ಪ್ರತಿ ವರ್ಷದಂತೆ ಮತ್ತೆ ವಸಂತ ಕಾಲ ಪ್ರಾರಂಭವಾಗಿದೆ. ಇದರ ಜೊತೆಯಲ್ಲೇ ಜೀವನವೂ ಮಗದೊಮ್ಮೆ ಮಗ್ಗುಲು ಹೊರಳಿಸಿದೆ. ಕಳೆದ ಕೆಲ ವರ್ಷಗಳಿಂದ ಬಾಳಿಗೊಂದು ಆಸರೆಯಾಗಿದ್ದ ಮಾಧ್ಯಮ ಜಗತ್ತಿಗೊಂದು ಪುಟ್ಟ ವಿರಾಮವನ್ನಿಟ್ಟಿದ್ದೇನೆ. ಇದರ ಜೊತೆಯಲ್ಲೇ ಒಂದಷ್ಟು ಹೊಸತನಗಳಿಗೂ ತೆರೆದುಕೊಳ್ಳುತ್ತಿದ್ದೇನೆ. ಬದುಕಿಗೆ, ಮನಸ್ಸಿಗೆ ಚೌಕಟ್ಟು ಹಾಕಿ ಬದುಕು ಅನ್ನೋ ಸಿದ್ಧ ಸೂತ್ರಕ್ಕೆ ತಿಲಾಂಜಲಿ ಇತ್ತು, ಈಗ ತಾನೇ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿರುವ ಮಗುವಿನ ಮನಸ್ಥಿತಿಯತ್ತ ಮುಂದಡಿ ಇಡುತ್ತಿದ್ದೇನೆ.
ಹಲವು ವರ್ಷಗಳಿಂದಲೂ ಯುಗಾದಿ ಹಬ್ಬದ ವೇಳೆಯಲ್ಲೇ ನನ್ನ ಜೀವನದಲ್ಲೂ ಹಲವು ಮಹತ್ವದ ಘಟನೆಗಳು ನಡೆದಿವೆ. ಅವು ಎಂದೆಂದಿಗೂ ಮನದ ಮೂಲೆಯಲ್ಲಿ ಅಜರಾಮರವಾಗಿರುತ್ತವೆ.
ಘಟನೆ-೧
ನನ್ನ ವೃತ್ತಿಯ ಆರಂಭಿಕ ದಿನಗಳವು. ೨೦೦೪ರ ಶಿರಸಿಯ ಜಾತ್ರೆಯ ಸಮಯ (ಏಪ್ರಿಲ್ ೪ ಅಂತ ನನ್ನ ನೆನಪು). ಕೆಲವೇ ತಿಂಗಳ ಹಿಂದೆ ಒಂದು ಕೆಲಸ ಬಿಟ್ಟು ಮತ್ತೊಂದು ಸೋಲಾರ್ ಕಂಪನಿಯಲ್ಲಿ ಕೆಲಸ ಪಡೆದಿದ್ದೆ. ಅಲ್ಲಿ ನಿಧಾನವಾಗಿ ಕೆಲಸ ಕಲಿಯಲಾರಂಭಿಸಿದ್ದೆ. ಅಲ್ಲಿದ್ದ ಎಲ್ಲರೂ ನನಗೆ ಸಂಸ್ಥೆಯ ಬಗ್ಗೆ, ಕೆಲಸ ಮಾಡುವ ವಿಧಾನ, ಕೆಲಸ ಮಾಡುವ ಸ್ಥಳದಲ್ಲಿ ನಡೆದುಕೊಳ್ಳುವ ರೀತಿ, ಹೀಗೆ ಸಾಕಷ್ಟನ್ನು ವಿವರವಾಗಿ ತಿಳಿಸಿಕೊಟ್ಟರು. ಜೊತೆಯಲ್ಲಿ ಒಂದಷ್ಟನ್ನು ನಾನೇ ಕಲಿತುಕೊಂಡೆ.
ಅಂದು ನಾನು ಕಲಿತ, ತಿಳಿದುಕೊಂಡ ಪಾಠಗಳು ನನ್ನ ಬದುಕಿಗೆ ತಿರುವು ನೀಡಿದೆ.
ಘಟನೆ-೨
ಅದು ೨೦೦೭ರ ಸಂಕ್ರಾಂತಿಯ ಸಮಯ. ಆಗಷ್ಟೇ ನಾನು ಶಿರಸಿಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಶಿವಮೊಗ್ಗ ಸೇರಿದ್ದೆ. ಶಿರಸಿಯಲ್ಲಿ ಶೆಲ್ ಸೋಲಾರ್ ಕಂಪನಿಗೆ ವಿದಾಯ ಹೇಳಿ ಶಿವಮೊಗ್ಗದಲ್ಲಿ Orb Energyಗೆ ಕಾಲಿಟ್ಟಿದ್ದೆ. ಜೊತೆಯಲ್ಲಿ ಹೊಸ ಅನುಭವಗಳಿಗೂ ತೆರೆದುಕೊಳ್ಳುತ್ತಿದ್ದೆ. ಹೊಸ ತಂತ್ರಜ್ಞಾನಗಳು ಕಾಣಿಸಿಕೊಳ್ಳುತ್ತಿರೋ ಕಾಲವದು. ಗಾಜಿನ ಕೊಳವೆಯಲ್ಲಿ ನೀರನ್ನು ಬಿಸಿ ಮಾಡುವ ವಿಧಾನವನ್ನು (evacuated tube solar hot water systems) ಆಗಿನ್ನೂ ಪರಿಚಯಿಸಲಾಗುತ್ತಿತ್ತು. ನನಗೂ ಅದು ಹೊಸದು. ಯುಗಾದಿಗೂ ಮೊದಲಿನ ದಿನಗಳು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ವಾಟರ್ ಹೀಟರ್ ಸರ್ವೀಸ್ ಮಾಡಲು ಹೋಗಿದ್ದೆ. ಜೊತೆಯಲ್ಲಿ ಒಡೆದು ಹೋದ ಟ್ಯೂಬ್ ಬದಲಿಸುವ ಇರಾದೆ ಇತ್ತು. ತೀರ್ಥಹಳ್ಳಿಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಊರಿಗೆ (ಹೆಸರು ಮರೆತು ಹೋಗಿದೆ) ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆಲ್ಲ ಹೋಗಿ ತಲುಪಿದ್ದೆ. ಮನೆಯ ಮಾಲೀಕರ ಬಳಿ ಮೊದಲು ಟ್ಯೂಬ್ ಬದಲಿಸಿ ಬರುವುದಾಗಿ ಹೇಳಿ ಮನೆಯ ಮಹಡಿಯ ಮೇಲೆ ಹೋದೆ. ಅದು ಮೂರು ಅಂತಸ್ತಿನ ಮನೆ. ಮೇಲೆ ಹೋದವನೇ ಮೊದಲು ಒಡೆದು ಹೋದ ಗಾಜಿನ ಕೊಳವೆ ಬದಲಿಸುವ ಉದ್ದೇಶದಿಂದ ಸೋಲಾರ್ ಸಿಸ್ಟಂನ ಒಂದು ಕೊನೆಯಲ್ಲಿದ್ದ ಟ್ಯೂಬ್ ತೆಗೆದೆ.
ಅಷ್ಟೆ..!
ಟ್ಯಾಂಕ್ ಒಳಗಿದ್ದ ಬಿಸಿ ನೀರು ನನ್ನ ಬಲಗೈ, ಮಣಿಕಟ್ಟು ಹಾಗೂ ಎಡಗೈನ ಕೆಲ ಭಾಗಗಳ ಮೇಲೆ ಬಿತ್ತು. ಅಗ ನಾನು ಸೋಲಾರ್ ಟ್ಯಾಂಕ್ ಬುಡದಲ್ಲಿದ್ದೆ. ನಾನು ನಿಂತಿದ್ದ ಜಾಗ ಮನೆಯ ಪೂರ್ವದ ಕೊನೆಯಾಗಿತ್ತು. ಅಂದೇನಾದರೂ ನನ್ನ ದೇಹದ ಸಂತುಲನ ತಪ್ಪಿದ್ದರೆ, ಮೂರು ಮಹಡಿಯಿಂದ ಕೆಳಗಿರುತ್ತಿದ್ದೆ.! ಆದರೂ ಸಾವರಿಸಿಕೊಂಡು ಒಡೆದು ಹೋಗಿದ್ದ ಟ್ಯೂಬ್ ಬದಲಿಸಿ ಕೆಲವೇ ಕ್ಷಣಗಳಲ್ಲಿ ಮೇಲಿಂದ ಕೆಳಗೆ ಇಳಿದು ಬಂದೆ. ನಾನು ತೊಟ್ಟಿದ್ದ T-shirt ಬಿಚ್ಚಿ ನೋಡಿದರೆ ಬಲಗೈ ತೋಳು, ಬಲ ಮಣಿಕಟ್ಟುಗಳ ಮೇಲೆ ಸುಟ್ಟು ಗುಳ್ಳೆಗಳು ಬಂದಿದ್ದವು. ಎಡಗೈ ತೋಳಿನ ಕೆಲವು ಭಾಗವು ಸುಟ್ಟು ಹೋಗಿತ್ತು. (ಅದರ ಕಲೆ, ನೆನಪು ಇಂದಿಗೂ ಮಾಸದೇ ಉಳಿದಿವೆ ನನ್ನ ಕೈಗಳು ಹಾಗೂ ಮನದ ಮೇಲೆ.)
ಚಿತ್ರ ನೋಡಿ ಹೆದರಿಕೊಳ್ಳಬೇಡಿ..! |
ಘಟನೆ-೩
ಕೆಲಸ ಮಾಡುತ್ತಿದ್ದವನು ಹಠಕ್ಕೆ ಬಿದ್ದು ೨೦೦೯ರಲ್ಲಿ ಎರಡನೆ ಬಾರಿಗೆ ಕಾಲೇಜು ಮೆತ್ತಿಲೇರಿದ್ದೆ. ಜೊತೆಯಲ್ಲಿ ಖಾಕಿ ಬಟ್ಟೆ ತೊಟ್ಟು ಎನ್.ಸಿ.ಸಿ.ಯಲ್ಲೂ ಕಾಣಿಸಿಕೊಂಡಿದ್ದೆ. ಅದರಿಂದಾಗಿ ನನಗೆ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ನಡೆಯುವ ಪರ್ವತಾರೋಹಣ ಶಿಬಿರಕ್ಕೆ ಹೋಗುವ ಅವಕಾಶ ಒದಗಿಬಂದಿತ್ತು. (೨೦೧೧ರ ಏಪ್ರಿಲ್ ೭- ಮೇ ೪.) ಸಿಕ್ಕಿದ ಅವಕಾಶ ಬಿಡುವುದು ಮೂರ್ಖತನದ ಪರಮಾವಧಿ ಅನ್ನೋದು ತಿಳಿದಿತ್ತು.! ಪರ್ವತಾರೋಹಣ ಶಿಬಿರವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾನು ಒಂದಷ್ಟು ತಯಾರಿ ನಡೆಸಿಕೊಂಡೇ ಹೋಗಿದ್ದೆ. ೨೮ ದಿನಗಳು ನಡೆದ ಶಿಬಿರದಲ್ಲಿ ಹೊಸ ಜಗತ್ತೇ ನನ್ನೆದುರಿತ್ತು. ಹೊಸ ಸ್ನೇಹಿತರು, ಹಿಮಾಲಯದ ವಿಭಿನ್ನ ಪರಿಸರ ಮಾನಸಿಕ ಹಾಗೂ ದೈಹಿಕವಾಗಿ ನನ್ನನ್ನು ಹುರಿಗೊಳಿಸಿತ್ತು. ಅಲ್ಲಿನ ಹೊಸತನ ಜೀವನದ ಹಲವು ಆಯಾಮಗಳನ್ನು ಪರಿಚಯಿಸಿತ್ತು. ಅಲ್ಲಿ ಕಲಿತ ಹಲವು ಪಾಠಗಳು ಇಂದಿಗೂ ನನ್ನೊಂದಿಗೆ ಹೆಜ್ಜೆ ಹಾಕುತ್ತಿದೆ.
ಅಲ್ಲಿಂದ ಮರಳಿದ ಬಳಿಕ ಎರಡು ಬಾರಿ ಹಿಮಾಲಯದ ಮಡಿಲಲ್ಲಿ ಹಲವು ದಿನಗಳನ್ನು ಕಳೆದಿದ್ದೇನೆ. ಮುಂದೆಯು ಹೋಗುವ ಆಲೋಚನೆಗಳು ಮನದಲ್ಲಿದೆ.
ಘಟನೆ-೪
ಮತ್ತೊಮ್ಮೆ ಯುಗಾದಿ ಬಂದಿದೆ. ಪ್ರತಿ ಯುಗಾದಿಯೂ ಹೊಸತನ ತರುವ ಹಬ್ಬವಾಗಿದೆ. ೨೦೧೬. ಇಷ್ಟು ದಿನ ಮಾಧ್ಯಮ ವೃತ್ತಿಯಲ್ಲಿದ್ದ ನನಗೆ ಹೊಸದೊಂದು ಕೆಲಸ ಕೈ ಬೀಸಿ ಕರೆದಿದೆ. ಹಲವು ದಿನಗಳ ಅಜ್ಞಾತವಾಸ ಮುಗಿಸಿ ಮತ್ತೆ ವೃತ್ತಿ ಜೀವನ ಬದಲಿಸುತ್ತಿದ್ದೇನೆ. ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಕೆಲಸ ಪ್ರಾರಂಭವಾಗಿದೆ. adventures fieldನತ್ತ ಹೆಜ್ಜೆ ಇಟ್ಟಾಗಿದೆ. ಅದೂ ನನಗೆ ಇಷ್ಟವಾಗುವ, ತಾಂತ್ರಿಕವಾಗಿ, ದೈಹಿಕವಾಗಿಯೂ ಗಟ್ಟಿಗೊಳಿಸುವ ವೃತ್ತಿ ಇದಾಗಿದೆ. indoor wall climbing ಮಾಡುವುದು, ಅಲ್ಲಿಗೆ ಬರುವವರಿಗೆ ಸೂಕ್ತ ಮಾಹಿತಿ ನೀಡಿ wall climbingಗೆ ಅವರನ್ನು ಉತ್ತೇಜಿಸುವುದು ನನ್ನ ಕೆಲಸ.
ಹೀಗೆ ಹಲವು ವರ್ಷಗಳಿಂದಲೂ ಯುಗಾದಿ ನನ್ನ ಜೀವನಕ್ಕೆ ವೈವಿಧ್ಯಮಯ ತಿರುವುಗಳನ್ನು ನೀಡುತ್ತಿದೆ. ಅವೆಲ್ಲವುಗಳನ್ನು ಮುಕ್ತ ಹಾಗೂ ತೆರೆದ ಮನಸ್ಸಿನಿಂದ ಒಪ್ಪಿ ಅಪ್ಪಿ ಕೊಳ್ಳುತ್ತಿದ್ದೇನೆ. ಮುಂದೆಯೂ ಹೀಗೇ ಇರುತ್ತೇನೆ ಅನ್ನೋದು ನನ್ನ ಬಯಕೆ.
ಮುಂದೆಯೂ ಮತ್ತೆ ಮತ್ತೆ ಯುಗಾದಿ ಬರುತ್ತಲೇ ಇರುತ್ತದೆ. ಅದು ಹೊಸತನವನ್ನ ಖಂಡಿತವಾಗಿಯೂ ತರುತ್ತದೆ ಅನ್ನೋದು ನನ್ನ ಆಶಯ. ಅದು ಸುಳ್ಳಾಗೋದಿಲ್ಲ..!
ಶ್ರೀಪಾದ ಸಮುದ್ರ
====================================================================
#ಪಶ್ಚಿಮಬಂಗಾಳ, #ಶಿವಮೊಗ್ಗ, #ಯುಗಾದಿ, #ಹಿಮಾಲಯ, #ಜೀವನ,
#Features, #stories, #Festival
ನಿಮ್ಮ ಆಶಯಗಳು ಈಡೇರಲಿ...
ReplyDeleteಬರುವ ನಾಳೆಗಳಲಿ ನಗುವಿನ ಪಾಲು ಅಧಿಕವಿರಲಿ...
ಯುಗಾದಿಯ ಶುಭಾಶಯಗಳು... :)
thanks..
ReplyDelete