ರುದ್ರರೋಮಾಂಚಕ  

ಸಾಹಸ-ಸಾಧನೆ-ಭಾವೋಲ್ಲಾಸಗಳ

ಅಪೂರ್ವ ಸಂಗಮ



ಎವರೆಸ್ಟ್ ಮೇಲೆ ನೂರಾರು ಪರ್ವತಾರೋಹಿಗಳು ಹತ್ತಿಳಿದಿದ್ದರೂ ಇತಿಹಾಸದ ನೆನಪಿನಲ್ಲಿ ಅಚ್ಚಳಿಯದೇ ಉಳಿದಿರುವುದು 1996 ಮೌಂಟ್ ಎವರೆಸ್ಟ್ ಡಿಸಾಸ್ಟರ್. ಪರ್ವತಾರೋಹಣದ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡು ಚಂಡಮಾರುತದ ಪರಿಣಾಮದಿಂದಾಗಿ ವಿಶ್ವದ ಅತಿ ಎತ್ತರದ ಪರ್ವತದ ಮೇಲೂ ಪ್ರತಿಕೂಲ ವಾತಾವರಣವೇರ್ಪಡುತ್ತದೆ. ವೇಳೆಗೆ ಚಾರಣದ ಅಂತಿಮ ಚರಣದಲ್ಲಿದ್ದ ಪರ್ವತಾರೋಹಿಗಳಲ್ಲಿ 15 ಜನ ಸಾವಿಗೀಡಾಗುತ್ತಾರೆ. ಇಂದಿಗೂ ಇದನ್ನು ಎವರೆಸ್ಟ್ ಇತಿಹಾಸದಲ್ಲಿ ಕೆಟ್ಟ ವರ್ಷ ಎಂದೇ ಹೇಳುತ್ತಾರೆ. ಇದೇ ಕಥೆ ಆಧರಿಸಿದ ಹಾಲಿವುಡ್ ಮೂವಿಎವರೆಸ್ಟ್. ನಿರ್ದೇಶಕ ಬಾಲ್ಟಸಾರ್ ಕೂರ್ಮಕೂರ್ ಕೈಲಿ ಅರಳಿದ ಸಾಹಸ, ರೊಮಾಂಚನಕಾರಿ 3ಡಿ ಚಿತ್ರ ತೆರೆಗೆ ಬಂದಿದೆ. ವಿಶ್ವದೆಲ್ಲೆ ಚಿತ್ರಕ್ಕೆ ವಿಭಿನ್ನ ಪ್ರತಿಕ್ರಿಯೆ ಲಭ್ಯವಾಗಿದ್ದರೂ ಒಮ್ಮೆ ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜವೇ ಬೇರೆ.

ಎವರೆಸ್ಟ್ ಚಿತ್ರದ still 
   'ಎವರೆಸ್ಟ್'.. ವಿಶ್ವದ ಅತಿ ಎತ್ತರದ ಪರ್ವತ (8848 ಮೀ. ಅಥವಾ 29,029 ಅಡಿಗಳು). ಪರ್ವತವನ್ನ 1953ರಲ್ಲಿ ಮೊದಲ ಬಾರಿಗೆ ಎಡ್ಮಂಡ್ ಹಿಲರಿ ಹಾಗೂ ತೇನ್ಸಿಂಗ್ ನೋರ್ಗೆ ಆರೋಹಣ ಮಾಡಿದ ಬಳಿಕ ಸಾವಿರಾರು ಪರ್ವತಾರೋಹಿಗಳು ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಇದರಲ್ಲಿ ಕೇವಲ ನೂರಾರು ಮಂದಿ ಮಾತ್ರ ಯಶಸ್ಸು ಕಂಡಿದ್ದಾರೆ. ಸಾಹಸದಲ್ಲಿ ಪ್ರಾಣ ಕಳೆದುಕೊಂಡವರಿಗೂ ಲೆಕ್ಕವಿಲ್ಲ. ಹೀಗೆ ಪರ್ವತದ ಮೇಲೆ ಮೃತಪಟ್ಟ ಹಲವರ ದೇಹಗಳು ಇಂದಿಗೂ ಸಿಕ್ಕಿಲ್ಲ. ಯಾಕಂದ್ರೆಎವರೆಸ್ಟ್ ಎಕ್ಸ್ಪೆಡೀಷನ್ಅನ್ನೋದು ಸಾವಿನ ಬೆನ್ನೇರಿ ಸಾಗುವ ಸಾಧನೆ! ಅಲ್ಲಿ ಎಲ್ಲವೂ ಇದೆ. ಆದರೆ ಯಾವುದೂ ಇಲ್ಲ. ಒಂದು ಸಣ್ಣ ತಪ್ಪು ಹೆಜ್ಜೆ, ತೀರ್ಮಾನ, ಕ್ಷಣಿಕ ನಿರ್ಲಕ್ಷ್ಯ (margin of error) ಕೂಡ ಪರ್ವತಾರೋಹಿಗಳನ್ನ ಮತ್ತೆಂದೂ ಬಾರದ ಲೋಕಕ್ಕೆ ಕರೆದೊಯ್ಯುತ್ತದೆ. ಆದರೂ ಜಗದೆಲ್ಲೆಡೆಯ ಚಾರಣಿಗರ ಅಂತಿಮ ಗುರಿ ಒಂದೆ, ಅದೇಎವರೆಸ್ಟ್.

   1996ರಲ್ಲಿ ನಡೆದ ಡಿಸಾಸ್ಟರಸ್ ಇನ್ಸಿಡೆಂಟ್ ಇಟ್ಟುಕೊಂಡು ತೆರೆಕಂಡ ಎವರೆಸ್ಟ್ ಚಿತ್ರದಲ್ಲಿ ಹಾಲಿವುಡ್ ಘಟಾನುಘಟಿ ನಟರ ದಂಡೇ ಇದೆ. ಜಾಸನ್ ಕ್ಲಾರ್ಕ್, ಜೋಶ್ ಬ್ರೋಲಿನ್, ಜಾನ್ ಹಾವ್ಕೇಸ್, ರಾಬಿನ್ ರೈಟ್, ಮಿಚೆಲ್ ಕೆಲ್ಲಿ, ಸ್ಯಾಮ್ ವರ್ಥಿಂಗ್ಟನ್, ಎಮಿಲಿ ವ್ಯಾಟ್ಸನ್, ಜಾಕ್ ಗೈಲೆನ್ಹಾಲ್ ಹಾಗೂ ಕೈರಾ ನೈಟ್ಲೇ ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನ ವಿಲಿಯಂ ನಿಕೋಲ್ಸನ್, ಸಿಮೋನಿ ಬೌಫೋಯ್ ಬರೆದಿದ್ದಾರೆ. ಡೇರಿಯೋ ಮಾರಿಯನೆಲ್ಲಿ ಸಂಗೀತ ನಿರ್ದೇಶನ ಹಾಗೂ ಸಂಯೋಜನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎವರೆಸ್ಟ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಹಾಗೂ ಸೌಂಡ್ ಎಫೆಕ್ಟ್ ಹೈಲೈಟ್. ಪರ್ವತದ ಹಲವು ಸೂಕ್ಷ್ಮಗಳನ್ನು ತಮ್ಮ ಕ್ಯಾಮೆರಾ ಮೂಲಕ ಸಾಲ್ವಟೋರೆ ಟೊಟಿನೋ ಕಟ್ಟಿಕೊಟ್ಟಿದ್ದಾರೆ.

   1990 ದಶಕದಲ್ಲಿ ಎವರೆಸ್ಟ್ ಪರ್ವತವನ್ನು ಹತ್ತುವುದು ಉದ್ಯಮದ ರೀತಿಯಲ್ಲಿ ಮಾರ್ಪಾಡಾಗಿತ್ತು. ಹಣ ಕೊಟ್ಟರೆ ಅನುಭವಿ ಪರ್ವತಾರೋಹಿಗಳು ಎಂಥವರನ್ನು ಬೇಕಾದರೂ ಸಮಿಟ್ ಮಾಡಿಸುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಅದಕ್ಕೆ ಉದಾಹರಣೆಯೇನೋ ಎಂಬಂತೆ ಚಿತ್ರ ಮೂಡಿಬಂದಿದೆ

   1996ರಲ್ಲಿ ನ್ಯೂಜಿಲೆಂಡ್ ಮೂಲದ 35 ವರ್ಷದ ರಾಬ್ ಹಾಲ್ಸ್ (ಜಾಸನ್ ಕ್ಲಾರ್ಕ್) ತನ್ನ ಅಡ್ವೆಂಚರ್ ಕನ್ಸಲ್ಟಂಟ್ಸ್ ಟೀಂ ಜೊತೆ ಹಿಮಾಲಯದ ಎವರೆಸ್ಟ್ ಪರ್ವತವನ್ನು ಏರುವ ಪ್ಲ್ಯಾನ್ ಮಾಡುತ್ತಾನೆ. ಈತನಿಗೆ ಬೆಕ್ ವೆದರ್ಸ್ (ಜೋಶ್ ಬ್ರೋಲಿನ್), ಡಗ್ ಹಾನ್ಸೆನ್ (ಜಾನ್ ಹಾವ್ಕೇಸ್), ಜಾನ್ ಕ್ರಾಕೌರ್ (ಮಿಚೆಲ್ ಕೆಲ್ಲಿ) ಜೊತೆಯಾಗುತ್ತಾರೆ. ಎವರೆಸ್ಟ್ ಬೇಸ್ಕ್ಯಾಂಪ್ಗೆ ಬರುವ ವೇಳೆಗೆಲ್ಲ ಮೇ 10ರಂದು ವಿಶ್ವದ ಅತಿ ಎತ್ತರದ ಪರ್ವತದ ತುದಿಯಲ್ಲಿರಬೇಕೆನ್ನುವ ತನ್ನ ಮನದಿಂಗಿತವನ್ನು ಟೀಮ್ಮೇಟ್ಗಳ ಜೊತೆ ಹಂಚಿಕೊಂಡಿರುತ್ತಾನೆ. ಇದಕ್ಕೆ ಅವರೆಲ್ಲರೂ ಒಪ್ಪಿರುತ್ತಾರೆ. ಸುಮರು ಎರಡು ತಿಂಗಳು ಕಾಲ ನಡೆಯುವ ಎಕ್ಸ್ಪೆಡೀಷನ್ಗೂ ಮೊದಲು ರಾಬ್ ಐದು ಬಾರಿ ಎವರೆಸ್ಟ್ ಸಮಿಟ್ ಮಾಡಿದ್ದ. ಇದೇ ಸಮಯದಲ್ಲಿ ಆತನ ಪತ್ನಿ ಜಾನ್ ಅರ್ನಾಲ್ಡ್ (ಕೈರಾ ನೈಟ್ಲೇ) ಏಳು ತಿಂಗಳ ಗರ್ಭಿಣಿಯಾಗಿರುತ್ತಾಳೆ. (ಮೊದಲು ಹೆಣ್ಣು ಮಗುವೇ ಹುಟ್ಟುತ್ತದೆ. ಅದಕ್ಕೆ ಸಾರಾ ಎಂದೇ ಹೆಸರಿಡಬೇಕೆಂದು ರಾಬ್ ಆಸೆಪಟ್ಟಿರುತ್ತಾನೆ. ಅದನ್ನೇ ಪ್ರತಿಬಾರಿ ಆಕೆಯೊಂದಿಗೆ ಮಾತನಾಡಿದಾಗಲೂ ಹೇಳುತ್ತಿರುತ್ತಾನೆ. ಜೊತೆಯಲ್ಲಿ ತಾನು, ಪತ್ನಿ ಅರ್ನಾಲ್ಡ್ ಹಾಗೂ ಮಗಳು ಸಾರಾ ಜೊತೆಗೂಡಿ ಎವರೆಸ್ಟ್ ಏರುವ ಕನಸನ್ನೂ ಪತ್ನಿಯೊಂದಿಗೆ ಹಂಚಿಕೊಂಡಿರುತ್ತಾನೆ.) 

   ಬೇಸ್ ಕ್ಯಾಂಪ್ಗೆ ರಾಬ್ ಹಾಗೂ ಆತನ ತಂಡ ಬರುವ ವೇಳೆಗಾಗಲೇ ಮತ್ತೊಂದು ತಂಡ ಅಮೆರಿಕ ಮೂಲದ 40ವರ್ಷದ ಸ್ಕಾಟ್ ಫಿಷರ್ ನೇತೃತ್ವದಲ್ಲಿ ಬೀಡುಬಿಟ್ಟಿರುತ್ತದೆ. ಸ್ಕಾಟ್ ಸಹ ಲೋತ್ಸೆ, ಕೆ2, ಎವರೆಸ್ಟ್ ಸೇರಿದಂತೆ ಹಲವು ಪರ್ವತಗಳನ್ನು ಹತ್ತಿದ ಅನುಭವ ಹೊಂದಿರುತ್ತಾನೆ.

   ಬೇಸ್ಕ್ಯಾಂಪ್ನಲ್ಲಿ ರಾಬ್, ಮತ್ತೊಬ್ಬ ಟೀಂ ಲೀಡರ್ ಆಗಿರುವ ಸ್ಕಾಟ್ ಬಳಿ ಬಂದು ಎರಡೂ ತಂಡಗಳು ಒಟ್ಟಾಗಿ ಪರ್ವತ ಹತ್ತಿದೆ ಇಬ್ಬರಿಗೂ ಸಹಕಾರಿಯಾಗುತ್ತದೆ. ರೋಪ್ ಫಿಕ್ಸ್ ಮಾಡುವುದು, ಕ್ಲೈಂಬಿಂಗ್, ಸೇರಿದಂತೆ ಎಕ್ಸ್ಪೆಡೀಷನ್ ಪ್ರತಿಯೊಂದು ಹಂತದಲ್ಲೂ ನೆರವಾಗಬಹುದು ಎಂಬ ತನ್ನ ಉದ್ದೇಶವನ್ನು ವಿವರಿಸುತ್ತಾನೆ. ಇದಕ್ಕೆ ಒಪ್ಪುವ ಸ್ಕಾಟ್, ರಾಬ್ ಎಂಡ್ ಟೀಂ ಜೊತೆ ಸೇರಿ ಪರ್ವತಾರೋಹಣ ಮುಂದುವರಿಸುತ್ತಾನೆ

   ಎವರೆಸ್ಟ್ ನಾಲ್ಕು ಕ್ಯಾಂಪ್ಗಳನ್ನು ಸುರಕ್ಷಿತವಾಗಿ ತಲುಪುವ ಎರಡೂ ತಂಡದ ಸದಸ್ಯರು ಅಲ್ಲಿಂದ ಮೇ 10 ದಿನ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪರ್ವತದ ಸಮಿಟ್ಗೆ ಪ್ಲ್ಯಾನ್ ಮಾಡಿ ಹೊರಡುತ್ತಾರೆ. (ಮಧ್ಯಾಹ್ನ 2 ಗಂಟೆಯೊಳಗೆಲ್ಲ ಎವರೆಸ್ಟ್ ತುದಿಗೆ ಹೋಗಿ ವಾಪಾಸ್ ಬರಬೇಕಾದ ಅನಿವಾರ್ಯತೆ ಇದೆ. ಬಳಿಕ ಯಾವುದೇ ಕ್ಷಣದಲ್ಲಿ ಅಲ್ಲಿನ ಹವಾಮಾನ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ.) ಇದರಲ್ಲಿ ಒಂದು ತಂಡ ಹಿಲರಿ ಪಾಯಿಂಟ್ ಮೂಲಕ ಮೇಲಕ್ಕೆ ಹೋಗುವಾಗ ಫಿಕ್ಸ್ ರೋಪ್ ಕೊರತೆಯಿಂದ ತೊಂದರೆಗೆ ಸಿಲುಕುತ್ತದೆ. ಮತ್ತೊಂದೆಡೆ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿ ಪರ್ವತಾರೋಹಿಗಳು ಎದುರಿಸುವ ಕಷ್ಟಗಳನ್ನು ಮನೋಜ್ಞವಾಗಿ ನಿರ್ದೇಶಕರು ತೋರಿಸಿದ್ದಾರೆ. ಇದಲ್ಲದೆ ಕೋಕ್ಲೈಂಬರ್ ಮಾಡುವ ತಪ್ಪಿಗೆ ಇಡೀ ತಂಡಕ್ಕಾಗುವ ಸಂಕಟ, ಹಿಮಾಲಯದಲ್ಲಿ ಎರುದಾಗುವ ಹ್ಯಾಪೋ ಹಾಗೂ ಹ್ಯಾಕೋ, ಮೌಂಟೇನ್ ಮ್ಯಾಡ್ನೆಸ್, ಕೋಲ್ಡ್ ಬ್ಲೈಂಡ್ನೆಸ್, ಹೀಗೆ ಹಲವು ಗಂಭೀರ ತೊಂದರೆಗಳು ಇಲ್ಲಿ ಕಾಣಿಸುತ್ತದೆ.

   ಇದರ ಜೊತೆಯಲ್ಲಿ ತಡವಾಗಿ ಸಮಿಟ್ ಮಾಡುವುದರಿಂದ 8000 ಮೀ.ಗಿಂತ ಎತ್ತರದ ಪರ್ವತಗಳಲ್ಲಿ ಮಧ್ಯಾಹ್ನದ ಬಳಿಕ ಯಾವುದೇ ಕ್ಷಣದಲ್ಲಾದರೂ ಹವಾಮಾನ ಬದಲಾಗುತ್ತದೆ. ವೇಗವಾಗಿ ಬೀಸುವ ಗಾಳಿ, ಹಿಮಪಾತ, ಬಿರುಗಾಳಿ, ಅವಲಾಂಚ್ ಮೊದಲಾದವು ಅಲ್ಲಿ ಕಾಮನ್. ಹೀಗಾಗಿಯೇ ಎವರೆಸ್ಟ್ ಹತ್ತುವಾಗ ಪರ್ವತಾರೋಹಿಯ ದೇಹ ನಿಜವಾಗಿಯೂ ಸಾವಿನ ಕಡೆ ಹೆಜ್ಜೆಹಾಕುತ್ತಿರುತ್ತದೆ.

   ಇದಷ್ಟು ಪರ್ವತಾರೋಹಣ ಹಾಗೂ ಅವರ ತೊಂದರೆಗಳಾದರೆ ಇದಕ್ಕಿಂತ ಹೆಚ್ಚಿನ ಕಷ್ಟವನ್ನು (ಮಾನಸಿಕ ತೊಳಲಾಟ)ಯನ್ನು ಚಾರಣಿಗರ ಕುಟುಂಬವು ಅನುಭವಿಸುತ್ತಿರುತ್ತದೆ. ಅದೂ ಚಿತ್ರದ ಹೈಲೈಟ್. ಒಂದೆಡೆ ತನ್ನ ಗಂಡ ಸಾವಿನ ಬಾಗಿಲು ತಟ್ಟುತ್ತಿದ್ದರೆ ಆತನನ್ನು ಮತ್ತೆ ನೋಡುತ್ತೇನೆ ಎಂಬ ಧೈರ್ಯವನ್ನೇ ಕಳೆದುಕೊಂಡ ಪತ್ನಿ ಪತಿಗೆ ಧೈರ್ಯ ಹೇಳಿ ಬದುಕಿಸಲು ಪ್ರಯತ್ನಿಸುವುದು, ಕೋಲ್ಡ್ ಬ್ಲೈಂಡ್ನೆಸ್ನಿಂದ ಕಣ್ಣಿನ ದೃಷ್ಟಿ ಕಳೆದುಕೊಂಡು ಪರ್ವತದ ಮಡಿಲಲ್ಲಿ ಅನ್ನಾಹಾರ ಬಿಟ್ಟು ಅನಾಥ ಶವದಂತೆ ಎರಡು ದಿನ ಕಳೆದು ಬರುವ ಪತಿಗೆ ಅಮೆರಿಕ ದೂತಾವಾಸದ ಸಹಕಾರದಿಂದ ಹೆಲಿಕಾಫ್ಟರ್ ಕಳುಹಿಸಿ ತನ್ನ ಗಂಡನನ್ನು ಬದುಕಿಸುವ ಪತ್ನಿ, ಕ್ಷಣಕ್ಷಣಕ್ಕೂ ಹವಾಮಾನದ ವರದಿ ನೀಡುವ ಬೇಸ್ಕ್ಯಾಂಪ್ ಸಹಾಯಕರು, ಹೀಗೆ ಹಲವರು ಅನ್ಸಂಗ್ ಹಿರೋಗಳು ಎವರೆಸ್ಟ್ನಂಥ ಪರ್ವತಗಳ ಎಕ್ಸ್ಪೆಡೀಷನ್ ಮಾಡುವ ಪರ್ವತಾರೋಹಿಗಳಿಗೆ ಆಪದ್ಬಾಂಧವರಿದ್ದಂತೆ ಎನ್ನವುದು ಚಿತ್ರದ ಹೈಲೈಟ್

   ಎಕ್ಸ್ಪೆಡೀಷನ್ ಎಂದರೆ ಸುಮ್ಮನೆ ಹೋಗಿ ಪರ್ವತ ಹತ್ತಿಳಿಯುವುದಲ್ಲ, ಅಲ್ಲೂ ಸಿಟ್ಟು, ಪ್ರೀತಿ, ಸಹೋದರಭಾವ, ಸೇಡು, ಮೊದಲಾದ ಮಾನವ ಸಹಜ ಗುಣಗಳನ್ನು ಕಾಣಬಹುದು. ಬೇರೆಯವರನ್ನು ಬದುಕಿಸಲು ಹೋಗಿ ತನ್ನ ಜೀವವನ್ನೇ ಬಲಿಕೊಡುವ ನಾಯಕ, ತನ್ನ ಕೈಲಿ ಪರ್ವತ ಹತ್ತುವುದು ಅಸಾಧ್ಯ ಎಂದು ತಿಳಿದಿದ್ದರೂ ಮೇಲೇರಲು ಪ್ರಯತ್ನಿಸುವ ಬೆಕ್ ವೆದರ್ಸ್, ಜೀವನದಲ್ಲಿ ಒಮ್ಮೆಯಾದರೂ ಎವರೆಸ್ಟ್ ಏರಲೇಬೇಕೆನ್ನುವ ಕನಸಿಗಾಗಿ ಪ್ರಾಣವನ್ನೇ ಲೆಕ್ಕಿಸದ ಹೋರಾಡುವ ಚಾರಣಿಗ, ಹೀಗೆ ಹಲವು ವ್ಯಕ್ತಿತ್ವಗಳು ಒಂದೆಡೆ ಕಾಣಸಿಗುತ್ತದೆ


 

========================================================================
#himalaya, #adventure, #reviews, #movie, #expedition, #english, #travel, #everest, #Life, #Emotion, #Feelings, #Love #Affection, #Temperment, 

Tags: #Expedition#Features#reviews#stories

Post a Comment

0 Comments

Skip to main content