ ಅವಿತುಕೊಂಡಿದ್ದೆ. ಹಿಂದಿಯ आउकातನಂತೆ ಎಲ್ಲವನ್ನೂ ವಿವರಿಸಿ, ನೀನು ಇಷ್ಟೇ ಎಂದೂ ಅರ್ಥೈಸುವಂತಿದೆ. ನನಗದು ಅರಿವಾಗುವ ಹೊತ್ತಿಗೆ ವಸಂತಗಳೇ ಉರುಳಿವೆ..!

-------------------------------------------------------------------------------------------------------------------
#ಸತ್ಯ, #ಹುಂಬ, #आउकात, #ನಂಬಿಕೆ, #ವಸಂತ, #ಹಿಂದಿ, #ನಿಮಿಷ, #ರೂಪ, #ಆಕೃತಿ, #ಕಣ್ಣೀರು, #ಬೆರಳು, #ರಕ್ತ, #ಕಲೆ, #ತಲೆ, #ಹುಳ, #ವೇಗ, #ಜನ್ಮದಿನ, #ಶುಭಾಶಯ, #ಕಚೇರಿ, #ಸಹೋದ್ಯೋಗಿ, #ತಡರಾತ್ರಿ, #ಸುಂಕ, #ಸಾಹಸ, #ಪಿಶಾಚಿ, #ಯೋಜನೆ, #ಪೂರ್ವ #ನಿಯೋಜಿತ, #ಹೃದಯ, #ತಂಗಾಳಿ, #ಅನಿವಾರ್ಯಾತೆ, #ಉಸಿರಾಟ, #love, #life, #hindi, #truth, #loveandlife, #feature, #story

Tags: #Features#life#love#loveandlife

Post a Comment

1 Comments

Skip to main content