ಸಂದರ್ಶನ : ಶ್ರೀಪಾದ ಕವಲಕೋಡು.

ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾಸಮಾರಾಧನಾ ಮಹೋತ್ಸವವು ಜ.೯ರಿಂದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಹೊಸದಿಗಂತ ಸಂದರ್ಶಿಸಿದಾಗ ತಮ್ಮ ಅಂತರಾಳ ಹಂಚಿಕೊಳ್ಳುವ ಮೂಲಕ ಭಕ್ತರಿಗೆ ಸಂದೇಶವನ್ನೂ ನೀಡಿದ್ದಾರೆ.


* ಶಿಷ್ಯರಾಗಿ ಗುರುಗಳನ್ನು ಹೇಗೆ ಸ್ಮರಿಸುತ್ತೀರಿ?
ಅವರು ಎಂದಿಗೂ ಒಂಟಿಯಾಗಿ ಇರುವವರಲ್ಲ. ಸಮಾಜದ ಎಲ್ಲರೊಂದಿಗೆ ಬೆರೆತಿರುವವರು. ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುವವರು. ಮತ್ತೊಬ್ಬರ ನೋವು ನಲಿವುಗಳಲ್ಲಿ ಸಹಭಾಗಿಯಾಗುವವರು. ಜೊತೆಯಲ್ಲಿ ತಮ್ಮ ಅಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಯನ್ನೂ ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇಂತಹ ಗುರುಗಳನ್ನು ಪಡೆದ ನಾವು, ಅವರ ಶಿಷ್ಯರಾಗಲು ಪುಣ್ಯ ಮಾಡಿದ್ದೆವು.
ಶಾಸ್ತ್ರಾಧ್ಯಯನ ಹೊರತುಪಡಿಸಿ, ಉಳಿದೆಲ್ಲವನ್ನೂ ಗುರುಗಳ ಬದುಕನ್ನು ಗಮನಿಸಿಯೇ ಕಲಿತಿದ್ದು. ಹೀಗೇ ಇರಬೇಕು ಎನ್ನುವುದು ಎಲ್ಲರಿಗೂ ಪಾಠ. ಬದುಕಿದ ರೀತಿಯಿಂದಾಗಿ ಪಾಠ ಮಾಡಿದ್ದೇ ಹೊರತು, ಮಾತುಗಳ ಮೂಲಕ ಮಾಡಿದ್ದಿಲ್ಲ. ಬದುಕಿನ ಕ್ರಮವನ್ನು ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ.

* ಗುರುಗಳೊಂದಿಗಿನ ಒಡನಾಟ ಹೇಗಿತ್ತು?
ಆರಂಭದ ೪ ವರ್ಷ ಅಧ್ಯಯನಕ್ಕಾಗಿ ಅವರೊಂದಿಗೇ ಸದಾ ಇರುತ್ತಿದ್ದೆವು. ಪ್ರಮುಖವಾಗಿ ದ್ವೈತ ವೇದಾಂತ, ಬ್ರಹ್ಮಸೂತ್ರ, ವ್ಯಾಕರಣ, ತತ್ತ್ವಶಾಸ್ತ್ರಗಳನ್ನು ಅವರಿಂದಲೇ ಕಲಿತದ್ದು. ಅದು ಮುಗಿದ ಬಳಿಕ ಕೆಲ ಜವಾಬ್ದಾರಿ ನೀಡಿದ್ದರು. ಉಡುಪಿಯಲ್ಲೇ ಹೆಚ್ಚು ಕೆಲಸ ನಿರ್ವಹಿಸುತ್ತಿದ್ದೆವು. ಅಗತ್ಯ ಬಿದ್ದಾಗ ಅವರೊಂದಿಗೇ ಇರುತ್ತಿದ್ದೆ. ಇದು ಬಿಟ್ಟರೆ, ಪರ್ಯಾಯ ಪೂರ್ವಭಾವಿಯಾಗಿ ೨ ವರ್ಷ, ಪರ್ಯಾಯದ ಕಾಲ ಮತ್ತು ಮುಗಿದ ಬಳಿಕ ೨ ವರ್ಷ ಅವರೊಂದಿಗೇ ಇರುತ್ತಿದ್ದೆವು. 

* ಅವರ ಇಷ್ಟವಾದ ಕೆಲಸ ಕಾರ್ಯಗಳೇನು?
ಪಾಠ ಪ್ರವಚನದಲ್ಲಿ ವಿಶೇಷವಾದ ಆಸಕ್ತಿ. ಸಾಮಾಜಿಕ ಸುಧಾರಣೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಮಾಜದ ಕಷ್ಟ-ಸುಖದಲ್ಲಿ ಬೆರೆತು, ಏನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಿದ್ದರು.

* ಶ್ರೀಗಳ ಪ್ರಾಣಿಪ್ರೀತಿ ಹೇಗಿತ್ತು?
ಮಾನವರು ತಮ್ಮ ನೋವು ನಲಿವುಗಳನ್ನು ಇನ್ನೊಬ್ಬರೊಂದಿಗೆ ಮಾತುಗಳಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಗಳಿಗೂ ಸಂವೇದನೆ ಇರುತ್ತದೆ. ಇವೆಲ್ಲವೂ ಪ್ರಕೃತಿಯ ಅವಿಭಾಜ್ಯ ಅಂಗ. ಯಾವುದೇ ಒಂದು ಕೊಂಡಿ ತಪ್ಪಿದರೂ ಅನಾಹುತವಾಗುತ್ತದೆ. ಹೀಗಾಗಿ ಎಲ್ಲ ಕೊಂಡಿಯನ್ನೂ ಉಳಿಸಿಕೊಳ್ಳುವಂಥದ್ದು ಮಾನವನ ಕರ್ತವ್ಯ. ಮನುಷ್ಯನಂತೆಯೇ ಪ್ರಾಣಿ ಪಕ್ಷಿಗಳೂ ಭಾವನೆಗೆ ಬೆಲೆ ಕೊಟ್ಟೇ ಬದುಕುತ್ತವೆ. ಆದ್ದರಿಂದ ನಮ್ಮ ಪೂರ್ವಿಕರು, ಋಷಿ ಮುನಿಗಳು ಬದುಕಿನ ಅಂಗವಾಗಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಜೊತೆಗೂ ಕೂಡ ಭಾವನಾತ್ಮಕವಾಗಿ ಬೆಸೆದುಕೊಂಡು ಬದುಕಬೇಕು ಎಂದಿದ್ದರು. ಇದನ್ನು ಭೂತ ಯಜ್ಞ ಎನ್ನುತ್ತಾರೆ.
ಮಾನವ ಋಣ ಪರಿಹಾರಕ್ಕಾಗಿ ೫ ಬಗೆಯ ಯಜ್ಞ ಮಾಡಬೇಕು. ಭಗವಂತನ ಋಣ ಪರಿಹಾರಕ್ಕಾಗಿ ಬ್ರಹ್ಮ ಯಜ್ಞ, ಋಷಿಗಳ ಋಣ ಪರಿಹರಿಸಿಕೊಳ್ಳಲು ಋಷಿ ಯಜ್ಞ, ಪಿತೃ ಋಣ ಪರಿಹಾರಕ್ಕಾಗಿ ಪಿತೃ ಯಜ್ಞ, ಮನುಷ್ಯರ ಋಣ ಪರಿಹರಿಸಿಕೊಳ್ಳಲು ಮನುಷ್ಯ ಯಜ್ಞ, ಪ್ರಕೃತಿಯಲ್ಲಿರುವ ಸಮಸ್ತ ಚರಾಚರ ಜೀವಿಗಳ ಋಣ ಪರಿಹಾರಕ್ಕಾಗಿ ಭೂತ ಯಜ್ಞಗಳನ್ನು ವಿವರಿಸಿದ್ದಾರೆ. ಯತಿಗಳು ಇದಕ್ಕಾಗಿಯೇ ಇರುವ ಮಾರ್ಗದರ್ಶನದಲ್ಲಿ ನಡೆಯುತ್ತಾರೆ.

* ಗೋಶಾಲೆಯ ಕೆಲಸ-ಕಾರ್ಯಗಳು ಹೇಗಿವೆ?
ಗೋಶಾಲೆ ಮಾತ್ರವಲ್ಲ, ಅವರ ಮಾರ್ಗದರ್ಶನದಲ್ಲಿ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕೈಂಕರ್ಯಗಳು ನಡೆದುಕೊಂಡು ಹೋಗುತ್ತಿವೆ. ಎಲ್ಲ ಚಟುವಟಿಕೆಗಳೂ ಈಗಿರುವಂತೆಯೇ ಮುಂದುವರಿದು ಕೊಂಡುಹೋಗುತ್ತದೆ. ಗುರುಗಳ ಉತ್ತರಾಕಾರಿಯಾಗಿ ಅವರ ಜವಾಬ್ದಾರಿ ಹೊರುವುದು ಅನಿವಾರ್ಯ. ಮಾಡಲೇಬೇಕಾಗಿರುವ ಕರ್ತವ್ಯ. ಪ್ರತಿಯೊಂದು ಕಾರ್ಯಚಟುವಟಿಕೆಗೆ ಬೇಕಾಗಿರುವ ಸಂಸ್ಥೆ, ಟ್ರಸ್ಟ್‌ ಇತ್ಯಾದಿಯನ್ನು ಅವರೇ ಹುಟ್ಟುಹಾಕಿದ್ದಾರೆ. ಮಾರ್ಗದರ್ಶನದ ಕೆಲಸ ಮಾಡುತ್ತೇವೆ.
* ಸಾಮಾಜಿಕವಾಗಿ ಹಿರಿಯ ಸ್ವಾಮೀಜಿಗಳು ತೆರೆದುಕೊಂಡಿದ್ದರು. ಮುಂದಿನ ದಿನದಲ್ಲಿ ಅವರ ಸಾಮಾಜಿಕ ಚಟುವಟಿಕೆಗಳ ನಿರ್ವಹಣೆ ಹೇಗಿರುತ್ತದೆ?
ಅವರ ಸಾಮಾಜಿಕ ಚಟುವಟಿಕೆ ಜೊತೆಯಲ್ಲಿ ನಮ್ಮನ್ನೂ ತೊಡಗಿಸಿಕೊಳ್ಳುತ್ತಿದ್ದರು. ಸಮಾಜ ಏನು ಅಪೇಕ್ಷೆ, ನಿರೀಕ್ಷೆ ಪಡುತ್ತದೆ ಅದರಂತೆಯೇ, ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ.
ಸಮಾಜ ನಮ್ಮನ್ನು ಬಳಸಿಕೊಂಡಂತೆ, ನಮ್ಮಲ್ಲಿ ಸಾಧ್ಯವಿರುವಂಥ ಎಲ್ಲ ಕಾರ್ಯಗಳನ್ನು ಮಾಡುತ್ತೇವೆ. ಅದಕ್ಕೆ ಎಲ್ಲ ಅನುಕೂಲತೆ ಬೇಕು. ಮುಖ್ಯವಾಗಿ ಹಿರಿಯ ಸ್ವಾಮೀಜಿಗಳ ಕಾರ್ಯಚಟುವಟಿಕೆ ಮುಂದುವರಿಸಲು ನಿರಂತರ ಪ್ರಯತ್ನ ಮಾಡುತ್ತೇವೆ. ಸಮಾಜದ ಸಹಕಾರ ಬೇಕು. ಅದರೊಂದಿಗೆ ಮುನ್ನಡೆಸುವ ವಿಶ್ವಾಸವಿದೆ.
ಧಾರ್ಮಿಕ ನೇತಾರನಾಗಿ ಸಮಾಜಕ್ಕೆ ಕಾಲ ಕಾಲಕ್ಕೆ ಬೇಕಾಗಿರುವ ಸಹಕಾರವನ್ನು, ಸಮಾಜದ ಅವಶ್ಯಕತೆಗಳನ್ನು, ಸ್ಪಂದನೆಯನ್ನೂ, ಅವರ ಸುಖ-ದುಃಖದ ಜೊತೆಗೆ ತಾವು ನೇರವಾಗಿ ತೊಡಗಿಸಿಕೊಂಡಿದ್ದರಿಂದಾಗಿ ಸರ್ಕಾರ, ರಾಜಕೀಯ ನೇತಾರರು ಅವರನ್ನು ಗುರುತಿಸಿದ್ದಾರೆ. ದೇಶ ಮುನ್ನಡೆಯುವುದರಲ್ಲಿ ಪ್ರತಿ ಪ್ರಜೆಯ ಪಾಲಿದೆ. ತಮ್ಮ ಅನಿಸಿಕೆ ಮುಕ್ತವಾಗಿ ಹೇಳಲು ಅಕಾರ, ಅಂಥ ಪದ್ಧತಿಯೂ ಇದೆ. ಗುರುಗಳು ಅದನ್ನು ಮಾಡಿಕೊಂಡು ಬಂದಿದ್ದಾರೆ. ನಮ್ಮ ತಿಳಿವಳಿಕೆ, ಸಾಧ್ಯತೆಗೆ ಅನುಗುಣವಾಗಿ ಕೆಲಸ ಮುಂದುವರಿಸಿಕೊಂಡು ಹೋಗುತ್ತೇವೆ.

* ಹಿರಿಯ ಸ್ವಾಮೀಜಿಗಳ ಈಡೇರದ ಕನಸುಗಳು...?
ಕೊನೆಗೊಳ್ಳದ ಅನೇಕ ಯೋಜನೆಗಳಿವೆ. ಅಂಥದ್ದನ್ನು ಮುಂದುವರಿಸುವ ಆದೇಶ ನೀಡಿದ್ದಾರೆ. ಉಡುಪಿಯಲ್ಲಿ ೬ ವರ್ಷದ ಹಿಂದೆ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಯಲ್ಲಿ ಯುಕೆಜಿಯಿಂದ ಪ್ರಾರಂಭಿಸಿ ಉನ್ನತ ಶಿಕ್ಷಣದವರೆಗೆ ಎಲ್ಲವೂ ದೊರೆಯುವಂತಿರಬೇಕು ಎಂಬುದು ಅವರ ಆಸೆಯಾಗಿತ್ತು. ಈಗ ಪದವಿ ಪೂರ್ವ ತರಗತಿಗಳು ನಡೆಯುತ್ತಿವೆ. ಮುಂದೆ ಪದವಿ ಶಿಕ್ಷಣ ಪ್ರಾರಂಭವಾಗುತ್ತವೆ. ಸಂಸ್ಥೆ ಬೆಳೆಸುವ ಜವಾಬ್ದಾರಿ ಕೊಟ್ಟಿದ್ದಾರೆ.
ಅವರನ್ನು ಸಮಾಜ ನಾಯಕರನ್ನಾಗಿ ಒಪ್ಪಿಕೊಂಡು, ಆದೇಶ ಪರಿಪಾಲಿಸಿಕೊಂಡು ಹೋಗಿದೆ. ನಮ್ಮಲ್ಲಿಯೂ ಅದನ್ನು ಬಯಸಿದಾಗ, ಮುಂದುವರಿಸಿಕೊಂಡು ಹೋಗುತ್ತೇವೆ.

* ದಲಿತ ಕೇರಿಗೆ ಹೋಗಿದ್ದು, ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು, ಜೊತೆಯಲ್ಲಿ ಸನಾತನ ಸಂಸ್ಕೃತಿ ರಕ್ಷಣೆಗೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೆಲ್ಲ ಹೇಗೆ ಸಾಧ್ಯವಾಯಿತು?
ಅವರ ಕರ್ತೃತ್ವ ಶಕ್ತಿ, ಇಚ್ಛಾಶಕ್ತಿಯಿಂದಲೇ ಸಾಧ್ಯವಾಗಿದ್ದು. ಸಮಾಜವನ್ನು ಒಪ್ಪಿಕೊಂಡಿರುವ ಅಪ್ಪಿಕೊಂಡಿರುವ ರೀತಿಯಿಂದ ಸಾಧ್ಯವಾಗಿದ್ದು. ಅಂಥ ವ್ಯಕ್ತಿತ್ವಗಳಿಗೆ ಮಾತ್ರ ಸಾಧ್ಯವಾಗುವ ಕೆಲಸವದು. ಈತನಕ ಹೇಗೆ ನಡೆದುಕೊಂಡು ಬಂದಿದೆಯೋ ಅದೇ ರೀತಿ, ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂದು ಆದೇಶ ನೀಡಿದ್ದಾರೆ. ಅವರು ಹಾಕಿರುವ ಮಾರ್ಗದಲ್ಲೇ ನಡೆದುಕೊಂಡು ಹೋಗುತ್ತದೆ.

======================================================================
#ಪೇಜಾವರ #ಮಠಾಧೀಶ, #ವಿಶ್ವೇಶತೀರ್ಥಶ್ರೀಪಾದ, #ಸಮಾರಾಧನಾಮಹೋತ್ಸವ, #ಮಹೋತ್ಸವ, #ಸಾನಿಧ್ಯ, #ಬೆಂಗಳೂರು, #ಪೂರ್ಣಪ್ರಜ್ಞ, #ವಿದ್ಯಾಪೀಠ, #ಆವರಣ, #ಅಧೋಕ್ಷಜ, #ಮಠ #ವಿಶ್ವಪ್ರಸನ್ನತೀರ್ಥಸ್ವಾಮೀಜಿ, #ಹೊಸದಿಗಂತ, #ಸ್ವಾಮೀಜಿ, #ವ್ಯಕ್ತಿತ್ವ, #ಕರ್ತೃತ್ವಶಕ್ತಿ, #ಇಚ್ಛಾಶಕ್ತಿ, #ಸನಾತನ, #ಸಂಸ್ಕೃತಿ, #ರಕ್ಷಣೆ, #ದಲಿತಕೇರಿ, #ಇಫ್ತಾರ್_ಕೂಟ, #ಸಮಾಜ, #ಶಿಕ್ಷಣಸಂಸ್ಥೆ, #ಉನ್ನತಶಿಕ್ಷಣ, #ಸರ್ಕಾರ, #ರಾಜಕೀಯ, #ದೇಶ, #ಗುರುಗಳು, #ಧಾರ್ಮಿಕನೇತಾರ, #ಗೋಶಾಲೆ, #ಧರ್ಮ, #ಸಾಮಾಜಿಕ, #ಉತ್ತರಾಧಿಕಾರಿ, #ಟ್ರಸ್ಟ್‌, #ಪ್ರಕೃತಿ, #ಋಷಿಯಜ್ಞ, #ಪಿತೃಋಣ, #ಮುನಿಗಳು, #ಭೂತಯಜ್ಞ, #ಪರ್ಯಾಯ, #ದ್ವೈತ, #ವೇದಾಂತ, #ಬ್ರಹ್ಮಸೂತ್ರ, #ವ್ಯಾಕರಣ, #ತತ್ತ್ವಶಾಸ್ತ್ರ, #ಉಡುಪಿ, #ಅಧ್ಯಾತ್ಮಿಕ, 
Tags: #Features#review#stories

Post a Comment

5 Comments

Skip to main content