ಅಂತೂ ಇಂತೂ ಕೊನೆಯ ಮೊಳೆ ಹೊಡೆದಾಗಿದೆ.
ಕೊನೆಯ ಪೆಟ್ಟು ಕೊಟ್ಟವರು ಯಾರು ಎನ್ನುವುದು ಅರ್ಥವಾಗದೇ ಉಳಿದಿದ್ದು ಮಾತ್ರ ಸಮಾಧಾನದ ಸಂಗತಿ. ಇದು ಬೇಕಂತಲೇ ಆಗಿದ್ದಾ, ಇಬ್ಬರೂ ಸೇರಿ ಕೈಯ್ಯಾರೆ ಕೊಲೆ ಮಾಡಿದ್ದಾ ವಿವರಣೆ ಅನಗತ್ಯ. ಆದರೂ ಮಾಧುರ್ಯಭರಿತ ಸಂಬಂಧವೊಂದಕ್ಕೆ ಎಳ್ಳು ನೀರು ಬಿಟ್ಟಿರುವುದು ನಿಚ್ಚಳ.
ಹಳೆಯ ನೆನಪುಗಳನ್ನು ಕೆದಕಿ ಹೃದಯ ಹೊಲಸು ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಆದರೆ ಮೆದುಳು ಬಿಟ್ಟೂ ಬಿಡದೆ ಮತ್ತೆ ನಿನ್ನಲ್ಲಿಗೇ ತಂದು ನಿಲ್ಲಿಸುತ್ತದೆ. ಯಾಕೆ ಹೀಗಾಗುತ್ತಿದೆ ಗೊತ್ತಿಲ್ಲ. ನಿನ್ನದೇ ಮಡಿಲಲ್ಲಿ ಕನಸನ್ನು ಹೀಗೆ ಸುಮ್ಮನೆ ಬಿಚ್ಚಿಡುವ ದುರಭ್ಯಾಸ ನನ್ನದು. ಅದರರ್ಥ ನಿನಗೊಬ್ಬಳಿಗೆ ಆಗುವುದು!
ಒಂದಾನೊಂದು ಕಾಲದಲ್ಲಿ..
ಹೀಗಂದರೆ ತಪ್ಪಾಗುತ್ತದೆ!
ಕೆಲವೇ ದಿನದ ಹಿಂದಿನ ಮಾತು..
ಬೆಳಗ್ಗೆ ಎದ್ದ ಮರುಕ್ಷಣ ನನಗೆ ನಿನ್ನ ನೆನಪಾಗುತ್ತಿತ್ತು. ನಿನಗೆ ನಾನು...!! ಮೊಬೈಲ್ ನೋಡಿದರೆ ಕಾಣುತ್ತಿದ್ದುದು ನಿನ್ನದೇ ಸಂದೇಶ. ಅದಕ್ಕೆ ಉತ್ತರಿಸುವುದರ ಒಳಗೆ ನೀನೇ ಮಾತು ಆರಂಭಿಸುತ್ತಿದ್ದೇ. ಹೀಗೆ ಇಬ್ಬರದ್ದೂ ದಿನದಾರಂಭವಾಗುತ್ತಿತ್ತು. ಕೆಲಸಕ್ಕೆ ಹೋಗುವ ಒತ್ತಡವಿದ್ದರೂ ಕನಿಷ್ಠ ಅರ್ಧ ಗಂಟೆಯಾದರೂ ಹರಟುತ್ತಿದ್ದೆವು. ತಿಂಡಿ ತಿಂದು ಮನೆಯಿಂದ ಹೊರ ಬೀಳುವುದರೊಳಗೆ ಮತ್ತೆ ನಿನ್ನದೇ ಫೋನ್. ಅದಿಲ್ಲದಿದ್ದರೆ ಚಾಟಿಂಗ್ ನಲ್ಲೇ ಮಾತನಾಡಿಕೊಳ್ಳುತ್ತಿದ್ದೆವು. ಮಧ್ಯಾಹ್ನ ಊಟಕ್ಕೆ ಮೊದಲು, ನಂತರ, ಸಂಜೆ ಟೀಗೂ ಮುಂಚೆ, ಕಚೇರಿ ಬಿಡುತ್ತಿದ್ದಂತೆ ನಾನು ಮರೆತರೂ ನೀನೇ ಮಾತಿಗೆಳೆಯುತ್ತಿದ್ದೆ. ರಾತ್ರಿ ಊಟವಾದ ಮೇಲೆ ಒಂದೆರಡು ತಾಸು ಯಾವ್ಯಾವುದೋ ವಿಚಾರ ಮುಂದಿಟ್ಟು ಮಾತುಕತೆ ನಡೆಸುತ್ತಿದ್ದೆವು. ಹಲವು ಬಾರಿ ನಿದ್ದೆ ಮಂಪರಿನಲ್ಲೂ ಸುದ್ದಿ ಹೇಳುತ್ತಿದ್ದುದು ನೆನಪಿದೆ.
ಈ ಮಾತುಕತೆ ಕೇವಲ ಒಂದು ದಿನದ ಹಾಡಾಗಿರಲಿಲ್ಲ. ಹೆಚ್ಚು ಕಡಿಮೆ ಅರ್ಧ ದಶಕದ ಇತಿಹಾಸವಿತ್ತು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಮ್ಮಿಬ್ಬರ ನಡುವೆ ಬಾರದ ವಿಚಾರವಿರಲಿಲ್ಲ. ಎಲ್ಲದರ ಅಳ- ಅಗಳ ಚರ್ಚೆಯಾಗುತ್ತಿತ್ತು. ಕೆಲವೊಮ್ಮೆ ಮೌನವೂ ಮಾತಾಗಿ ಹರಿಯುತ್ತಿತ್ತು.
ಅಮ್ಮನೊಂದಿಗಿನ ಜಗಳ, ತಮ್ಮನೊಂದಿಗಿನ ಗಲಾಟೆ, ಅಪ್ಪನ ಪ್ರೀತಿ, ತುಂಬು ಕುಟುಂಬದ ಎಲ್ಲವೂ ನಿನಗಿದ್ದರೂ ನನ್ನೊಂದಿಗಿನ ನಾಲ್ಕು ಮಾತು ಬಾಳಿಗೊಂದು ಅರ್ಥ ಕೊಡುತ್ತದೆ ಎನ್ನುತ್ತಿದ್ದುದು ಈಗಲೂ ಕಿವಿಯಲ್ಲಿದೆ. ಹೃದಯ ತುಂಬಿ ನಗಲು, ಬದುಕ ಭರವಸೆ ಕೈತಪ್ಪಿದಾಗ ಕಣ್ಣೀರಿಡಲು ಈ ಹೆಗಲೇ ಅಸರೆಯಾಗಿತ್ತು.
ವಿಶೇಷ ಎಂದರೆ ಇಷ್ಟು ವರ್ಷದಲ್ಲಿ ಒಮ್ಮೆಯೂ ನನಗೆ ಏನನ್ನಿಸುತ್ತಿದೆ ಎಂದು ಸೌಜನ್ಯಕ್ಕೂ ವಿಚಾರಿಸದಾಕೆ ಈಗ ಇದ್ದಕ್ಕಿದ್ದಂತೆ ಎದ್ದು ಹೋಗಿದ್ದಿ..!! ನಿನ್ನ ಬದುಕಿನಲ್ಲಿ ನಾನಿದ್ದೆ ಎಂಬ ಲವಲೇಶವೂ ಇರದಂತೆ. ನನ್ನೊಬ್ಬನ ಹೊರತು ಎಲ್ಲವೂ ಸಿಕ್ಕ ಸಂಭ್ರಮದ ಹೊನಲು ಆ ಸೌಮ್ಯ ಮೊಗದಲ್ಲಿ ತುಂಬಿದೆ. ಅಲ್ಲಿಗೆ ದಿನವಿಡೀ ಕಾಡುತ್ತಿದ್ದಾಕೆಗೆ ಈಗ ಒಮ್ಮೆಯೂ ನೆನಪಾಗದಿರಲು ಸಾಧ್ಯವೇ ಅನ್ನಿಸುತ್ತಿದೆ. ಇದರರ್ಥ ನಮ್ಮಿಬ್ಬರ ಜೀವನವೂ ನೆಟ್ಟಗಾಗಿದೆ.
ಬದುಕಲ್ಲಿ ಒಟ್ಟಾರೆಯಾಗಿ ಏನೇ ಘಟಿಸಿದರೂ ಎಲ್ಲದೂ ಒಳ್ಳೆಯದಕ್ಕೆ ಎನ್ನೋ ನಂಬಿಕೆಯೊಂದಿಗೆ ಹೆಜ್ಜೆ ಹಾಕುತ್ತಿದ್ದೇನೆ. ಎಷ್ಟೇ ಹೊಡೆತ ತಿಂದರೂ ಈ ಕಣ್ಣಲ್ಲಿ ನೀಲಾಕಾಶದ ವಿಕ್ಷಿಪ್ತತೆ ತುಂಬಿದ್ದರೆ, ಅತ್ತು ಹಗುರಾಗಲು ಹೃದಯದಿಂದ ಬರುವುದು ಕೆಂಪಗಿನ ರಕ್ತವಷ್ಟೇ.
ನನ್ನ ಬಾಳಿಂದ ಯಾಕೆ ವಿನಾಕಾರಣ ಎದ್ದು ಹೋದೆ ಅನ್ನೋದು ನಿನಗೊಬ್ಬಳಿಗೆ ಗೊತ್ತು. ಅದನ್ನೆಂದು ಕೇಳುವುದಿಲ್ಲ. ಮತ್ತಿನ್ನೆಂದೂ ನಿನ್ನ ಬಾಳಿನಲ್ಲಿ ಕಾಲಿಡುವುದಿಲ್ಲ ಎಂದುಕೊಂಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಅರ್ಥವಾಗದಿದ್ದರೂ ಹೊಡೆದ ಕೊನೇ ಮೊಳೆಯ ಉರಿ ಮಾತ್ರ ಏಳು ಜನ್ಮಕ್ಕಾಗುವಷ್ಟಿದೆ.
==============================================
#ನಂಬಿಕೆ, #ವಿಕ್ಷಿಪ್ತತೆ, #ಭರವಸೆ, #ಅಮ್ಮ, #ಅಪ್ಪ, #ಪ್ರೀತಿ, #ಕುಟುಂಬ, #ಜೀವನ, #ಮೊಬೈಲ್, #ಹೃದಯ, #ಸಂಭ್ರಮ, #ಸೌಜನ್ಯ, #ಮೊಳೆ, #ಉರಿ, #ಏಳು, #ಜನ್ಮ, #ರಕ್ತ, #ದಶಕ, #ಇತಿಹಾಸ, #ಸೌಮ್ಯ, #ರಾತ್ರಿ, #ಊಟ, #ಮಧ್ಯಾಹ್ನ, #ಫೋನ್, #ಚಾಟಿಂಗ್, #ಕೆಲಸ, #ಮೆದುಳು, #ದುರಭ್ಯಾಸ, #ಸಂದೇಶ, #ಮಾಧುರ್ಯ, #ಎಳ್ಳು, #ನೀರು, #ಕೊಲೆ, #ಪೆಟ್ಟು, #ಸಮಾಧಾನ, #ವಿವರಣೆ,
ಇದನ್ನ ಓದಿದ ನಂತರ ಮಾತು ಮೌನವಯಿತು
ReplyDeleteಇಷ್ಟೆಲ್ಲ ಆದರೂ, ಅಂಥದ್ದೇ ಮತ್ತೊಂದು ಜೀವ ಪರಿಚಯವಾದಾಗ , ಮತ್ತದೇ ತಪ್ಪನ್ನು ಮಾಡಿರುತ್ತೇವೆ.
ReplyDeleteಅವರದ್ದು ಒಂದು ರೀತಿಯ ಅಲೆಮಾರಿ ಬದುಕು.
ಮನಮುಟ್ಟುವ ಬರಹ. ಅಂತಹವರ ನೆನಪು ಅಷ್ಟು ಸುಲಭವಾಗಿ ಹೋಗುವುದಿಲ್ಲ.
ಮಿತ್ರರೇ ತುಂಬಾ ಅನುಭವಗಳನ್ನು ಕೂಡಿಟ್ಟು ಬರೆದ ಹಾಗಿದೆ
ReplyDelete