ಏನು ಮಾಡಲಿ ಹೇಳೆ ಗೆಳತಿ..?
ನೀನು ನನ್ನ ಪ್ರೀತಿಸಿದೆಯಾ..? ಗೊತ್ತಿಲ್ಲ.. ತಿಳಿಯುವ ಆಸೆ ಉಳಿದಿದೆಯಾ..? ಊಹೂ..!! ಆದರೂ ಹುಡುಕುತ್ತಿದ್ದೇನೆ...!! ಅದೂ ಹೊರ ಜಗತ್ತಿನಲ್ಲಲ್ಲ, ಮನದಾಳದಲ್ಲಿ. ಈ ಪುಟ್ಟ ಹೃದಯವನ್ನು ಎದುರಿಗೆ ಇಟ್ಟುಕೊಂಡು ಇಂಚಿಂಚೂ ಬಿಡದೆ, ತಿರುಗಿಸಿ-ತಿರುಗಿಸಿ ನೋಡಿದರೂ ಬೇಕಾದ್ದೊಂದು ಬಿಟ್ಟು ಉಳಿದೆಲ್ಲವೂ ಕೂಗಿ ಕೂಗಿ ಕರೆಯುತ್ತಿವೆ. ಆ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲ್ಲಿ. ಇರಬೇಕಾದವರು ಎದುರಿಗೆ ಇಲ್ಲವಾದಾಗಲೇ ಎಲ್ಲವೂ ನಾಯಿ ಕೊಡೆಯಂತೆ ಜಿಗಿದು ನಿಂತು ಕೂಗಿ ಕರೆಯುತ್ತವೆ. ಹೇಳಿಕೊಳ್ಳಲು ಎಲ್ಲರೂ ನನ್ನವರೇ..! ಆದರೆ ಯಾರೂ ನನ್ನವರಲ್ಲ..!! ನನ್ನವರಿಲ್ಲ..!!
ಅದೂ ಬೇಕೆನಿಸಿದಾಗ..
ಮೊನ್ನೆ ಹಾಗೇ ಆಯಿತು.. ಹತ್ತಿರದ ಸ್ನೇಹಿತನ ಮನೆಗೆ ಹೋಗಿದ್ದೆ ಪರಿಚಯವಾದ ಬಹಳ ವರ್ಷಗಳ ನಂತರ. ಅವರದು ಸಂತಸದ ಕುಟುಂಬ. ಇರುವವರು ಐದು ಮತ್ತೊಬ್ಬರು. ಎಲ್ಲರೂ ಎಲ್ಲರಿಗೂ ಎಲ್ಲವಕ್ಕೂ ಬೇಕು. ಅದೂ ಸಮಾನತೆಯೊಂದಿಗೆ. ಹಾಲಿನೊಂದಿಗೆ ಸೇರಿದ ನೀರಿನಂತೆ ನಾನೂ ಎರಡು ದಿನ ಬೆರೆತೆ ಆ ಪುಟ್ಟ ಸಂಸಾರದಲ್ಲಿ. ಅಲ್ಲಿನ ಬೆಟ್ಟ-ಗುಡ್ಡ, ಸುತ್ತಲಿನ ಕಾಡು, ಮನೆಯ ಪಕ್ಕ ಹರಿಯುವ ನದಿ, ದಡದಲ್ಲಿನ ಕಲ್ಲು ಬಂಡೆ, ಗಿಡ-ಗಂಟಿಗಳು, ನದಿಯಲ್ಲಿನ ಸಣ್ಣ ಪುಟ್ಟ ಮೀನುಗಳು, ನೀಲ ಆಗಸ, ಕಳೆಯುತ್ತಿರುವ ಸಮಯ ಹಾಗೂ ದಿಗಂತದಲ್ಲಿ ಮುಳುಗುತ್ತಿರುವ ಭಾಸ್ಕರ, ಸುತ್ತಲಿನದೆಲ್ಲವನ್ನೂ ತೋರಿಸುವ ಗೆಣೆಕಾರ ಮತ್ತು ಆತನ ಕೆಂಪು ನಾಯಿ ಅವೆಲ್ಲ ಜೊತೆಗಿದ್ದವು ಅಥವಾ ನಾನು ಅವರೊಂದಿಗಿದ್ದೆ ಕೇವಲ ದೈಹಿಕವಾಗಿ ಮಾತ್ರ. ಸವಿನೆನಪಿಗಾಗಿ ಒಂದಷ್ಟನ್ನು ಸೆರೆಹಿಡಿಯುತ್ತಿದ್ದೆ ಕ್ಯಾಮೆರಾದಲ್ಲಿ. ನನಗೋಸ್ಕರ ನಾನೇ ನನ್ನನು ಹುಡುಕಿ ಹಿಡಿದು ತಂದು ನಿಲ್ಲಿಸಬೇಕಾಗುತ್ತಿತ್ತು ಪ್ರತಿಕ್ಷಣವೂ ಅಲ್ಲಿ. ಆದರೆ ಕೊನೆಯವರೆಗೂ ಅದು ಸಾಧ್ಯವಾಗಲೇ ಇಲ್ಲ. ಕ್ಷಣ ಕ್ಷಣವೂ ಕಳೆದು ಹೋಗುತ್ತಿದ್ದೆ.
ಅಂದು ರಾತ್ರಿ ಜಾತ್ರೆಗೆ ಹೋಗಿ ತಂದಿದ್ದ ರಾಧಾ ಕೃಷ್ಣರ ಪುಟ್ಟ ಮೂರ್ತಿ ನನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಪ್ರಿಯವಾಗಿತ್ತು. ಅದನ್ನು ತಂದಿದ್ದು ಮಾತ್ರ ನಿನಗೆ! ಆದರೆ ಕೊಡುತ್ತೇನೋ.. ಇಲ್ಲವೋ.. ತಿಳಿಯದು..!
ರವಿ ನಿಧಾನವಾಗಿ ಮೇಲೇರುತ್ತಿದ್ದ ಹಾಗೆ ನಾವಿಬ್ಬರೂ ಹತ್ತಿರದಲ್ಲಿದ್ದ ಜಲಪಾತವನ್ನ ಮನದುಂಬಿಸಿಕೊಂಡು ಬರಲು ಹೊರಟೆವು. ಕಣಿವೆ-ಕಾನನಗಳ ನಡುವಿನ ಹಾದಿ ಮುದ ನೀಡುತ್ತಿತ್ತು. ಪ್ರಕೃತಿ ಮಾತೆಯ ಮಡಿಲಿನಲ್ಲಿ ಕಳೆದ ಅಂದಿನ ನಮ್ಮ ಅನುಭಾವವನ್ನ ಹೇಗೆ ಕಟ್ಟಿಕೊಡಲಿ..? ಅದೂ ಕೇವಲ ಪದಗಳಲ್ಲಿ.!
ಇದೊಂದು ನಿರ್ಭಾವ ಸಂಭಾಷಣೆಯೇನೋ..? ಎಂದೋ ಸತ್ತ ಭಾವನೆಗಳಿಗೆ ಮತ್ತೆ ಮತ್ತೆ ಜೀವ ನೀಡಿ, ಈ ಕ್ಷಣದಲ್ಲಿ ಜನನವಾದ್ದು ಎಂದು ಸಾರಿ ಸಾರಿ ಹೇಳಬೇಕಾದುದು ಅನಿವಾರ್ಯವಲ್ಲವೇ..?
ಜೊತೆಗಿದ್ದ ಗೆಳೆಯ ಎಲ್ಲವನ್ನೂ ನೋಡಿಯೂ ನೋಡದಂತೆ ಕುಳಿತಿದ್ದ. ಅವನೇನಾದರೂ ಕೇಳಿದ್ದರೆ ಏನಾಗುತ್ತಿತ್ತೋ ನನ್ನ ಸ್ಥಿತಿ. ಗೊತ್ತಿಲ್ಲ.! ಕಷ್ಟಪಟ್ಟು ನನ್ನನ್ನು ನಾನು ಸಂಭಾಳಿಸಿಕೊಂಡು ಅಲ್ಲಿಂದ ಹಿಂತಿರುಗಿ ಬಂದೆ.
ಈಗಲೂ ಆ ಗೆಳೆಯನ ಮನೆಗೆ ಹೋಗುವ ಮನಸ್ಸಾಗುತ್ತದೆ. ಅವನೂ ಕೈ ಹಿಡಿದು ಕರೆಯುತ್ತಾನೆ. ಅಲ್ಲಿಗೆ ಹೋದರೆ ನಾನು ಮತ್ತೆ ಕಳೆದು ಹೋಗುತ್ತೇನೇನೋ ಎಂಬ ಭಯ. ದುಗುಡ. ಆತಂಕ. ಅವರೆಲ್ಲರ ಜೊತೆಗಿದ್ದೂ ಒಬ್ಬಂಟಿ ಭಾವ ಕಾಡುತ್ತಿರುತ್ತದೆ. ಯಾಕೆಂದ್ರೆ ನೀನು ನನ್ನ ಮನದಾಳದಿಂದ ಮಾಗಿಯ ಚಳಿಯಂತೆ ಎದ್ದು ಬಂದಿರುತ್ತೀಯ.
=========================================================================
#love, #features, #nature, #ಭಗವಂತ, #ದೇವಸ್ಥಾನ, #temple, #loveandlife, #ಸ್ನೇಹಿತ, #life, #ಹುಡುಗಿ, #ಗೆಳೆಯ, #ಮನೆ, #ಹಿಂಭಾಗ #ನದಿ, #Water, #River, #Friend, #fear, #Failure, #Tears, #God, #ಭಯ. #ದುಗುಡ. #ಆತಂಕ. #ಜೊತೆ #ಒಬ್ಬಂಟಿ #ಭಾವ
0 Comments