ಪ್ರಕೃತಿಯ ಮಡಿಲಲ್ಲಿ ಮೊದಲ ಹೆಜ್ಜೆ!



ಹೈಕಿಂಗ್ ಹೋಗಬೇಕೆನ್ನುವುದು ಇತ್ತೀಚಿನವರ ಬಹುದೊಡ್ಡ ಆಸೆ. ಕನಸು. ಸಾಮಾನ್ಯವಾಗಿ ಹೈಕಿಂಗ್ ಹೋಗುವುದು ಎಂದರೆ ವಾರಾತ್ಯಂದ ಒಂದೆರಡು ದಿನ ಮನೆಯಿಂದ ಹೊರಗೆ ಹೋಗಿ ಬೆಟ್ಟ ಗುಡ್ಡಗಳ ನಡುವಿನ ಅಪರಿಚಿತ ಜಾಗದಲ್ಲಿ ಅಲೆದು, ಉಳಿದು ವಾಪಾಸ್ ಮರಳುವುದು ಎಂಬ ಸಾಮಾನ್ಯ ಪರಿಕಲ್ಪನೆ ಹಲವರದ್ದು. ಒಂದರ್ಥದಲ್ಲಿ ಇದು ನಿಜ. ಇದು ಭಾರತದಲ್ಲಿ ನಿಜವಾದರೂ ಅಮೆರಿಕ, ಯುರೋಪ್ ಮೊದಲಾದ ದೇಶಗಳಲ್ಲಿ ಹೈಕಿಂಗ್‌ಗೆ ಕೊಂಚ ವಿಭಿನ್ನವಾಗಿದೆ.
   ಅದರಲ್ಲೂ ಹೈಕಿಂಗ್ ಎಂದರೆ ಪ್ರಕೃತಿಯ ಮಡಿಲಲ್ಲಿ ಇಡುವ ಮೊದಲ ಹೆಜ್ಜೆ ಎಂಬ ಅರ್ಥವೂ ಇದೆ. ಅಂದರೆ ಕಾಲಿಗೊಂದು ಶೂ ಹಾಕಿಕೊಂಡು, ಹೆಗಲಿಗೊಂದು ಬ್ಯಾಗ್ ಏರಿಸಿ, ಅದರಲ್ಲೊಂದೆರಡು ದಿನಗಳಿಗಾಗುವ ಬಟ್ಟೆ ತುಂಬಿಕೊಂಡು ಸುರಕ್ಷತೆಗೆ ಅತ್ಯಗತ್ಯವಾದ ಬ್ಯಾಟರಿ, ಚಾಕು, ಲೈಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಇಟ್ಟುಕೊಂಡು ಸಾಂಗತ್ಯಕ್ಕೆ ಒಂದಿಬ್ಬರು ಗೆಳೆಯರನ್ನು ಕಟ್ಟಿಕೊಂಡು ಮನೆಯಿಂದ ಹೊರ ನಡೆದರೆ ಸಾಕು ಎಂಬುದಾಗಿದೆ.

   ಇಷ್ಟು ಸಾಧಾರಣವಾದ ಹೈಕಿಂಗ್‌ಗೆ ಹೋಗುವ ಮೊದಲು ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಸಾವಿರಾರು ಪ್ರಶ್ನೆಗಳು ಹರಿದಾಡುತ್ತಿರುತ್ತದೆ. ಸಾಕಷ್ಟು ಗೊಂದಲಗಳಿರುತ್ತವೆ. ಮೊದಲ ಬಾರಿ ಹೀಗೆ ಹೊರಹೋಗುವ ಮೊದಲು ಪೋಷಕರ ಮನಸ್ಸಿನಲ್ಲೂ ವಿರೋಧಾಭಾಸಗಳಿರುತ್ತವೆ. ಅದನ್ನು ಹೋಗಲಾಡಿಸಿದರೆ ಅವರಿಗೂ ನೆಮ್ಮದಿ. ಅಂಥ ಒಂದಷ್ಟು ಪ್ರಶ್ನೋತ್ತರಗಳು, ತಾಕಲಾಟಗಳಿಗೆ ಸೂಕ್ತ ಸಲಹೆಗಳು ಇಲ್ಲಿವೆ.

*ಯಾವೆಲ್ಲ ಸಾಮಾಗ್ರಿ ಬ್ಯಾಗ್‌ನಲ್ಲಿರಲಿ 
ಇದು ಸಾಮಾನ್ಯವಾಗಿ ಎಲ್ಲರಿಗೂ ಉದ್ಭವವಾಗುವ ಪ್ರಶ್ನೆ. ಮೊದಲು ಎರಡು ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಳ್ಳಿ. ಎಷ್ಟು ರಾತ್ರಿ ನಾನು ಹೊರಗೆ ಉಳಿಯುತ್ತೇನೆ? ಹಾಗೂ ಹೋಗುವ ಮಾರ್ಗದ ವಾತಾವರಣ ಹೇಗಿರುತ್ತದೆ? ಎಂದು. ಒಂದು ದಿನದ ಹೈಕಿಂಗ್‌ಗೆ ಜಾಸ್ತಿ ಏನೂ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಶೂ, ಬ್ಯಾಗ್‌ನಲ್ಲಿ ನೀರಿನ ಬಾಟೆಲ್, ಸೂರ್ಯನ ಬಿಸಿಲಿನಿಂದ ರಕ್ಷಣೆ, ಎರಡು ಹೊತ್ತು ಊಟಕ್ಕೆ ಬೇಕಾಗುವ ಆಹಾರ ಜತೆಗಿದ್ದರೆ ಸಾಕು.
ಅದೇ ಎರಡು ಅಥವಾ ಮೂರು ರಾತ್ರಿ ಉಳಿಯುವ ಪ್ರಸಂಗಗಳಿದ್ದರೆ ಒಂದಷ್ಟು ಅಡುಗೆಯ ಹಾಗೂ ಟೆಂಟ್‌ಗಳನ್ನು ಜತೆಗಿಟ್ಟುಕೊಂಡಿದ್ದರೆ ಸಾಕು.

* ಶೂ ಯಾವ ರೀತಿಯದ್ದಾಗಿರಬೇಕು? 
ಹೈಕಿಂಗ್‌ಗೆ ಹೋಗುವಾಗ ನಾವು ತೊಡುವ ಶೂ ಕೂಡ ಮುಖ್ಯಪಾತ್ರವಹಿಸುತ್ತದೆ. ಜತೆಯಲ್ಲಿ ನಾವು ಹೋಗುವ ಹೈಕಿಂಗ್ ಎಷ್ಟು ದಿನಗಳದ್ದು ಮತ್ತು ನಾವು ಎಷ್ಟು ತೂಕವನ್ನು ಹೊರುತ್ತಿದ್ದೇವೆ ಎನ್ನುವುದನ್ನೂ ಗಮನಿಸಬೇಕು. ಶೂ ನಿಮಗೆ ಆರಾಮದಾಯಕವಾಗುವಂತಿದ್ದರೆ ಸಾಕು. ಹೆಚ್ಚು ತೂಕದ ಬಲಿಷ್ಟವಾದ ಶೂಗಳು ಮಾರುಕಟ್ಟೆೆಯಲ್ಲಿ ಲಭ್ಯವಿದೆ. ಹಾಗಂತ ನಾವೂ ಅದನ್ನೇ ತೊಡಬೇಕೆಂದೇನಿಲ್ಲ. ಅದೇ ಒಂದು ದಿನದ ಟ್ರಿಪ್ ಆದರೆ ರನ್ನಿಂಗ್ ಶೂವನ್ನಾದರೂ ತೊಟ್ಟು ಹೋಗಬಹುದು. ಅದಕ್ಕಿಂತ ಹೆಚ್ಚು ದಿನದ ಹೈಕಿಂಗ್ ಮಾಡುತ್ತೀರಿ ಅಂತಾದರೆ ಉತ್ತಮ ಗುಣಮಟ್ಟದ ಶೂ ಧರಿಸಿ. ಅದರಲ್ಲೂ ಫುಲ್ ಬೂಟ್ ಅಥವಾ ಮಿಡ್ ಕಟ್ ಬೂಟ್‌ಗಳು ಉತ್ತಮ. ಇದರಿಂದ ಕಾಲಿನ ಮಣಿಗಂಟು, ಮೀನಖಂಡಗಳಿಗೆ ಸರ್ಪೋಟ್ ದೊರೆಯುತ್ತದೆ. ಮಳೆಗಾಲದಲ್ಲಿ ನಿಮ್ಮ ತಿರುಗಾಟವಿದ್ದರೆ ವಾಟರ್ ಪ್ರೂೂಫ್ ಹಾಗೂ ಹೆವಿ ಡ್ಯೂಟಿ ಬೂಟ್‌ಗಳನ್ನು ತೊಡಬಹುದು.

* ಹೈಕಿಂಗ್‌ನ ಉಡುಗೆ ತೊಡುಗೆ 
ನೀವು ತೊಡುವ ಬಟ್ಟೆೆಗಳು ಪ್ರಮುಖವಾಗಿ ಹವಾಗುಣವನ್ನಾಧರಿಸಿರುತ್ತದೆ. ಮುಖ್ಯವಾಗಿ ಡ್ರೈ ಲೇಯರ್‌ನ ಬಟ್ಟೆಗಳು ಉತ್ತಮ. ಥರ್ಮಲ್ ಲೇಯರ್ ಹೊಂದಿರುವ ಉಡುಪು, ಫ್ಲೀಕ್ ಬಟ್ಟೆೆಗಳನ್ನು ಕ್ಯಾಂಪಿಂಗ್ ವೇಳೆಯಲ್ಲೂ, ವಾಟರ್ ಪ್ರೂಫ್ ಧರಿಸನ್ನು ಇಟ್ಟುಕೊಳ್ಳುವುದೊಳಿತು. ಬಟ್ಟೆೆಯ ಕ್ವಾಲಿಟಿಯ ವಿಚಾರಕ್ಕೆ ಬಂದರೆ ಮೆರಿನೊ ವೂಲ್, ಸಿಂಥೆಟಿಕ್ ಫೈಬರ್ ಬೆಸ್ಟ್‌ ಆಪ್ಷನ್.

* ಹೈಕಿಂಗ್ ಪೋಲ್ ಬೇಕೇ? 
ಹೈಕಿಂಗ್ ಪೋಲ್‌ಗಳು ವಯಸ್ಸಾದವರು ಉಪಯೋಗಿಸಲು ಇರುವ ವಸ್ತುವಲ್ಲ. ಟ್ರೆಕ್ಕಿಂಗ್ ವೇಳೆ ಬೆನ್ನ ಮೇಲೆ ತೂಕ ಹೆಚ್ಚಿದ್ದಾಗ ದೇಹದ ಸಮತೋಲ ಕಾಪಾಡಲು ಸಹಾಯಕವಾಗಿದೆ. ಮಂಡಿ ನೋವಿನ ನಿಯಂತ್ರಣಕ್ಕೂ ಅನುಕೂಲವಾಗುತ್ತದೆ. ಹೀಗಾಗಿ ಹೈಕಿಂಗ್‌ಗೆ ಹೋಗುವಾಗ ಹೈಕಿಂಗ್ ಪೋಲ್‌ಗಳನ್ನು ಜತೆಗಿಟ್ಟುಕೊಂಡಿದ್ದರೆ ಒಳಿತಾಗುತ್ತದೆ.

*ಬ್ಯಾಕ್‌ಪ್ಯಾಕ್ ಎಂಥದ್ದಿರಬೇಕು? 
ಎಷ್ಟು ದಿನದ ಹೈಕಿಂಗ್ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಬ್ಯಾಕ್‌ಪ್ಯಾಕ್‌ನ ಅಳತೆ ನಿರ್ಧಾರವಾಗುತ್ತದೆ. ಸಾಧಾರಣವಾಗಿ ಬ್ಯಾಕ್‌ಪ್ಯಾಕ್‌ನ ಅಳತೆಯನ್ನು ವಾಲ್ಯೂಮ್ (ಲೀಟರ್‌ಗಳಲ್ಲಿ) ಅಳೆಯುತ್ತಾರೆ.
ಉದಾ: ವಾರಾಂತ್ಯದ (2-3 ದಿನಗಳು) ಟ್ರಿಪ್‌ಗೆ 30-45 ಲೀ. ಬ್ಯಾಕ್‌ಪ್ಯಾಕ್
ಕೆಲ ದಿನಗಳ ಹೈಕಿಂಗ್ (4-6)ಗೆ 40ರಿಂದ 70 ಲೀ. ಬ್ಯಾಕ್‌ಪ್ಯಾಕ್.
ಲಾಂಗ್ ಹೈಕಿಂಗ್ ಟ್ರಿಪ್ (6ಕ್ಕೂ ಅಧಿಕ ದಿನ) 70+ ಲೀ. ಬ್ಯಾಕ್‌ಪ್ಯಾಕ್.

* ಹೈಕಿಂಗ್‌ಗೆ ಅಗತ್ಯ ವಸ್ತುಗಳ ಖರೀದಿ ಅಸಾಧ್ಯ. ಅದಕ್ಕೇನು ಮಾಡಬೇಕು? 
ನಾಲ್ಕೈದು ದಿನಗಳ ಹೈಕಿಂಗ್‌ಗೆ ಹೆಚ್ಚು ಸಾಮಾನು-ಸರಂಜಾಮುಗಳ ಅವಶ್ಯಕತೆ ಇರುತ್ತದೆ. ಅದೆಲ್ಲವನ್ನು ಖರೀದಿಸಲು ವೆಚ್ಚವೂ ಹೆಚ್ಚು. ಹೀಗಾಗಿ ತಂಡಗಳೊಂದಿಗೆ ಹೋಗಿ ಬರುವುದು ಉತ್ತಮ. ನಿಮ್ಮ ಸ್ನೇಹಿತರು, ಅಥವಾ ಸಮಾನ ಮನಸ್ಕರೊಂದಿಗೆ ನಾಲ್ಕೈದು ದಿನಗಳ ಹೈಕಿಂಗ್‌ಗೆ ಹೋಗಿ ಬಂದರೆ ಖರ್ಚು, ಸಾಮಾನುಗಳೆಲ್ಲ ಹೊಂದಿಸಿಕೊಳ್ಳಬಹುದು. ರಾತ್ರಿ ವೇಳೆ ವಾಸಕ್ಕೆೆ ಹಟ್‌ಗಳನ್ನು, ಔಟ್ ಹೌಸ್‌ಗಳನ್ನು, ಲಾಡ್ಜ್‌‌ಗಳನ್ನೂ ಹುಡುಕಿಕೊಳ್ಳಬಹುದು. ನಿಮ್ಮ ಬಳಿ ಅಗತ್ಯ ವಸ್ತುಗಳಿಲ್ಲದಿದ್ದರೆ ಟೆಂಟ್, ಹಗ್ಗ, ಗ್ಯಾಸ್ ಸಿಲಿಂಡರ್, ಮೊದಲಾದ ಸರಂಜಾಮುಗಳನ್ನು ಬಾಡಿಗೆಗೆ ಪಡೆದು ಹೋಗುವುದು ಅತ್ಯುತ್ತಮ ವ್ಯವಸ್ಥೆೆಯಾಗಿದೆ.

*ಔಟ್‌ಡೋರ್ ಗೇರ್ ಖರೀದಿಯ ಜಾಗ 
ಹೈಕಿಂಗ್‌ಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಹತ್ತಿರದಲ್ಲಿರುವ ಕಂಪೆನಿಯ ಔಟ್‌ಲೆಟ್‌ಗಳು ಒಳ್ಳೆೆಯ ಜಾಗ. ಅದರಲ್ಲೂ ಸೇಲ್ಸ್‌‌ಮೆನ್‌ಗಳ ಆಮಿಷಕ್ಕೆ ಬಲಿಯಾಗಿ ಅವರಿಗಿಷ್ಟವಿರುವ ವಸ್ತುಗಳನ್ನು ನೀವು ಕೊಂಡುಕೊಳ್ಳಬೇಡಿ. ಮೊದಲು ಅಗತ್ಯ ವಸ್ತುಗಳ ಪಟ್ಟಿ ಮಾಡಿ ಅದಕ್ಕೆೆ ತಕ್ಕಂತೆ ಖರೀದಿ ಮಾಡಿ. ಇಲ್ಲದಿದ್ದರೆ ಆನ್‌ಲೈನ್ ಶಾಪಿಂಗ್ ಇದಕ್ಕೂ ಹೇಳಿ ಮಾಡಿಸಿದಂತಿದೆ.

*ಪ್ರಥಮ ಚಿಕಿತ್ಸಾ ಪೆಟ್ಟಿಗೆ 
ಹೈಕಿಂಗ್ ಹೋಗುವಾಗ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಟ್ರಿಪ್‌ನ ಗಾತ್ರ, ತಂಡದ ಸಂಖ್ಯೆೆ ಹಾಗೂ ನಿಮ್ಮ ವೈದ್ಯಕೀಯ ಪರಿಜ್ಞಾನಕ್ಕನುಗುಣವಾಗಿ ಚಿಕಿತ್ಸಾ ಪೆಟ್ಟಿಗೆ ಹೊಂದಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಚಾರಣಕ್ಕೆೆ ಅವಶ್ಯವಿರುವ ಮೆಡಿಕಲ್ ಕಿಟ್‌ಗಳು ಲಭ್ಯವಿದೆ. ಇಲ್ಲದಿದ್ದರೆ ಬ್ಯಾಂಡೇಜ್ ಬಟ್ಟೆ, ಮೆಡಿಕಲ್ ಟೇಪ್, ಸ್ಟೆೆರೈಲ್ ಗೇಝ್, ಐಬುಪ್ರೊಫೆನ್, ಬೆನಡ್ರಿಲ್, ಆ್ಯಂಟಿ ಬಯೋಟಿಕ್ ಕ್ರೀಮ್, ಬ್ಯಾಂಡೇಡ್ , ಮೊದಲಾದವು ಇರಲೇಬೇಕು.

 ========================================================================
#himalaya, #expedition, #hiking, #travel, #ವಿಶ್ವವಾಣಿ, #ಯಾತ್ರಾ_ಪುರವಣಿ, #ಅಂಕಣ, #ಬರಹ, #ಅಲೆಮಾರಿಯಡೈರಿ, #ಲೇಖನ, #ಪ್ರಥಮಚಿಕಿತ್ಸಾಪೆಟ್ಟಿಗೆ, #ಆನ್‌ಲೈನ್_ಶಾಪಿಂಗ್, #ಮೆಡಿಕಲ್_ಕಿಟ್‌, #ಬ್ಯಾಕ್‌ಪ್ಯಾಕ್, #ಹೈಕಿಂಗ್, #ಟೆಂಟ್‌, #Tent, #FirstAidBox, #OnlineShopping, #Article, #BackPack, #HikingPole, 
Tags: expeditionravel

Post a Comment

0 Comments

Skip to main content