ಅದೇಕೋ ಗೊತ್ತಿಲ್ಲ...
ಮರೆಯೋಣವೆಂದರೆ ಅಂಗೈ ಮೇಲಿನ ಕಲೆಯಂತೆ..
ನೆನಪಿಟ್ಟುಕೊಳ್ಳೋಣವೆಂದರೆ ಮುಗಿಲ ಮೇಲಿನ ಮೋಡದಂತೆ..
ಬಾಳಿನುದ್ದಕ್ಕೂ ಒಟ್ಟಾಗಿರೋಣವೆಂದರೆ ಬಂಗಾರದ ಜಿಂಕೆಯಂತೆ..
..ಮತ್ತೆ ಮತ್ತೆ ಕಾಡುತ್ತೀಯ!
ನನ್ನ ಬದುಕಿನಾಸರೆಯಾಗುವೆ ಅನ್ನೋ ಕನಸು ಕಂಡಿದ್ದೆ..
ನನ್ನ ಬದುಕಿನಾಸರೆಯಾಗುವೆ ಅನ್ನೋ ಕನಸು ಕಂಡಿದ್ದೆ..
ಒಂಟಿಯಾಗಿರುವ ನೌಕೆಗೆ ನಾವಿಕನಾಗುವೆ ಅಂದುಕೊಂಡಿದ್ದೆ..
ನಾಳೆಗಳ ಸುಖ-ದುಃಖಗಳಿಗೆ ಹೆಗಲಾಗುವೆ ಅಂತ ತಿಳಿದುಕೊಂಡಿದ್ದೆ..
..ಈಗ ಅವೆಲ್ಲವೂ ನನಸಾಗದು!
ನಮ್ಮಿಬ್ಬರ ಪರಿಚಯ ಕೆಲವೇ ಮಾಸಗಳದ್ದಿರಬಹುದು..
ಹೃದಯಗಳ ಒಡನಾಟಕ್ಕೂ ಕಾಲ ಮಿತಿಯ ಚೌಕಟ್ಟು ಹಾಕಿಡಬಹುದು..
ಪ್ರೀತಿ ಪ್ರೇಮಗಳ ಉತ್ಕಟ ಪರಿಭಾಷೆಗೊಂದು ತಾರ್ಕಿಕ ಅಂತ್ಯವಿಡಬಹುದು..
..ಮನಸ್ಸಿಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ!
ನನ್ನ ಬಾಳಿನ ಪುಟಗಳ ಸುವರ್ಣಾಕ್ಷರವು ನೀನು..
ಅಜರಾಮರವಾಗಿರುವ ನೆನಪುಗಳಿಗೆ ಕೊನೆಯ ತಿರುವು ನೀನು..
ನಿನಗೇನೂ ಅಲ್ಲದಿದ್ದರೂ, ನನಗೆ ಮಾತ್ರ ಭಾವ-ಜೀವ ಎರಡೂ ನೀನು..
..ಹೇಗೆ ಹೇಳಬೇಕೋ ತಿಳಿಯದು!
0 Comments