ಅಣ್ಣ ಎಂದರೆ ಅಣ್ಣನಲ್ಲ.. ಗೆಳೆಯ ಎಂದರೆ ಗೆಳೆಯನಲ್ಲ.. ಆದರೂ ಅವೆರಡೂ ಮೀರಿದ ನಮ್ಮಿಬ್ಬರ ಬಾಂಧವ್ಯ..


   ಅವನ ಮದುವೆ ಮುಗಿಸಿ ಬಂದ ಬಳಿಕ ಅವರ ಮನೆಗೆ ಕಾಲಿಟ್ಟಿರಲಿಲ್ಲ.. (ಈಗ ಅವರಿಗೆ ಮುದ್ದಾದ ಮಗಳಿದ್ದಾಳೆ) ಅನಿವಾರ್ಯ ಕಾರಣಗಳಿಂದ.. ಕಾಲೇಜು ಮುಗಿಸಿ ಹಲವು ಕಂಪನಿಗಳ ಮೆಟ್ಟಿಲು ಹತ್ತಿಳಿದರೂ ಅವನ ಮನೆಯ ಹಾದಿ ಮಾತ್ರ ತುಳಿಯಲಾಗಿರಲಿಲ್ಲ.. ಈಗ ಮತ್ತೇನೋ ಕಾರಣಗಳಿಂದ ಆ ಪುಣ್ಯಾತ್ಮನ ಮನೆಗೆ ಹೋಗುತ್ತಿದ್ದೇನೆ.. (ಸರಿಸುಮಾರು 5 ವರ್ಷಗಳ ಬಳಿಕ)


   ಈಗಲೂ ಮಳೆಗಾಲ..

   ಮೊದಲ ಬಾರಿ ಅವನ ಮನೆಗೆ ಹೋದಾಗಲೂ ಮಳೆಗಾಲ.. ಅಂದಾಜು ಜೂನ್-ಜುಲೈ ಸಮಯ.. (2005 ಅಂತ ನನ್ನ ನೆನಪು..) ಅಂದು ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು.. ಆತನದ್ದು ಒಂದು ವಿಭಾಗವಾದರೆ ನನ್ನದು ಮತ್ತೊಂದು.. ಆದರೂ ಅದು ಹೇಗೋ ನಮ್ಮಿಬ್ಬರ ಗೆಳೆತನ ಬೆಸೆದುಕೊಂಡಿತ್ತು.. ಅವರ ಮನೆಯ ಪಕ್ಕದೂರಿನಲ್ಲಿ ಸೋಲಾರ್ ಸಿಸ್ಟಂ ಒಂದನ್ನ ಫಿಕ್ಸ್ ಮಾಡಲು ಹೋಗಿದ್ದೆವು.. (ಜೊತೆಗೆ ವಿಶ್ವನಾಥನೂ ಇದ್ದ).. ಆಗ ನನಗೆ ಮೈ ಸುಡುವಷ್ಟು ಜ್ವರ.. (ಕನಿಷ್ಠ 104 ಡಿಗ್ರಿ ಇತ್ತು) ಆ ಮಳೆಯಲ್ಲೂ ಕೆಲಸ ಮುಗಿಸಿ ಇವರ ಮನೆಗೆ ಬಂದು ಮಲಗಿದವನಿಗೆ ಬೆಳಗಾಗಿದ್ದೇ ಗೊತ್ತಿಲ್ಲ.. ಅಷ್ಟು ನಿದ್ದೆ.. (ಆಗ ಇವನೂ ಬ್ರಹ್ಮಚಾರಿಯಾಗಿದ್ದ..!) ಆದರೂ ನನಗಾಗಿ ಅದೇನೋ ಬೇಯಿಸಿ ಹಾಕಿದ್ದ.. ಹೊಟ್ಟೆ ತುಂಬಾ ತಿಂದಿದ್ದೆ.. ಡಾಕ್ಟರ್ ಬಳಿ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸಿದ್ದ.. ಆಗ ಎರಡು ದಿನ ಅವನ ಮನೆಯಲ್ಲಿ ಉಳಿದುಕೊಂಡಿದ್ದೆ..

ಹಳೆಯ ನೆನಪು.. 
   ಹೀಗೆ ನಮ್ಮಿಬ್ಬರ ಬಂಧನದ ಬೆಸುಗೆ ಪ್ರಾರಂಭವಾಗಿತ್ತು.. ಅದಾದ ಬಳಿಕ ಹಲವು ಬಾರಿ ಅವನ ಮನೆಗೆ ಹೋಗಿ ಬಂದಿದ್ದೇನೆ.. ಆದರೂ ದಶಕದ ಹಿಂದಿನ ಈ ನೆನಪು ಈಗಲೂ ಮರೆಯದಂತೆ ಹಸಿರಾಗಿದೆ ಮನದಲ್ಲಿ.. ಈಗ ಮತ್ತೆ ಅವನ ಮನೆಗೆ ಹೋಗುತ್ತಿದ್ದೇನೆ.. ಜೊತೆಯಲ್ಲಿ ಅಂದು ಸಿಕ್ಕ ಕೆಲ ಗೆಳೆಯರನ್ನ ಮತ್ತೆ ಕಾಣುವ ಹಂಬಲವೂ ಇದೆ. ಅವರೂ ಸಿಗುತ್ತಾರೆನ್ನುವ ವಿಶ್ವಾಸದಲ್ಲಿದ್ದೇನೆ.

   ಸಾಧ್ಯವಾದರೆ ಅವನದೇ ಕೈ ಅಡುಗೆಯನ್ನ ಮೆಲ್ಲುವ ಆಸೆ ಮೊಳೆಯುತ್ತಿದೆ.. ಕಾದು ನೋಡೋಣ.. ಏನಾಗುತ್ತದೆ ಅಂತ..!!

=========================================================================
#friendship, #nature, #travelmemories, #travel, #life,
Tags: #life#stories#travel

Post a Comment

0 Comments

Skip to main content