ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ' ಎಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸಗಳನ್ನು ಮಾಡು ಎಂಬಂತೆ ಈ ಜಗತ್ತಿನಲ್ಲಿ ವಾಸಿಸುತ್ತಿರುವ ಎಲ್ಲ ಪ್ರಾಣಿ-ಪಕ್ಷಿ, ಗಿಡ-ಮರ, ಕ್ರಿಮಿ-ಕೀಟ, ಗುಡ್ಡ-ಬೆಟ್ಟಗಳ ಎದುರಿನಲ್ಲಿ ಈ ಮನುಷ್ಯನನ್ನು ನಿಲ್ಲಿಸಿದಾಗ ಹೇಗಿದ್ದೀತು..? ಕೈಗಾರಿಕಾ ಕ್ರಾಂತಿಯ ನಂತರ ಮಾನವ ಪ್ರಕೃತಿಯಿಂದ ಸಂಪೂರ್ಣಾವಾಗಿ ಬೇರೆಯೇ ನಿಂತಿದ್ದಾನೋ ಎನ್ನಿಸುತ್ತದೆ. ಆದರೂ ಆ ಮಾತೆಯ ಒಂದು ಕೂಸಾದ ಮಾನವ ಉಳಿದೆಲ್ಲಾ ಜೀವಿಗಳಿಗಿಂತಲೂ ವಿಭಿನ್ನವೆ.

ಶ್ರೀಧರಾಶ್ರಮ, ವರದಹಳ್ಳಿ 
  ಈ ಪ್ರಶ್ನೆ ಉದ್ಭವಿಸಿದ್ದು, ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡಿನ ಒಂದು ಭಾಗವಾದ ಮಲೆನಾಡಿನ ತಪ್ಪಲಲ್ಲಿರುವ ಶ್ರೀ ಶ್ರಿಧರರ ತಪೋಕ್ಷೇತ್ರವಾದ ವರದಹಳ್ಳಿಯ ದುರ್ಗಾಂಬಾ ದೇವಸ್ಥಾನದ ಹಿಂಬದಿಯಲ್ಲ್ಲಿರುವ ದೇವರ ಕಾಡನ್ನು ೫೦ ಜನ ಶಿಬಿರಾರ್ಥಿಗಳು ಹೊಕ್ಕಾಗ. ಎಲ್ಲರೂ ಅಕ್ಕ ಪಕ್ಕದ ಸುಂದರ ಪರಿಸವನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿದಿಯುತ್ತಿದ್ದರು. ಮತ್ತೆ ಕೆಲವರು ಮರ, ಗಿಡ, ಬಳ್ಳಿಗಳ ವಿವಿಧ ಬಗೆಯನ್ನು ಹಿರಿಯರಿಂದ ಕೇಳಿ ಪಡೆದು ಪುಸ್ತಕದಲ್ಲಿ ದಾಖಲಿಸುತ್ತಿದ್ದರು. ಜೊತೆ ಜೊತೆಯಲ್ಲಿ ಅದರ ಎಲೆ, ಹೂವು, ಬೇರು, ಕಾಂಡ, ಹಣ್ಣು-ಕಾಯಿ ಹೀಗೆ ತಮಗೆ ಸಿಕ್ಕಿದ್ದನ್ನೆಲ್ಲಾ ಜೋಳಿಗೆಗೆ ಸೇರಿಸುತ್ತಿದ್ದರು.



 ಅಗ ನಮಗೆ ಕಂಡಿದ್ದು ಕೆಲವು ದೇವರ ಕಲ್ಲುಗಳನು ಮರವೊಂದರ ಬುಡದಲ್ಲಿತ್ತು ಪೂಜಿಸುತ್ತಿದ್ದ ಸ್ಠಳ. ಇಂಥ ದೇವರುಗಳಿಂದಲೇ ಅಲ್ಲವೇ ಪರಿಸರದ ಸಂರಕ್ಷಣೆಯನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದು ಮುಂದಿನ ಪೀಳಿಗೆಗೆ ನೀಡಿದ್ದು. ಇಂಗ್ಲೀಷ್ ಕವಿ ವರ್ಡ್ಸ್ ವರ್ತ್, 'world is too much with us' ಪದ್ಯದ "I'd rather be a pagan suckled in a cread out worn" ಎಂದು ಬರೆದಿದ್ದು. ಆ ಕಾಲದಲ್ಲಿ ತನ್ನ ಧರ್ಮದ ಪರಿಸರ ವಿರೋಧಿ ಕೃತ್ಯಗಳನ್ನು ಗಮನಿಸಿ ಈ ಸಾಲುಗಳನ್ನು ಬರೆದಿದ್ದ ಎಂದು ಓದಿದ ನೆನಪು. ಆದರೆ ನಮ್ಮವರು ಎಲ್ಲರೊಳಗೆ ತಾನೂ ಒಂದು ಚಿಕ್ಕ ಅಣು ಎಂಬಂತೆ ವರ್ತಿಸಿ ಎಲ್ಲರನ್ನೂ, ಎಲ್ಲವನ್ನೂ ಗೊಉರವಿಸುತ್ತಿದ್ದರು. ಅದರ ಫಲಶೃತಿಯೇ ಇಂದು ನಾವು ಕಾಣುವ ದೇವರ ಕಾಡುಗಳು.

  ಹಾಗೆ ಮುಂದುವರಿಯುತ್ತಿದ್ದ ನಾವು ಪರಿಸರದ ವಿಸ್ಮಯಗಳನ್ನು ಗಮನಿಸಿ, ನಮೂದಿಸಿ, ನೆನಪಿನಂಗಳಕ್ಕೆ ಕುಡಿಸುತ್ತಾ ಹೋದೆವು. ಸೂರ್ಯ ತನ್ನ ದಿನಚರಿ ಮುಗಿಸಿ ತೆರೆ ಮರೆಗೆ ಸರಿಯಲು ತವಕಿಸುತ್ತಿದ್ದುದನ್ನು ಗಮನಿಸಿದ ಅಣ್ಣ ಪೂರ್ಣಪ್ರಜ್ಞ ಬೇಳೂರು, ಪಕ್ಕದಲ್ಲಿದ್ದ ಆನೆಗುಳಿ ಸುಬ್ಬಣ್ಣರಿಗೆ ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಲು ತಿಳಿಸಿದ್ರು. ಇದಕ್ಕೆ ಕಾರಣ ನಾವು ೧೦-೧೨ ಜನ ಕೊನೆಯಲ್ಲಿದ್ದೆವು ಎನ್ನುವುದಾಗಿತ್ತು.

ನಿತ್ಯ ಹರಿದ್ವರ್ಣ ಕಾಡು
 ಭಾರಿ ನಿರೀಕ್ಷೆಯಲ್ಲಿ ಬೆಟ್ಟ ಏರುತ್ತಿದ್ದ ನನಗೆ ಸ್ವಲ್ಪ ಬೇಸರವಾಗಿತ್ತು. ಕೆಲ ಸಣ್ಣ ಪುಟ್ಟ ಪಕ್ಷಿಗಳು, ಪ್ರಾಣಿಗಳ ದರ್ಶನವಾದರೂ ಆಗಬಹುದೆಂದು ಅಂದುಕೊಂದಿದ್ದೆ. ಆದ್ರೆ ಅಪರೂಪಕ್ಕೆ ಕಾಗೆಯ ಕಲರವ, ನಮ್ಮ ಪೂರ್ವಜರಾದ ಮಂಗಗಳ ದರ್ಶನ ಬಿಟ್ಟರೆ ಬೇರ್ಯಾವುದೂ ಅಲ್ಲಿರಲಿಲ್ಲ. ವಿಚಾರಿಸಿದಾಗ ತಿಳಿದದ್ದು ಹೃದಯ ಕಲಕುವ ಸಂಗತಿ. ಈ ಮಾಘ ಮಾಸದಲ್ಲಿ ಪ್ರಾಣಿಗಳಿಗೆ ತಿನ್ನಲು ಹಣ್ಣು ಹಂಪಲುಗಳು ಬೆಳೆಯುವುದಿಲ್ಲ ಎಂದರು ಜೊತೆಗಿದ್ದ ಹಿರಿಯರೊಬ್ಬರು. ಮಾನವನಿಗೆ ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳುವ ಆತುರ, ಜೊತೆಯಲ್ಲಿ ಇತರರನ್ನು ಅಷ್ಟೇ ಮಟ್ಟಸವಾಗಿ ತುಳಿಯುವ ಕಲೆ ಅದ್ಭುತವಾಗಿ ಸಿದ್ಧಿಸಿದೆ.
ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳ 

ಅಲ್ಲಿಂದ ನಿಧಾನವಾಗಿ ಗುಡ್ಡದ ಮೇಲಿದ್ದ ಶ್ರೀಧರ ಸ್ವಾಮಿಗಳ ಸಮಾಧಿಯೆಡೆಗೆ ತೆರಳಿದ ನಾವೆಲ್ಲರೂ ಮುಸ್ಸಂಜೆಯ ತಂಗಾಳಿಯ ಜೊತೆಗಿನ ಚಳಿಯನ್ನು ಆಸ್ವಾದಿಸುತ್ತಿದ್ದೆವು. ಆ ಸಂಜೆಯ ಸುಂದರ ಮಬ್ಬುಗತ್ತಲಿನ ವಾತಾವರಣ ನಮ್ಮೆಲ್ಲರನ್ನೂ ಪ್ರಕೃತಿಯ ಮಾತೆಯ ಮಡಿಲಲ್ಲಿ ಕಳೆದುಹೋಗುವಂತೆ ಮಾಡಿತ್ತು. ಸಂಜೆ ಮುಗಿದು ಕತ್ತಲಾಗಿದ್ದನ್ನು ಗಮನಿಸಿದ ಹಿರಿಯರು ಅಲ್ಲಿಂದ ನಮ್ಮೆಲ್ಲರಿಗೂ ಹೊರಡುವಂತೆ ಒತ್ತಾಯಿಸಿದರು. ಹೀಗಾಗಿ ಒಲ್ಲದ ಮನಸ್ಸಿನಿಂದ ಸುಮಾರು 50 ಜನರಿದ್ದ ಶಿಬಿರಾರ್ಥಿಗಳು ಈ ಪುಟ್ಟ ಚಾರಣವನ್ನು ಪ್ರೀತಿಯಿಂದ ಆಸ್ವಾದಿಸಿ ಸೂರ್ಯನಿಗೊಂದು ಅಂತಿಮ ನಮನ ಸಲ್ಲಿಸಿ ನಿಧಾನವಾಗಿ ಬೆಟ್ಟದ ಮತ್ತೊಂದು ಮಗ್ಗುಲಿನಲ್ಲಿರುವ ಶ್ರೀಧರರ ಆಶ್ರಮದತ್ತ ಹೆಜ್ಜೆ ಹಾಕಿದೆವು.

'life 360' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

======================================================================== 
#features, #stories, #reviews, #travel, #tourmemories, #Reviews #ಶ್ರೀಧರಸ್ವಾಮಿ #ತಪಸ್ಸು #ಸ್ಥಳ #Varadahalli, #Vanalli, #Sagara, #Mountains, #Kannada #Magazine, #Life360 #Article, #Sun #Evening, #Treck 



Tags: #reviews#tourmemories#travel

Post a Comment

0 Comments

Skip to main content