ನನ್ನ ಸದಾ ಕಾಡಿಸಿದಾಕೆ ನೀ..
ಹದಗೆಡುತ್ತಿದ್ದ ಬದುಕಿಗೆ ಆಸರೆಯಾದಾಕೆ ನೀ..
ಮರುಭೂಮಿಯಂತಿದ್ದ ಮನಕೆ ಸ್ವಪ್ನಗಳ ಮಳೆ ಸುರಿಸಿದಾಕೆ ನೀ..
ಮರಳಿನರಮನೆಗೆ ಅಡಿಪಾಯ ಹಾಕಿದಾಕೆ ನೀ..
ಮನೆ ಮನಗಳ ಎದುರು ಚಿತ್ತಾರದ ರಂಗವಲ್ಲಿ ಬಿಡಿಸಿದಾಕೆ ನೀ..
ಹೃದಯದ ಕದವ ತೆರೆದು ಜಗ ನೋಡಲು ಕಲಿಸಿದಾಕೆ ನೀ..
ಮುದುಡಿದ ಜೀವಕೆ ಪ್ರೀತಿ ಪ್ರೇಮದ ಭಾವ ವಿವರಿಸಿದಾಕೆ ನೀ..
ಗೋರಿಯೊಳಗಿದ್ದಾತನಿಗೆ ಕನಸುಗಳ ಪರಿಭಾಷೆ ಮೂಡಿಸಿದಾಕೆ ನೀ..
ಈಗ ಕಾಲ ಬದಲಾಗಿದೆಯಾ..? ಮೂಡಣದಿ ಅದೇ ಸೂರ್ಯ ಜಾವಕ್ಕೆ ಬಂದು ಬಡಿದೆಬ್ಬಿಸುತ್ತಾನೆ. ಸಂಜೆಯಾಗುತ್ತಲೇ ಪಡುವಣದಿ ನಕ್ಷತ್ರ ಮೂಡುವ ಮೊದಲೇ ಮರೆಯಾಗುತ್ತಾನೆ.
ಎಂದೆಂದಿಗು ನನಗಂತೂ ದಿನಕ್ಕೆ ಬರಿ 24ಕ್ಕೆ ಗಂಟೆ..
ನಿನಗೆ..?
ಎಂದೆಂದಿಗು ನನಗಂತೂ ದಿನಕ್ಕೆ ಬರಿ 24ಕ್ಕೆ ಗಂಟೆ..
ನಿನಗೆ..?
ಅಂದು ನನ್ನ ಜತೆಗಿದ್ದೆ, ಇಂದು..
ವಿರಹದಮೃತ ನೀಡಿ ಕಾಡಿಸುತ್ತಿರುವಾಕೆ ನೀ..
ಬದುಕಿನಾಸರೆ ಹದಗೆಡುವಂತೆ ಮಾಡಿದಾಕೆ ನೀ..
ನನಸಿನಲಿ ಮರಳ ಬಿರುಗಾಳಿಯನೇ ಎಬ್ಬಿಸಿದಾಕೆ ನೀ..
ಮರುಭೂಮಿಯರಮನೆಯ ಪಾಯವನ್ನೇ ಅಲುಗಾಡಿಸಿದಾಕೆ ನೀ..
ರಂಗವಲ್ಲಿಯ ಚಿತ್ತಾರವನೇ ಕದಡಿಕೆಡಿಸಿದಾಕೆ ನೀ..
ನನ್ನಂತರಾಳದಿಂದ ನಿನ್ನ ಜಗವ ಬೇರ್ಪಡಿಸಿದಾಕೆ ನೀ..
ಪ್ರೀತಿ ಪ್ರೇಮಗಳ ಭಾವ ಮರೆಸಿ ಬದುಕ ಬರಡಾಗಿಸಿದಾಕೆ ನೀ..
ಕನಸನೆರೆದು ಬದುಕಿಸಿದಾತನನೆ ಮಸಣದೆಡೆಗೆ ಸಾಗಿಸಿದಾಕೆ ನೀ..
ನನ್ನ ಬಾಳಿನಿಂದ ವಿಮುಖವಾಗಲು ಕಾರಣಗಳೇನೋ ನನಗೆ ತಿಳಿಯದು. ಅದರೆಲ್ಲದಕ್ಕೂ ನಿನ್ನೊಬ್ಬಳನ್ನೇ ಹೊಣೆಗಾರಳನ್ನಾಗಿ ಮಾಡೋದು ನನ್ನ ಉದ್ದೇಶವೂ ಅಲ್ಲ. ನನಗದರಲ್ಲಿ ಆಸಕ್ತಿಯೂ ಉಳಿದಿಲ್ಲ. ನಿನ್ನ ಬದುಕು ನಿನ್ನದು, ಅದಕ್ಕೆ ನೀನೇ ವಿಧಾತೃ.
ನಮ್ಮಿಬ್ಬರ ಬದುಕಿನ ಹಲವು ಘಟನೆಗಳಿಗೆ ಕಾರಣಗಳೇನೇ ಇದ್ದರೂ ನನ್ನೊಳಗೆ ಅಳಿದುಳಿದಿರುವ ನಿನ್ನ ಭಾವದೊಂದಿಗೆ ಹೀಗೇ ಒಂದಷ್ಟು ಮಾತನಾಡಿ ನನ್ನನ್ನ ನಾನೇ ಸಮಾಧಾನ ಪಡಿಸಿಕೊಳ್ಳುತ್ತಿದ್ದೇನೆ. ಈಗ ನನಗಿರೋದು ಅದೊಂದೇ ಮಾರ್ಗ...
ನಮ್ಮಿಬ್ಬರ ಬದುಕಿನ ಹಲವು ಘಟನೆಗಳಿಗೆ ಕಾರಣಗಳೇನೇ ಇದ್ದರೂ ನನ್ನೊಳಗೆ ಅಳಿದುಳಿದಿರುವ ನಿನ್ನ ಭಾವದೊಂದಿಗೆ ಹೀಗೇ ಒಂದಷ್ಟು ಮಾತನಾಡಿ ನನ್ನನ್ನ ನಾನೇ ಸಮಾಧಾನ ಪಡಿಸಿಕೊಳ್ಳುತ್ತಿದ್ದೇನೆ. ಈಗ ನನಗಿರೋದು ಅದೊಂದೇ ಮಾರ್ಗ...
ತಪ್ಪು ತಿಳಿಯಬೇಡ ಗೆಳತಿ..!
0 Comments