ಕಾಲ ಉರುಳುತ್ತಿದೆ, ಸಮಯ ಬದಲಾಗುತ್ತಿದೆ.. ಹಗಲಾದ ಮೇಲೆ ರಾತ್ರಿ, ಇರುಳಾದ ನಂತರ ಬೆಳಕು.. ಹೀಗೆ ದಿನಗಳು ವಾರವಾಗಿ, ವಾರ ಪಕ್ಷವಾಗಿ.. ಪಕ್ಷ ಮಾಸಗಳಾಗಿ.. ಮಾಸಗಳು ಋತುಗಳಾಗಿ.. ಋತುಗಳು ಸಂವತ್ಸರಗಳಾಗುತ್ತವೆ..
ಹೀಗೆಯೇ ಮುಂದುವರಿದು ಒಂದು ದಿನ ನಮ್ಮ ಬದುಕು ಅಳಿಯುತ್ತದೆ.
ಅಲ್ಲಿಗೆ ನಮ್ಮ ಜೀವನ ಚಕ್ರದ ಪ್ರಮುಖ ಕಾಲ ಘಟ್ಟವೊಂದು ಮುಗಿದಂತಾಗುತ್ತದೆ. ಪೃಥಿವಿಯ ಯಾವುದೋ ಭಾಗದಲ್ಲಿ ಲೀನವಾಗಿ ಮತ್ತೆಲ್ಲೋ ಉದಯಿಸುತ್ತೇವೆ.
ಈ ಹುಟ್ಟು ಮತ್ತು ಸಾವುಗಳು ಮಾನವರಿಗೆ ಪ್ರಮುಖವಾದವು. ಅದರಲ್ಲೂ ಜನನಕ್ಕೊಂದು ವಿಶೇಷ ಅರ್ಥವಿದೆ. ಉಳಿದೆಲ್ಲಾ ಪ್ರಾಣಿ ಪಕ್ಷಿಗಳಿಗಿಂತ ವಿಭಿನ್ನವಾಗಿ ಅದನ್ನು ಹಬ್ಬದ ರೀತಿಯಲ್ಲಿ ಆಚರಿಸಿಕೊಂಡೂ ಬರುತ್ತೇವೆ. 'ಜನುಮ ದಿನ' ಎಂದು ನಮ್ಮ ಬಂಧು-ಬಾಂಧವರೆಲ್ಲ ಸೇರಿ ಸಂಭ್ರಮಿಸುವುದೂ ನಡೆಯುತ್ತದೆ.
ಏನೆಲ್ಲಾ ನಡೆದರು ಮಗುವಾಗಿದ್ದಾಗಿನ ಕಾಲವೇ ಚಂದವೇನೋ..? ಏನೂ ತಿಳಿಯದ, ಕೇವಲ ನಗು ಮತ್ತು ಅಳುವಿನಿಂದಲೇ ಎಲ್ಲವನ್ನೂ ವಿವರಿಸುವ, ಹಲವನ್ನು ನಮ್ಮದೇ ಆದ ತೊದಲಿನಿಂದ ಹೇಳುತ್ತಾ, ತುಂಟಾಟ, ಗಲಾಟೆ, ಇತರರ ಮುದ್ದು-ಪ್ರೀತಿ ಪಡೆಯುತ್ತಾ ಜೀವನ ಪರಿವೆಯೇ ಇಲ್ಲದಂತೆ ನಮ್ಮಷ್ಟಕ್ಕೆ ನಮ್ಮೊಳಗೇ ನಾವಾಗಿ ಬದುಕುತ್ತಿರುತ್ತೇವೆ. ಕಷ್ಟ-ನಷ್ಟ, ದುಗುಡ-ದುಮ್ಮಾನಗಳ ಪರಿವೆ ಇಲ್ಲದೆ ದಿನ ಸಾಗುತ್ತಿರುತ್ತದೆ. ಕೇವಲ ನಾವಾಯಿತು, ನಮ್ಮ ಜಗತ್ತಾಯಿತು ಎಂಬಂತಿರುತ್ತೇವೆ. ಎಲ್ಲರೊಡಗೂಡಿ ಬಾಳುತ್ತಿರುತ್ತೇವೆ. ಒಂಟಿತನದ ಛಾಯೆ ಇಲ್ಲದೆ.
ದಿನಗಳುರುಳಿ... ಸಂವತ್ಸರಗಳಾದಂತೆ ನಮ್ಮ ಬದುಕಿನಲ್ಲೂ ಬದಲಾವಣೆಗಳಾಗಿರುತ್ತವೆ. ಮಗುವಾಗಿದ್ದವರು, ನೋಡ ನೋಡುತ್ತಿದ್ದಂತೆ ದೊಡ್ಡವರಾಗಿರುತ್ತೇವೆ. ಅದು ಕೇವಲ ದೈಹಿಕ ಬೆಳವಣಿಗೆಯಲ್ಲ, ಮಾನಸಿಕವಾಗಿಯೂ. ಮಕ್ಕಳಾಟಗಳು ನಿಂತು ಬೌದ್ಧಿಕವಾಗಿ ಯೋಚಿಸಲು ತೊಡಗುತ್ತೇವೆ.
ನನ್ನದು, ನನ್ನ ಮನೆ, ನನ್ನ ಜಾತಿ, ನನ್ನ ಧರ್ಮ, ನನ್ನ ಭಾಷೆ, ನನ್ನ ಊರು, ನನ್ನ ಕೇರಿ.. ಎಂಬ ಹಲವಾರು ಗೋಡೆಗಳು ಉದ್ಭವವಾಗುತ್ತವೆ.
ಹೀಗೆ ಬದುಕಿಗೊಂದು ಗೋಣಿ ಚೀಲ ಸುತ್ತಿ ಹುಲಿದು ಬಿಡುತ್ತೇವೆ. ಎಂದಿಗೂ ಎಂದೆಂದಿಗೂ ಅದರಾಚೆಗೆ ಇಣುಕಿ ಕೂಡ ನೋಡುವುದಿಲ್ಲ. ಅಥವಾ ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಅದರಲ್ಲಿಯೂ ಈ ಸಮಾಜ ಅಂಥ ಒಂದು ವ್ಯವಸ್ಥೆಗೆ ನಮ್ಮನ್ನು ಸಿದ್ಧಗೊಳಿಸುವುದೇ ಇಲ್ಲವೆನೋ..?
ಜೊತೆ ಜೊತೆಯಲ್ಲಿ ನಾವೂ ಸಹ ರೇಷ್ಮೆ ಹುಳುವಿನಂತೆ ನಮ್ಮ ಸುತ್ತ ಪುಟ್ಟ ಗೂಡು ಕಟ್ಟಿಕೊಂಡು ಅದರೊಳಗೆ ಬದುಕು ಸವೆಸುತ್ತೇವೆ. ಕೆಲವು ಸಲ ಅದು ಅನಿವಾರ್ಯವೋ.. ಅವಶ್ಯವೋ ತಿಳಿಯುತ್ತಿಲ್ಲ...
ಉತ್ತರಿಸುವವರ್ಯಾರು..?
0 Comments