ಐದಾರು ವರ್ಷಗಳ ಹಿಂದೆ ಸ್ನೇಹಿತರ್ಯಾರೋ ಕಳಿಸಿದ ಮಿಂಚಂಚೆಯನ್ನ ಈಗ ಮತ್ತೊಮ್ಮೆ ಓದಿದೆ. ಇದು ಅಂದಿಗಿಂತಲೂ ಈಗ ಹಾಗು ಮುಂದಿನ ದಿನಗಳಿಗೆ ಹೆಚ್ಚು ಪ್ರಸ್ತುತ ಅನಿಸುತ್ತದೆ. ಹೀಗಾಗಿ ಅದನ್ನು ಬ್ಲಾಗ್ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿರುವ ಪರಿಸ್ಥಿತಿಗೆ ನಾನು ಕೂಡ ಹೊರತಲ್ಲ ಎನ್ನೋ ಮಾತನ್ನು ಆರಂಭದಲ್ಲೇ ನಿಮ್ಮೆದುರು ಹೇಳಿಕೊಳ್ಳುತ್ತಿದ್ದೇನೆ...! 

"ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದುಹೋಗಿದ್ದಾರೆ. ಕಳೆದು ಹೋಗುವ ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು, ಕುಟುಂಬ - ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ.

   ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ.

   ‘ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸಕೊಡುತ್ತವೆ. ಈ ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕು’ ಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?

   ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್ನಲ್ಲಿ, ಎಸ್ಎಂಎಸ್ಗಳಲ್ಲಿ, ವೀಡಿಯೋ ಕಾಲ್ ಮೂಲಕ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ಆ ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆ ತಿನ್ನುವ ಕೆಲಸಗಳು ಭಾವನೆಗಳನ್ನು, ಸಂಬಂಧಗಳನ್ನು ತಣ್ಣಗೆ ಕೊಲ್ಲುತ್ತದೆ.


   ಮ್ಯಾನೇಜ್ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಈ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದುನಿಂತಿದೆ.

   ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್ನಲ್ಲಿ ಕೂತು ಕಾಫಿ ಹೀರಿದ್ದುಯಾವಾಗ? ಯಾವುದೋ ಪಾರ್ಕ್ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನುಎಣಿಸುತ್ತವೆ.

   ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಮೊಬೈಲಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್ನಲ್ಲಿಯೇ ಇರುತ್ತಾನೆ. ಯಾರಿಗೋಎಸ್ಸೆಮ್ಮೆಸ್ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ. ಒಂದೆರಡು ದಿನಗಳ ನಂತರ ಫೋನಲ್ಲಿಯೇ ‘ಅದೇನಾಯ್ತು ಅಂದ್ರೆ..’ ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?

   ‘ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧ’ ಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ‘ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆ’ ಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ. ‘ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆ ಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆ’ ಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ್ಯಾರಲ್ಲೂ ಸಂತೋಷ ಕೆನೆ ಕಟ್ಟಿಲ್ಲ. 

   ‘ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆ’ ಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ.

   ಮನೆ ಹತ್ತಿರದ ೭ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ‘ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇ ‘ಡಾಕ್ಟರ್ ಆಗ್ತೀನಿ ಅಂಕಲ್’ ಎಂದಳು. ‘ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆ’ ಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ?

   ಈ ಮಧ್ಯೆ ಮದುವೆಗೆ ಬಾರದ ಗೆಳೆಯನೊಬ್ಬ ನಾನು ಬಯಸದಿದ್ದರೂ ಫೋನ್ನಲ್ಲಿ ವಿವರಣೆ ಕೊಡುತ್ತಿದ್ದ. ‘ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲ’ ಎಂದು ಹೇಳಿ ಪೋನ್ ಕೆಳಗಿಟ್ಟೆ..." 

   ಈ ಲೇಖನ ನನಗೆ ಇಷ್ಟವಾಯಿತು. ಅದಕ್ಕೆ ಹಲವು ಕಾರಣಗಳಿವೆ. ಮೇಲೆ ಹೇಳಿದ ಸಾಕಷ್ಟು ತಪ್ಪುಗಳನ್ನು ನಾನು ಮಾಡಿದ್ದೇನೆ. ನನಗೆ ಇದು ಕೇವಲ ನನ್ನೊಬ್ಬನ ತಪ್ಪು ಅಂತ ಅನ್ನಿಸುತ್ತಿಲ್ಲ. ಅದರ ಪ್ರಸ್ತುತತೆಯ ವಿಚಾರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬುದ್ಧಿ ಬಂದು ದೊಡ್ಡವರಾದೆವು ಅಂತ ಸಂತೋಷ ಪಡುವ ಜೊತೆಯಲ್ಲೇ ದುಡ್ಡು ಮಾಡಬೇಕೆಂಬ ಹಪಹಪಿಗೆ ಬಿದ್ದು ನಮ್ಮನ್ನೇ ನಾವು ಕಳೆದುಕೊಳ್ಳುತ್ತೇವೆ. ಅದೇ ಕಾರಣವನ್ನು ತೋಡಿಕೊಳ್ಳುತ್ತಿದ್ದೇನೆ.  

   ಹಾದಿಯಲ್ಲಿ ಹೋಗುತ್ತಿದ್ದ ಇಲ್ಲಸಲ್ಲದ ರಗಳೆಗಳನ್ನು ಹುಡುಕಿ ಬೆನ್ನು ಹತ್ತಿದ ಬೇತಾಳನಂತೆ ಬೆಳೆಸಿಕೊಂಡಿದ್ದು ನಾವಲ್ಲವೇ.. ಇಂದು ನನ್ನನ್ನು ಸೇರಿದಂತೆ ಎಲ್ಲರಿಗೂ ಹಣ ಮಾಡುವುದೊಂದೇ ಜೀವನದ ಪರಮ ಗುರಿ ಎಂಬಂತೆ ತಿಳಿದುಕೊಂಡಿದ್ದೇವೆ. ಉಳಿದಂತೆ ಸುಖ ಸಂತೋಷ, ಪ್ರೀತಿ ವಿಶ್ವಾಸ, ನೆಮ್ಮದಿ, ಕುಟುಂಬ, ನೆಂಟರು ಇಷ್ಟರು, ಸ್ನೇಹಿತರು, ಬಂಧು ಬಳಗ, ನಮ್ಮವರು-ತಮ್ಮವರು ಮೊದಲಾದ  ಆದರಾತಿಥ್ಯಗಳು ಕಡಿಮೆಯಾಗುತ್ತಿದೆ. ಕೇವಲ ಕಾಲದ ಗೊಂಬೆಗಳಾಗಿ ಓಡುವುದೇ ಬದುಕು ಎಂಬಂತೆ ವರ್ತಿಸುತ್ತಿದ್ದೇವೆ. ಇದರ ಹೊಣೆಯನ್ನು ನಮ್ಮ ಹೆಗಲಿಗೆ ತೆಗೆದುಕೊಳ್ಳುವ ತಾಕತ್ತು ನಮಗಿಲ್ಲ. ಕಷ್ಟಕ್ಕೆಲ್ಲ ಶನೀಶ್ವರ ಕಾರಣ ಎಂಬಂತೆ ಬೇರೆವರ ಕಡೆ ಕೈ ತೋರಿಸಿ ನಾವು ಸೇಫ್ ಆಗುವ ತಂತ್ರವೊಂದೇ ನಮಗೆ ಉಳಿದಿರುವುದು..!

Tags: featuresfriendslifeloveloveandlife

Post a Comment

1 Comments

Skip to main content