Saturday, May 6, 2017

ಕನಸುಗಳ ಗೋರಿಯೊಳಗಿಂದ..


ನನ್ನ ಸದಾ ಕಾಡಿಸಿದಾಕೆ ನೀ..
ಹದಗೆಡುತ್ತಿದ್ದ ಬದುಕಿಗೆ ಆಸರೆಯಾದಾಕೆ ನೀ..
ಮರುಭೂಮಿಯಂತಿದ್ದ ಮನಕೆ ಸ್ವಪ್ನಗಳ ಮಳೆ ಸುರಿಸಿದಾಕೆ ನೀ.. 
ಮರಳಿನರಮನೆಗೆ ಅಡಿಪಾಯ ಹಾಕಿದಾಕೆ ನೀ..
ಮನೆ ಮನಗಳ ಎದುರು ಚಿತ್ತಾರದ ರಂಗವಲ್ಲಿ ಬಿಡಿಸಿದಾಕೆ ನೀ..
ಹೃದಯದ ಕದವ ತೆರೆದು ಜಗ ನೋಡಲು ಕಲಿಸಿದಾಕೆ ನೀ..
ಮುದುಡಿದ ಜೀವಕೆ ಪ್ರೀತಿ ಪ್ರೇಮದ ಭಾವ ವಿವರಿಸಿದಾಕೆ ನೀ..
ಗೋರಿಯೊಳಗಿದ್ದಾತನಿಗೆ ಕನಸುಗಳ ಪರಿಭಾಷೆ ಮೂಡಿಸಿದಾಕೆ ನೀ..

ಈಗ ಕಾಲ ಬದಲಾಗಿದೆಯಾ..? ಮೂಡಣದಿ ಅದೇ ಸೂರ್ಯ ಜಾವಕ್ಕೆ ಬಂದು ಬಡಿದೆಬ್ಬಿಸುತ್ತಾನೆ. ಸಂಜೆಯಾಗುತ್ತಲೇ ಪಡುವಣದಿ ನಕ್ಷತ್ರ ಮೂಡುವ ಮೊದಲೇ ಮರೆಯಾಗುತ್ತಾನೆ.
ಎಂದೆಂದಿಗು ನನಗಂತೂ ದಿನಕ್ಕೆ ಬರಿ 24ಕ್ಕೆ ಗಂಟೆ..
ನಿನಗೆ..? 

ಅಂದು ನನ್ನ ಜತೆಗಿದ್ದೆ, ಇಂದು..

ವಿರಹದಮೃತ ನೀಡಿ ಕಾಡಿಸುತ್ತಿರುವಾಕೆ ನೀ.. 
ಬದುಕಿನಾಸರೆ ಹದಗೆಡುವಂತೆ ಮಾಡಿದಾಕೆ ನೀ..
ನನಸಿನಲಿ ಮರಳ ಬಿರುಗಾಳಿಯನೇ ಎಬ್ಬಿಸಿದಾಕೆ ನೀ..
ಮರುಭೂಮಿಯರಮನೆಯ ಪಾಯವನ್ನೇ ಅಲುಗಾಡಿಸಿದಾಕೆ ನೀ..
ರಂಗವಲ್ಲಿಯ ಚಿತ್ತಾರವನೇ ಕದಡಿಕೆಡಿಸಿದಾಕೆ ನೀ.. 
ನನ್ನಂತರಾಳದಿಂದ ನಿನ್ನ ಜಗವ ಬೇರ್ಪಡಿಸಿದಾಕೆ ನೀ..
ಪ್ರೀತಿ ಪ್ರೇಮಗಳ ಭಾವ ಮರೆಸಿ ಬದುಕ ಬರಡಾಗಿಸಿದಾಕೆ ನೀ..  
ಕನಸನೆರೆದು ಬದುಕಿಸಿದಾತನನೆ ಮಸಣದೆಡೆಗೆ ಸಾಗಿಸಿದಾಕೆ ನೀ..   

ನನ್ನ ಬಾಳಿನಿಂದ ವಿಮುಖವಾಗಲು ಕಾರಣಗಳೇನೋ ನನಗೆ ತಿಳಿಯದು. ಅದರೆಲ್ಲದಕ್ಕೂ ನಿನ್ನೊಬ್ಬಳನ್ನೇ ಹೊಣೆಗಾರಳನ್ನಾಗಿ ಮಾಡೋದು ನನ್ನ ಉದ್ದೇಶವೂ ಅಲ್ಲ. ನನಗದರಲ್ಲಿ ಆಸಕ್ತಿಯೂ ಉಳಿದಿಲ್ಲ. ನಿನ್ನ ಬದುಕು ನಿನ್ನದು, ಅದಕ್ಕೆ ನೀನೇ ವಿಧಾತೃ.
ನಮ್ಮಿಬ್ಬರ ಬದುಕಿನ ಹಲವು ಘಟನೆಗಳಿಗೆ ಕಾರಣಗಳೇನೇ ಇದ್ದರೂ ನನ್ನೊಳಗೆ ಅಳಿದುಳಿದಿರುವ ನಿನ್ನ ಭಾವದೊಂದಿಗೆ ಹೀಗೇ ಒಂದಷ್ಟು ಮಾತನಾಡಿ ನನ್ನನ್ನ ನಾನೇ ಸಮಾಧಾನ ಪಡಿಸಿಕೊಳ್ಳುತ್ತಿದ್ದೇನೆ. ಈಗ ನನಗಿರೋದು ಅದೊಂದೇ ಮಾರ್ಗ...
ತಪ್ಪು ತಿಳಿಯಬೇಡ ಗೆಳತಿ..!

Thursday, March 2, 2017

ಚೌಕಟ್ಟಿನಾಚೆಗೆ..!!

ಅದೇಕೋ ಗೊತ್ತಿಲ್ಲ...

ಮರೆಯೋಣವೆಂದರೆ ಅಂಗೈ ಮೇಲಿನ ಕಲೆಯಂತೆ.. 
ನೆನಪಿಟ್ಟುಕೊಳ್ಳೋಣವೆಂದರೆ ಮುಗಿಲ ಮೇಲಿನ ಮೋಡದಂತೆ.. 
ಬಾಳಿನುದ್ದಕ್ಕೂ ಒಟ್ಟಾಗಿರೋಣವೆಂದರೆ ಬಂಗಾರದ ಜಿಂಕೆಯಂತೆ.. 
   ..ಮತ್ತೆ ಮತ್ತೆ ಕಾಡುತ್ತೀಯ!

ನನ್ನ ಬದುಕಿನಾಸರೆಯಾಗುವೆ ಅನ್ನೋ ಕನಸು ಕಂಡಿದ್ದೆ.. 
ಒಂಟಿಯಾಗಿರುವ ನೌಕೆಗೆ ನಾವಿಕನಾಗುವೆ ಅಂದುಕೊಂಡಿದ್ದೆ.. 
ನಾಳೆಗಳ ಸುಖ-ದುಃಖಗಳಿಗೆ ಹೆಗಲಾಗುವೆ ಅಂತ ತಿಳಿದುಕೊಂಡಿದ್ದೆ..  
   ..ಈಗ ಅವೆಲ್ಲವೂ ನನಸಾಗದು! 

ನಮ್ಮಿಬ್ಬರ ಪರಿಚಯ ಕೆಲವೇ ಮಾಸಗಳದ್ದಿರಬಹುದು.. 
ಹೃದಯಗಳ ಒಡನಾಟಕ್ಕೂ ಕಾಲ ಮಿತಿಯ ಚೌಕಟ್ಟು ಹಾಕಿಡಬಹುದು..  
ಪ್ರೀತಿ ಪ್ರೇಮಗಳ ಉತ್ಕಟ ಪರಿಭಾಷೆಗೊಂದು ತಾರ್ಕಿಕ ಅಂತ್ಯವಿಡಬಹುದು..  
   ..ಮನಸ್ಸಿಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ! 

ನನ್ನ ಬಾಳಿನ ಪುಟಗಳ ಸುವರ್ಣಾಕ್ಷರವು ನೀನು.. 
ಅಜರಾಮರವಾಗಿರುವ ನೆನಪುಗಳಿಗೆ ಕೊನೆಯ ತಿರುವು ನೀನು.. 
ನಿನಗೇನೂ ಅಲ್ಲದಿದ್ದರೂ, ನನಗೆ ಮಾತ್ರ ಭಾವ-ಜೀವ ಎರಡೂ ನೀನು.. 
   ..ಹೇಗೆ ಹೇಳಬೇಕೋ ತಿಳಿಯದು!

Friday, September 2, 2016

ಅಪರೂಪಕ್ಕೊಂದು ಪುಟ್ಟ ತಿರುಗಾಟ

ಅಪರೂಪಕ್ಕೆ ಇರೋ ಕೆಲಸಕ್ಕೆ ವಿರಾಮವಿಟ್ಟು ಕಾಡು ಸುತ್ತೋಕೆ ಹೋಗಿದ್ದೆ. ಅದೂ ಒಂದಿಬ್ಬರ ಜೊತೆ ಮಾತ್ರ. ಕೇವಲ ಎರಡೇ ದಿನ ತಿರುಗಾಟ ನಡೆಸಿದ್ರು ವರ್ಷಗಳಿಗಾಗೋವಷ್ಟು ನೆನಪನ್ನ ಕಟ್ಟಿಕೊಂಡೇ ಬಂದಿದ್ದೇನೆ. ಆ ಜಾಗ ನನ್ನೂರಿನ ಕಾಡಿಗಿಂತ ಹೆಚ್ಚೇನೂ ವ್ಯತ್ಯಾಸವಿಲ್ಲ..

   ಅಲ್ಲಿ ಸದಾ ಜಿಟಿಗುಡುತ್ತ ಸುರಿಯುವ ಸೋನೆ ಮಳೆ, ವರ್ಷವಿಡೀ ಹಸಿರಿನಿಂದ ಕಂಗೊಳಿಸುವ ನಿತ್ಯಹರಿದ್ವರ್ಣ ಕಾಡು, ಕಾಲಿಟ್ಟಲ್ಲಿ ಕಾಟಕೊಡುವ ಉಂಬಳ, ನಡೆದಷ್ಟೂ ಸವೆಯದ ಹಾದಿ, ಜೊತೆಗೊಬ್ಬ ಗೆಳೆಯ, ಕೈಯಲ್ಲಿ ಪುಟ್ಟ ಕ್ಯಾಮರಾ, ಇವಷ್ಟನ್ನೂ ಹಿಡಿದು ಸುತ್ತಾಡಿ ಬಂದಿದ್ದೇನೆ. ಅಲ್ಲಿನ ಒಂದಷ್ಟು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗಿಷ್ಟವಾದ ಕೆಲವು ಫೋಟೋಗಳನ್ನ ನಿಮ್ಮೆದುರಿಗಿಡುತ್ತಿದ್ದೇನೆ.

 


Saturday, May 14, 2016

ಭಾವಗಳ ಬದುಕಿಗೆ ನಿನ್ನ ಹೆಗಲೇ ನನಗಾಸರೆ..


ಅದೇಕೋ ಗೊತ್ತಿಲ್ಲ. ಏನೇ ಆದರೂ ಎಲ್ಲವನ್ನೂ ನುಂಗಿಕೊಂಡಿರುತ್ತಿದ್ದವನಿಗೆ ಈಗ ಅದೆಲ್ಲವನ್ನೂ ಹೊರಗೆಡವುವ ಆಸೆ. ಆದರೆ ಯಾರ ಬಳಿ ಹೇಳಿಕೊಳ್ಳಲಿ..? ಹೇಗೆ ವಿವರಿಸಲಿ..? ಅವರ ಕಣ್ನೋಟಗಳಿಗೆ ಏನೆಂದು ಉತ್ತರಿಸಲಿ..? ಇಂಥ ಸಾವಿರ ಪ್ರಶ್ನೆಗಳ ಮಧ್ಯೆ ಕೂಡಿ, ಕಳೆದು, ಗುಣಿಸಿ, ಭಾಗಿಸುತ್ತಾ ಸಮಯ ಹಾಳು ಮಾಡುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಮತ್ತೆ ನೆನಪಾದದ್ದು ನೀನು.

   ಅದೆಲ್ಲವಕ್ಕೂ ನೀನೇ ಸರಿಯಾದ ವ್ಯಕ್ತಿ. ಆಸರೆ ಕೂಡ. 

   ನಿನ್ನ ಎದುರು ಮನದೊಳಗಿನ ಜಂಜಡಗಳನ್ನು ವಿವರಿಸಿ ಹಗುರಾಗಲೇಬೇಕಾದ ಅನಿವಾರ್ಯತೆ ನನಗೆ. ನಿನಗೆ ಅವೆಲ್ಲವೂ ಅರ್ಥವಾಗುತ್ತಾ ಗೊತ್ತಿಲ್ಲ. ಆದರೂ ಅವೆಲ್ಲವನ್ನೂ ನಿನ್ನೊಂದಿಗೆ ಯಾಕೆ ಹೇಳುತ್ತಿದ್ದೇನೆ ಅಂತ ಮಾತ್ರ ಕೇಳಬೇಡ. ಅದನ್ನು ಕೇಳಿದರೂ ಯಾವತ್ತಿಗೂ ಉತ್ತರಿಸಲಾರೆ. ಆದರೆ ನನ್ನೆದೆಯ ಭಾವದ ಭಾರ ಇಳಿಸುವ ಹೊಣೆ ಮಾತ್ರ ನಿನ್ನದು.. ಅದು ನಿನ್ನೊಬ್ಬಳಿಗೇ ಸೇರಿದ್ದು.. 

   ನಾನು ನಾನಾಗಿರಬೇಕು ಅಂತಾದರೆ ನನ್ನೊಳಗಿನ ಮತ್ತೊಂದು ಮುಖವನ್ನು ನಿಂಗೆ ತೋರಿಸಲೇಬೇಕು. ಅದರ ಅರ್ಥ ನಾನು ಕೆಟ್ಟವನು ಅಂತಲ್ಲ. ನನಗೂ ಉಳಿದವರಂತೆ ಮನಸ್ಸಿದೆ. ಅದರೊಳಗೆ ಒಂದಷ್ಟು ಭಾವನೆಗಳಿವೆ. ಸಿಟ್ಟು, ಕೋಪ, ತಾಪ, ದುಃಖ, ನಗು, ಬೇಸರ ಹೀಗೆ ಮೊದಲಾದವೆಲ್ಲವೂ ಬಂದು ಹೋಗುತ್ತಿರುತ್ತವೆ. ಅವೆಲ್ಲವನ್ನೂ ಹೇಳಿಕೊಳ್ಳಲು ನನಗೆ ನಿನ್ನೊಬ್ಬಳ ಹೊರತು ಮತ್ಯಾರೂ ಇಲ್ಲ.! ನಿನ್ನ ಹೆಗಲೇ ನನಗಾಸರೆ. 

    ನೀನು ಈಗ ನನ್ನ ಜೊತೆಗಿಲ್ಲ ಅನ್ನೋ ವಾಸ್ತವದ ಅರಿವೂ ನನಗಿದೆ. ಅದೆಲ್ಲದರ ಹೊರತಾಗಿಯೂ ನಾನೇನೇ ಹೇಳಿ ಹಂಚಿಕೊಂಡರು ಅದು ನಿನ್ನೊಂದಿಗೆ ಮಾತ್ರ ಎಂಬುದು ನಿನಗೂ ಗೊತ್ತಿರದ ಸಂಗತಿಯೇನಲ್ಲ..!

   ಅಂದು ನೀನು ನನ್ನ ಜೊತೆಗಿದ್ದಾಗ ಇಷ್ಟವೋ ಕಷ್ಟವೋ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೆ. ನನ್ನಿಂದ ದೂರಾದ ಬಳಿಕವೂ ನನ್ನೆಡೆಗಿನ ಭಾವ ಬದಲಾಗಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ನನಗೆ. ಆದ್ದರಿಂದಲೇ ಈಗಲೂ ಅದನ್ನೇ ಮಾಡುತ್ತೀಯಾ ಅನ್ನೋ ಅಭಿಮಾನ ನನ್ನದು. 

   ಈಗ ಕಾಲ ಬದಲಾಗಿದೆ.. ದಿನಗಳು ಉರುಳಿವೆ.. ಮಹಾನದಿಯಲ್ಲೂ ಸಾಕಷ್ಟು ನೀರು ಹರಿದು ಹೋಗಿದೆ.. ನೀನೂ ಸಮಯದೊಂದಿಗೆ ಸುಧಾರಣೆ ಕಂಡಿದ್ದೀಯ. ಆದರೂ ನಾನು ಮಾತ್ರ ಅಂದು ನೀನು ಬಿಟ್ಟುಹೋದಾಗ ಹೇಗಿದ್ದೇನೋ ಈಗಲೂ ಹಾಗೇ ಉಳಿದಿದ್ದೇನೆ. ಅದೂ ಮತ್ತೊಂದು ಹೆಗಲಿನಾಸರೆಗಾಗಿ ಕಾದು..!!


Saturday, April 9, 2016

ಹಳೆಯ ನೆನಪು.. ಹೊಸ ಪಯಣ..


ಪ್ರತಿ ವರ್ಷದಂತೆ ಮತ್ತೆ ವಸಂತ ಕಾಲ ಪ್ರಾರಂಭವಾಗಿದೆ. ಇದರ ಜೊತೆಯಲ್ಲೇ ಜೀವನವೂ ಮಗದೊಮ್ಮೆ ಮಗ್ಗುಲು ಹೊರಳಿಸಿದೆ. ಕಳೆದ ಕೆಲ ವರ್ಷಗಳಿಂದ ಬಾಳಿಗೊಂದು ಆಸರೆಯಾಗಿದ್ದ ಮಾಧ್ಯಮ  ಜಗತ್ತಿಗೊಂದು ಪುಟ್ಟ ವಿರಾಮವನ್ನಿಟ್ಟಿದ್ದೇನೆ. ಇದರ ಜೊತೆಯಲ್ಲೇ ಒಂದಷ್ಟು ಹೊಸತನಗಳಿಗೂ ತೆರೆದುಕೊಳ್ಳುತ್ತಿದ್ದೇನೆ. ಬದುಕಿಗೆ, ಮನಸ್ಸಿಗೆ ಚೌಕಟ್ಟು ಹಾಕಿ ಬದುಕು ಅನ್ನೋ ಸಿದ್ಧ ಸೂತ್ರಕ್ಕೆ ತಿಲಾಂಜಲಿ ಇತ್ತು, ಈಗ ತಾನೇ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿರುವ ಮಗುವಿನ ಮನಸ್ಥಿತಿಯತ್ತ ಮುಂದಡಿ ಇಡುತ್ತಿದ್ದೇನೆ. 

   ಹಲವು ವರ್ಷಗಳಿಂದಲೂ ಯುಗಾದಿ ಹಬ್ಬದ ವೇಳೆಯಲ್ಲೇ ನನ್ನ ಜೀವನದಲ್ಲೂ ಹಲವು ಮಹತ್ವದ ಘಟನೆಗಳು ನಡೆದಿವೆ. ಅವು ಎಂದೆಂದಿಗೂ ಮನದ ಮೂಲೆಯಲ್ಲಿ ಅಜರಾಮರವಾಗಿರುತ್ತವೆ. 


ಘಟನೆ-೧
   ನನ್ನ ವೃತ್ತಿಯ ಆರಂಭಿಕ ದಿನಗಳವು. ೨೦೦೪ರ ಶಿರಸಿಯ ಜಾತ್ರೆಯ ಸಮಯ (ಏಪ್ರಿಲ್ ೪ ಅಂತ ನನ್ನ ನೆನಪು). ಕೆಲವೇ ತಿಂಗಳ ಹಿಂದೆ ಒಂದು ಕೆಲಸ ಬಿಟ್ಟು ಮತ್ತೊಂದು ಸೋಲಾರ್ ಕಂಪನಿಯಲ್ಲಿ ಕೆಲಸ ಪಡೆದಿದ್ದೆ. ಅಲ್ಲಿ ನಿಧಾನವಾಗಿ ಕೆಲಸ ಕಲಿಯಲಾರಂಭಿಸಿದ್ದೆ. ಅಲ್ಲಿದ್ದ ಎಲ್ಲರೂ ನನಗೆ ಸಂಸ್ಥೆಯ ಬಗ್ಗೆ, ಕೆಲಸ ಮಾಡುವ ವಿಧಾನ, ಕೆಲಸ ಮಾಡುವ ಸ್ಥಳದಲ್ಲಿ ನಡೆದುಕೊಳ್ಳುವ ರೀತಿ, ಹೀಗೆ ಸಾಕಷ್ಟನ್ನು ವಿವರವಾಗಿ ತಿಳಿಸಿಕೊಟ್ಟರು. ಜೊತೆಯಲ್ಲಿ ಒಂದಷ್ಟನ್ನು ನಾನೇ ಕಲಿತುಕೊಂಡೆ.  

  ಅಂದು ನಾನು ಕಲಿತ, ತಿಳಿದುಕೊಂಡ ಪಾಠಗಳು ನನ್ನ ಬದುಕಿಗೆ ತಿರುವು ನೀಡಿದೆ.

ಘಟನೆ-೨
   ಅದು ೨೦೦೭ರ ಸಂಕ್ರಾಂತಿಯ ಸಮಯ. ಆಗಷ್ಟೇ ನಾನು ಶಿರಸಿಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಶಿವಮೊಗ್ಗ ಸೇರಿದ್ದೆ. ಶಿರಸಿಯಲ್ಲಿ ಶೆಲ್ ಸೋಲಾರ್ ಕಂಪನಿಗೆ ವಿದಾಯ ಹೇಳಿ ಶಿವಮೊಗ್ಗದಲ್ಲಿ Orb Energyಗೆ ಕಾಲಿಟ್ಟಿದ್ದೆ. ಜೊತೆಯಲ್ಲಿ ಹೊಸ ಅನುಭವಗಳಿಗೂ ತೆರೆದುಕೊಳ್ಳುತ್ತಿದ್ದೆ. ಹೊಸ ತಂತ್ರಜ್ಞಾನಗಳು ಕಾಣಿಸಿಕೊಳ್ಳುತ್ತಿರೋ ಕಾಲವದು. ಗಾಜಿನ ಕೊಳವೆಯಲ್ಲಿ ನೀರನ್ನು ಬಿಸಿ ಮಾಡುವ ವಿಧಾನವನ್ನು (evacuated tube solar hot water systems) ಆಗಿನ್ನೂ ಪರಿಚಯಿಸಲಾಗುತ್ತಿತ್ತು. ನನಗೂ ಅದು ಹೊಸದು. 

   ಯುಗಾದಿಗೂ ಮೊದಲಿನ ದಿನಗಳು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ವಾಟರ್ ಹೀಟರ್ ಸರ್ವೀಸ್ ಮಾಡಲು ಹೋಗಿದ್ದೆ. ಜೊತೆಯಲ್ಲಿ ಒಡೆದು ಹೋದ ಟ್ಯೂಬ್ ಬದಲಿಸುವ ಇರಾದೆ ಇತ್ತು. ತೀರ್ಥಹಳ್ಳಿಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಊರಿಗೆ (ಹೆಸರು ಮರೆತು ಹೋಗಿದೆ) ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆಲ್ಲ ಹೋಗಿ ತಲುಪಿದ್ದೆ. ಮನೆಯ ಮಾಲೀಕರ ಬಳಿ ಮೊದಲು ಟ್ಯೂಬ್ ಬದಲಿಸಿ ಬರುವುದಾಗಿ ಹೇಳಿ ಮನೆಯ ಮಹಡಿಯ ಮೇಲೆ ಹೋದೆ. ಅದು ಮೂರು ಅಂತಸ್ತಿನ ಮನೆ. ಮೇಲೆ ಹೋದವನೇ ಮೊದಲು ಒಡೆದು ಹೋದ ಗಾಜಿನ ಕೊಳವೆ ಬದಲಿಸುವ ಉದ್ದೇಶದಿಂದ ಸೋಲಾರ್ ಸಿಸ್ಟಂನ  ಒಂದು ಕೊನೆಯಲ್ಲಿದ್ದ ಟ್ಯೂಬ್ ತೆಗೆದೆ. 

   ಅಷ್ಟೆ..! 

   ಟ್ಯಾಂಕ್ ಒಳಗಿದ್ದ ಬಿಸಿ ನೀರು ನನ್ನ ಬಲಗೈ, ಮಣಿಕಟ್ಟು ಹಾಗೂ ಎಡಗೈನ ಕೆಲ ಭಾಗಗಳ ಮೇಲೆ ಬಿತ್ತು. ಅಗ ನಾನು ಸೋಲಾರ್ ಟ್ಯಾಂಕ್ ಬುಡದಲ್ಲಿದ್ದೆ. ನಾನು ನಿಂತಿದ್ದ ಜಾಗ ಮನೆಯ ಪೂರ್ವದ ಕೊನೆಯಾಗಿತ್ತು. ಅಂದೇನಾದರೂ ನನ್ನ ದೇಹದ ಸಂತುಲನ ತಪ್ಪಿದ್ದರೆ, ಮೂರು ಮಹಡಿಯಿಂದ ಕೆಳಗಿರುತ್ತಿದ್ದೆ.! ಆದರೂ ಸಾವರಿಸಿಕೊಂಡು ಒಡೆದು ಹೋಗಿದ್ದ ಟ್ಯೂಬ್ ಬದಲಿಸಿ ಕೆಲವೇ ಕ್ಷಣಗಳಲ್ಲಿ ಮೇಲಿಂದ ಕೆಳಗೆ ಇಳಿದು ಬಂದೆ. ನಾನು ತೊಟ್ಟಿದ್ದ T-shirt ಬಿಚ್ಚಿ ನೋಡಿದರೆ ಬಲಗೈ ತೋಳು, ಬಲ ಮಣಿಕಟ್ಟುಗಳ ಮೇಲೆ ಸುಟ್ಟು ಗುಳ್ಳೆಗಳು ಬಂದಿದ್ದವು. ಎಡಗೈ ತೋಳಿನ ಕೆಲವು ಭಾಗವು ಸುಟ್ಟು ಹೋಗಿತ್ತು. (ಅದರ ಕಲೆ, ನೆನಪು ಇಂದಿಗೂ ಮಾಸದೇ ಉಳಿದಿವೆ ನನ್ನ ಕೈಗಳು ಹಾಗೂ ಮನದ ಮೇಲೆ.)
ಚಿತ್ರ ನೋಡಿ ಹೆದರಿಕೊಳ್ಳಬೇಡಿ..!
   ಮನೆಯ ಮಾಲೀಕರು ಸುಟ್ಟ ಗಾಯಕ್ಕೆ ತೇಗದ ಕುಡಿಯ ಎಣ್ಣೆಯನ್ನು ಹಚ್ಚಿ ಸಾಂತ್ವನ ಹೇಳಿದರು. ಬಳಿಕ ಅವರದೆ ವಾಹನದಲ್ಲಿ ನನ್ನನ್ನ ತೀರ್ಥಹಳ್ಳಿಯವರೆಗೆ ಬಿಟ್ಟರು. ಸಂಜೆ ೭ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ವಾಪಾಸ್ ಬಂದರೂ ಯಾವುದೇ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಸೋಮವಾರ ಬೆಳಗ್ಗೆ ೧೦.೩೦ಕ್ಕೆ ಆಸ್ಪತ್ರೆಗೆ ಹೋಗಿ band-aid ಮಾಡಿಸಿಕೊಂಡು ಬಂದೆ. ಮಧ್ಯಾಹ್ನ ೨ ಗಂಟೆಗೆ ಚಿಕ್ಕಮಗಳೂರಿಗೆ ಹೋಗಿ ಒಂದು ವಾರ ಅಲ್ಲಿದ್ದು ವಾಪಾಸ್ ಕೆಲಸಕ್ಕೆ ಮರಳಿದೆ. 


ಘಟನೆ-೩
    ಕೆಲಸ ಮಾಡುತ್ತಿದ್ದವನು ಹಠಕ್ಕೆ ಬಿದ್ದು ೨೦೦೯ರಲ್ಲಿ ಎರಡನೆ ಬಾರಿಗೆ ಕಾಲೇಜು ಮೆತ್ತಿಲೇರಿದ್ದೆ. ಜೊತೆಯಲ್ಲಿ ಖಾಕಿ ಬಟ್ಟೆ ತೊಟ್ಟು ಎನ್.ಸಿ.ಸಿ.ಯಲ್ಲೂ ಕಾಣಿಸಿಕೊಂಡಿದ್ದೆ. ಅದರಿಂದಾಗಿ ನನಗೆ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ನಡೆಯುವ ಪರ್ವತಾರೋಹಣ ಶಿಬಿರಕ್ಕೆ ಹೋಗುವ ಅವಕಾಶ ಒದಗಿಬಂದಿತ್ತು. (೨೦೧೧ರ ಏಪ್ರಿಲ್ ೭- ಮೇ ೪.) ಸಿಕ್ಕಿದ ಅವಕಾಶ ಬಿಡುವುದು ಮೂರ್ಖತನದ ಪರಮಾವಧಿ ಅನ್ನೋದು ತಿಳಿದಿತ್ತು.! ಪರ್ವತಾರೋಹಣ ಶಿಬಿರವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾನು ಒಂದಷ್ಟು ತಯಾರಿ  ನಡೆಸಿಕೊಂಡೇ ಹೋಗಿದ್ದೆ. ೨೮ ದಿನಗಳು ನಡೆದ ಶಿಬಿರದಲ್ಲಿ ಹೊಸ ಜಗತ್ತೇ ನನ್ನೆದುರಿತ್ತು. 
 
 

   ಹೊಸ ಸ್ನೇಹಿತರು, ಹಿಮಾಲಯದ ವಿಭಿನ್ನ ಪರಿಸರ ಮಾನಸಿಕ ಹಾಗೂ ದೈಹಿಕವಾಗಿ ನನ್ನನ್ನು ಹುರಿಗೊಳಿಸಿತ್ತು. ಅಲ್ಲಿನ ಹೊಸತನ ಜೀವನದ ಹಲವು ಆಯಾಮಗಳನ್ನು ಪರಿಚಯಿಸಿತ್ತು. ಅಲ್ಲಿ ಕಲಿತ ಹಲವು ಪಾಠಗಳು ಇಂದಿಗೂ ನನ್ನೊಂದಿಗೆ ಹೆಜ್ಜೆ ಹಾಕುತ್ತಿದೆ. 

   ಅಲ್ಲಿಂದ ಮರಳಿದ ಬಳಿಕ ಎರಡು ಬಾರಿ ಹಿಮಾಲಯದ ಮಡಿಲಲ್ಲಿ ಹಲವು ದಿನಗಳನ್ನು ಕಳೆದಿದ್ದೇನೆ. ಮುಂದೆಯು ಹೋಗುವ ಆಲೋಚನೆಗಳು ಮನದಲ್ಲಿದೆ.
 
ಘಟನೆ-೪

   ಮತ್ತೊಮ್ಮೆ ಯುಗಾದಿ ಬಂದಿದೆ. ಪ್ರತಿ ಯುಗಾದಿಯೂ ಹೊಸತನ ತರುವ ಹಬ್ಬವಾಗಿದೆ. ೨೦೧೬. ಇಷ್ಟು ದಿನ ಮಾಧ್ಯಮ ವೃತ್ತಿಯಲ್ಲಿದ್ದ ನನಗೆ ಹೊಸದೊಂದು ಕೆಲಸ ಕೈ ಬೀಸಿ ಕರೆದಿದೆ. ಹಲವು ದಿನಗಳ ಅಜ್ಞಾತವಾಸ ಮುಗಿಸಿ ಮತ್ತೆ ವೃತ್ತಿ ಜೀವನ ಬದಲಿಸುತ್ತಿದ್ದೇನೆ. ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಕೆಲಸ ಪ್ರಾರಂಭವಾಗಿದೆ. adventures fieldನತ್ತ ಹೆಜ್ಜೆ ಇಟ್ಟಾಗಿದೆ. ಅದೂ ನನಗೆ ಇಷ್ಟವಾಗುವ, ತಾಂತ್ರಿಕವಾಗಿ, ದೈಹಿಕವಾಗಿಯೂ ಗಟ್ಟಿಗೊಳಿಸುವ ವೃತ್ತಿ ಇದಾಗಿದೆ. indoor wall climbing ಮಾಡುವುದು, ಅಲ್ಲಿಗೆ ಬರುವವರಿಗೆ ಸೂಕ್ತ ಮಾಹಿತಿ ನೀಡಿ wall climbingಗೆ ಅವರನ್ನು ಉತ್ತೇಜಿಸುವುದು ನನ್ನ ಕೆಲಸ.

   ಹೀಗೆ ಹಲವು ವರ್ಷಗಳಿಂದಲೂ ಯುಗಾದಿ ನನ್ನ ಜೀವನಕ್ಕೆ ವೈವಿಧ್ಯಮಯ ತಿರುವುಗಳನ್ನು ನೀಡುತ್ತಿದೆ. ಅವೆಲ್ಲವುಗಳನ್ನು ಮುಕ್ತ ಹಾಗೂ ತೆರೆದ ಮನಸ್ಸಿನಿಂದ ಒಪ್ಪಿ ಅಪ್ಪಿ ಕೊಳ್ಳುತ್ತಿದ್ದೇನೆ. ಮುಂದೆಯೂ ಹೀಗೇ ಇರುತ್ತೇನೆ ಅನ್ನೋದು ನನ್ನ ಬಯಕೆ.

   ಮುಂದೆಯೂ ಮತ್ತೆ ಮತ್ತೆ ಯುಗಾದಿ ಬರುತ್ತಲೇ ಇರುತ್ತದೆ. ಅದು ಹೊಸತನವನ್ನ ಖಂಡಿತವಾಗಿಯೂ ತರುತ್ತದೆ ಅನ್ನೋದು ನನ್ನ ಆಶಯ. ಅದು ಸುಳ್ಳಾಗೋದಿಲ್ಲ..!

ಶ್ರೀಪಾದ ಸಮುದ್ರ

Friday, March 18, 2016

ಇರದುದರೆಡೆಗಿನ ತುಡಿತ..


ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಓಡುವುದೇ ಬದುಕು.. love to travel, just like a मुसाफिर । so ಯಾವುದೇ ಕಾಲಕ್ಕೂ ಯಾರೊಬ್ಬರಿಗೂ ಬೆನ್ನು ಬೀಳದೆ, ಸಿಕ್ಕಸಿಕ್ಕಲ್ಲೆಲ್ಲಾ ತಿರುಗಿ, ಸಿಗುವ ಎಲ್ಲವನ್ನೂ ಹಂಚಿ-ಪಡೆದುಕೊಂಡು, ನಾನೆನ್ನುವ ನನ್ನನ್ನು ಮರೆತು, ಆದರೂ ನಾನು ನಾನಾಗಿಯೇ ಇರಬೇಕೆನ್ನುವ ಆಸೆ..  


ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆಲ್ಲೋ ಬದುಕುವ ನಮಗೆ ನಿಂತ ನೆಲವೇ ಮನೆಯಾಗಬಾರದೇ..!

Friday, January 1, 2016

ನೀನಿರದ ಬದುಕು..


ಬದುಕಬೇಕು ನೀನಿರದ ನಾಳೆಗಳಿಗಾಗಿ.. 
ಬದುಕಬೇಕು ಮತ್ತೊಬ್ಬಳ ಬರುವಿಕೆಗಾಗಿ.. 
ಬದುಕಬೇಕು ನನ್ನೊಲುಮೆಯ ಪ್ರೇಯಸಿಗಾಗಿ.. 

ಬದುಕಬೇಕು ನನ್ನೆಲ್ಲ ಕನಸುಗಳಿಗಾಗಿ.. 
ಬದುಕಬೇಕು ನನ್ನಾಸೆಗಳ ಪೂರೈಕೆಗಳಿಗಾಗಿ.. 
ಬದುಕಬೇಕು ಜಗವಿಟ್ಟ ನಂಬಿಕೆಗಳಿಗಾಗಿ.. 

ಬದುಕಬೇಕು ಒಡಲೊಳಗಿನ ಬೇಗುದಿಗಳಿಗಾಗಿ.. 
ಬದುಕಬೇಕು ಎದೆಯಾಳದ ಕಣ್ಣೀರಿಗಾಗಿ..
ಬದುಕಬೇಕು ಮೌನದಾಚೆಗಿನ ಮಾತಿಗಾಗಿ.. 

ಬದುಕಬೇಕು ಹೃದಯವೀಣೆ ನುಡಿಸುವಾಕೆಗಾಗಿ.. 
ಬದುಕಬೇಕು ಶೃಂಗಾರಸುಧೆ ಹರಿಸುವಾಕೆಗಾಗಿ.. 
ಬದುಕಬೇಕು ಬಾಳಿನ ಅರ್ಥ ವಿವರಿಸುವಾಕೆಗಾಗಿ.. 

ಆದರೂ ಬದುಕಲೇಬೇಕು ನೀನಿರದ ನಾಳೆಗಳಿಗಾಗಿ.. 


Wednesday, December 16, 2015

ಜೀವನದ ಆಟ..


ಅದು ಸಂಜೆಯ ವೇಳೆ. ಕಾಲೇಜಿನ ದಿನದಂತ್ಯದ ಕೊನೆಯ ಕ್ಲಾಸ್ ಬಾಕಿ ಇತ್ತು. ಆ ವೇಳೆಗೆ ತರಗತಿಯ ಒಳಗೆ ಬಂದ ಮನಃಶಾಸ್ತ್ರದ ಉಪಾಧ್ಯಾಯರು, 'ಒಂದು ಆಟವಾಡೋಣ' ಎಂದರು. ಮನಃಶಾಸ್ತ್ರದ ಅಧ್ಯಾಪಕರಿಗೂ ಆಟಕ್ಕೂ ಎತ್ತಣ ಸಂಬಂಧ ಅಂತ ವಿದ್ಯಾರ್ಥಿಗಳಿಗೆಲ್ಲ ಅಚ್ಚರಿಯಾಯ್ತು. ತಕ್ಷಣ ಒಬ್ಬ ವಿದ್ಯಾರ್ಥಿಯನ್ನು ಸ್ವ-ಇಚ್ಛೆಯಿಂದ ಮುಂದೆ ಬರುವಂತೆ ಹೇಳಿದರು.
   ಆಗ ಸಾಗರಿಕಾ ಎಂಬ ಹುಡುಗಿ ಎದ್ದು ಬಂದಳು.

   'ನಿನಗೆ ಅತಿ ಇಷ್ಟವಾದ ೩೦ ಜನರ ಹೆಸರನ್ನು Blackboard ಮೇಲೆ ಬರೆ' ಎಂದು ಆ ಶಿಕ್ಷಕಿ ಹೇಳಿದರು.
   ಅದೇ ರೀತಿ ಸಾಗರಿಕಾ, ತನ್ನ ಕುಟುಂಬದವರು, ಬಂಧುಗಳು, ಸ್ನೇಹಿತರು, ಸಹಪಾಠಿಗಳು, ಅಕ್ಕ-ಪಕ್ಕದ ಮನೆಯವರು, ಹೀಗೆ ೩೦ ಜನರ ಹೆಸರುಗಳನ್ನು ಬರೆದಳು.
   ಆಗ ಟೀಚರ್, ಅದರಲ್ಲಿ ಅಷ್ಟು ಮುಖ್ಯವಲ್ಲ ಎನ್ನುವ ಮೂರು ಹೆಸರುಗಳನ್ನು ಅಳಿಸುವಂತೆ ಸಾಗರಿಕಾಗೆ ಸೂಚಿಸಿದರು.
   ಅದರಂತೆ ಸಾಗರಿಕಾ ತನ್ನ ಮೂರು ಸಹಪಾಠಿಗಳ ಹೆಸರನ್ನು ಅಳಿಸಿದಳು.
   ಟೀಚರ್ ಮತ್ತೆ  ಐದು ಹೆಸರುಗಳನ್ನು ತೆಗೆಯುವಂತೆ ಹೇಳಿದರು. ಸಾಗರಿಕಾ, ನೆರೆ ಮನೆಯವರ ಐದು ಹೆಸರುಗಳನ್ನು ಒರೆಸಿದಳು.

   ಇದೇ ಪ್ರಕ್ರಿಯೆ ಮುಂದುವರಿದು ಕೊನೆಯ ನಾಲ್ಕು ಹೆಸರುಗಳು ಮಾತ್ರ Blackboardನಲ್ಲಿ ಉಳಿದುಕೊಂಡಿದ್ದವು.
   ಅವು, ಆಕೆಯ ತಂದೆ, ತಾಯಿ, ಗಂಡ ಹಾಗು ಇದ್ದೊಬ್ಬ ಮಗನದ್ದಾಗಿತ್ತು. ಆಗ ಇಡೀ ತರಗತಿ ಮೌನವಾಯಿತು. ಸೂಜಿ ಬಿದ್ದರೂ ಕೇಳುವಷ್ಟು ನೀರವತೆ ಆವರಿಸಿತ್ತು. ಜೊತೆಯಲ್ಲಿ ಅಲ್ಲಿದ್ದವರಿಗೆಲ್ಲ ಒಂದಂತೂ ಅರ್ಥವಾಗಿತ್ತು. ಇದು ಕೇವಲ ಸಾಗರಿಕಾ ಒಬ್ಬಳಿಗೇ ಸಂಬಂಧಿಸಿದ ಆಟವಲ್ಲ, ಎಲ್ಲರ ಜೀವನದ್ದು ಅಂತ.!!
   ಇದೇ ವೇಳೆ, ಶಿಕ್ಷಕಿ ಮತ್ತೆರಡು ಹೆಸರುಗಳನ್ನು Delete ಮಾಡುವಂತೆ ಸೂಚಿಸಿದರು.
   ಇದು ಸಾಗರಿಕಾಗೆ ಅತಿ ಕಷ್ಟದ ನಿರ್ಧಾರವಾಗಿತ್ತು. ಆದರೂ ಹೇಗೋ ಸಂಭಾಳಿಸಿಕೊಂಡು, ಇಷ್ಟವಿಲ್ಲದಿದ್ದರೂ ತಂದೆ-ತಾಯಿಯರ ಹೆಸರನ್ನು ಒರೆಸಿದಳು.

   ಆಗ, "Please delete one more" ಎಂಬ ಗುಂಡಿನ ಮೊರೆತದಂತಹ ಮಾತು ಕೇಳಿ ಬಂತು ಮನಃಶಾಸ್ತ್ರದ ಅಧ್ಯಾಪಕಿಯ ಬಾಯಿಂದ.
   ಸಾಗರಿಕಾಳ ಕೈ ನಡುಗುತ್ತಿತ್ತು. ಹಣೆ, ಅಂಗೈ ಮೊದಲೆಡೆಗಳಲ್ಲಿ ಬೆವರು ನಿಧಾನವಾಗಿ ಮೂಡಲಾರಂಭಿಸಿತ್ತು. ಕಣ್ಣಂಚಿನಲ್ಲಿ ನೀರು ತುಂಬಿ ಬಂತು...
   ಆದರೂ ಗಟ್ಟಿ ಮನಸ್ಸು ಮಾಡಿ ಮಗನ ಹೆಸರನ್ನು ಅಳಿಸಿ ಹಾಕುವ ಹೊತ್ತಿಗೆ ಸಾಗರಿಕಾಳ ಭಾರವಾದ ಹೃದಯ ತುಂಬಿ ಬಂದಿತ್ತು. ಗಟ್ಟಿಯಾಗಿ ಅಳಲಾರಂಭಿಸಿದ್ದಳು.

   ನಂತರ ಟೀಚರ್ ಸಾಗರಿಕಾಳಿಗೆ ತನ್ನ ಜಾಗಕ್ಕೆ ಮರಳುವಂತೆ ಸೂಚಿಸಿದರು. ಒಂದೆರಡು ಕ್ಷಣಗಳ ಬಳಿಕ ಮನಃಶಾಸ್ತ್ರದ ಅಧ್ಯಾಪಕಿ ಸಾಗರಿಕಾಳನ್ನ 'ತಂದೆ-ತಾಯಿಯರು ನಿನ್ನನ್ನ ಬೆಳೆಸಿದ್ದರು, ಅಲ್ಲದೆ ಅದು ನಿನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಗುವಾಗಿತ್ತು. ಆದರೂ ಗಂಡನ ಹೆಸರನ್ನೇ ಯಾಕೆ ಉಳಿಸಿದೆ? ನಿನಗೆ ಮತ್ತೊಂದು ಗಂಡನನ್ನು ಮದುವೆಯಾಗುವ ಅವಕಾಶ ಕೂಡಾ ಇತ್ತಲ್ಲ?' ಎಂದು ಪ್ರಶ್ನಿಸಿದರು.

   ಶಿಕ್ಷಕಿಯ ಇವಷ್ಟು ಮಾತುಗಳನ್ನು ಕೇಳುವ ಹೊತ್ತಿಗೆ ಇಡೀ ತರಗತಿ ಬೆಚ್ಚಿ ಬಿದ್ದಿತ್ತು. ಜೊತೆಯಲ್ಲಿ ಉಳಿದೆಲ್ಲರಿಗೂ ಸಾಗರಿಕಾಳ ಉತ್ತರ ಕೇಳುವ ಕಾತರ..

   ಅಷ್ಟು ಹೊತ್ತಿಗೆಲ್ಲ ಸಂಭಾಳಿಸಿಕೊಂಡಿದ್ದ ಸಾಗರಿಕಾ, ಶಾಂತ ಚಿತ್ತದಿಂದ ನಿಧಾನವಾಗಿ ತನ್ನ ಆ ನಿರ್ಧಾರವನ್ನ ಹೇಳಿದಳು. "ನನಗಿಂತ ಮೊದಲೇ ಒಂದಲ್ಲ ಒಂದು ದಿನ ತಂದೆ-ತಾಯಿಯರು ಈ ಭೂಮಿಯನ್ನ ತೊರೆಯುತ್ತಾರೆ. ಮಗ ಬೆಳೆದು ದೊಡ್ಡವನಾದ ನಂತರ ನನ್ನನ್ನು ಬಿಟ್ಟು ಹೋಗುತ್ತಾನೆ. ವಿದ್ಯಾಭ್ಯಾಸ, ಕೆಲಸ ಅಥವಾ ಮತ್ತಿನ್ನೇನೋ ಕಾರಣಗಳಿಂದ ಆತ ನಮ್ಮಿಂದ ದೂರವಾಗುತ್ತಾನೆ. ಏನೇ ಆದರೂ ನನ್ನೊಂದಿಗೆ ತನ್ನ ಇಡೀ ಜೀವನವನ್ನ ಹಂಚಿಕೊಳ್ಳೋದು, ಕಷ್ಟವೋ.. ಸುಖವೋ.. ಕೊನೆಯವರೆಗೂ ಇರೋದು ನನ್ನ ಗಂಡ ಮಾತ್ರ".

   ಸಾಗರಿಕಾಳ ಜೀವನದೆಡೆಗಿನ ಭಾವವನ್ನು ಅರ್ಥೈಸಿಕೊಂಡ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಆಕೆಯ ನಿರ್ಧಾರವನ್ನ ಷ್ಲಾಘಿಸಿದರು.

   ಸಾಗರಿಕಾ ಹೇಳಿದ ಮಾತುಗಳನ್ನು ಆಲಿಸಿದ ಮನಃಶಾಸ್ತ್ರದ ಅಧ್ಯಾಪಕಿ, 'ಇದು ಸತ್ಯ, ಆದ್ದರಿಂದ ಜೀವನದ ಎಲ್ಲಾ ಕ್ಷಣಗಳಲ್ಲೂ ನಿಮ್ಮ ಬಾಳ ಸಂಗಾತಿಯನ್ನು ಪ್ರೀತಿಸಿ, ಗೌರವಿಸಿ. ಅದು ಕೇವಲ ಗಂಡ ಮಾತ್ರವಲ್ಲ, ನಿಮ್ಮ ಹೆಂಡತಿಯೂ ಆಗಿರಬಹುದು. God has united these two souls, ಈ ಕ್ಷಣದಿಂದ ನೀವೆಲ್ಲರೂ ಪತಿ-ಪತ್ನಿಯ ಅನುಬಂಧ-ಸಂಬಂಧವನ್ನ ಪೋಷಿಸಿ-ಬೆಳೆಸಿ. ಈ ಬಂಧವು ಜಗತ್ತಿನ ಉಳಿದೆಲ್ಲಾ relationshipಗಳಿಗಿಂತಲೂ ದೊಡ್ಡದು' ಎಂದರು.

   ಇದು ನಿಮಗೊಂದೇ ಅಲ್ಲ, ಎಲ್ಲರಿಗೂ ಪಾಠವಾಗಿಲಿ ಎನ್ನುವ ಉದ್ದೇಶವಾಗಿತ್ತು. ಆದ್ದರಿಂದ ಇಂದಿನ ಕೊನೆಯ ತರಗತಿಯಲ್ಲಿ ಮನಃಶಾಸ್ತ್ರದ ಈ ಹೊಸ ಆಟವನ್ನ ನಿಮಗೆ ಪರಿಚಯಿಸಿದೆ ಎಂದು ಅವರು ಅಲ್ಲಿಂದ ತೆರಳಿದರು.

ಇಂಗ್ಲೀಷ್ ಮೂಲ ಕೃಪೆ: What's App.

Friday, November 27, 2015

आँखो की बात..आप की आँखे बहुत कुछ कहती हैं ।
समाज ने वाले अपनी हिसाब से सोचलेते हैं ।।
मगर सच क्या हैं सिर्फ ओ आँखोमेही छिपा होगा ।
शायद किसी कोभी ओ बात समाज मे नही आएगा ।। 


Saturday, October 17, 2015

ऐ दोस्तिके खातिर..


गम में हसनेवालोंको कभी रुलाया नही जाता ।
  लेहरों से पानीको हाथाया नहीं जाता ॥
होने वाले होजाते है खुद ही दिल से अपने ।
  किसीको कह कर अपना बनाया नहीं जाता ॥


   कभि ओ लोग रुलाते हैं। कभी हसाते हैं । फिर भी ओ हमारे साथ कभी नहीं छोड़ ते हैं । उसि को केहते हैं दोस्त । उसी लोगोकी खातिर हम जिंदगी गुझारते हैं । जींदागीकी सभी मोड़पे सात देते हैं वही लोग । उन लोगोंकी बिना हमारी जीवन की किसीभी पल पूरा नहीं होता ।

   जिसके बिना जिंदगी अधूरी हे उसे हम भी कैंसे भूल सकते हैं । उस लोगोंकी सिवा हंभी कैसे हमारी जिंदगी गुझारनेकेलिए राझी हो जाये । ऐ नामुमकिन हैं ।

Thank you all for your kind support and best wishes..