ಮಾತು ಬೆಳ್ಳಿ ಮೌನ ಬಂಗಾರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಿನಗೆ ಮಾತನಾಡಲೂ ಬರುತ್ತದೆ. ಅಲ್ಲದೆ ಸಾಕಷ್ಟು ವಿಷಯಗಳಲ್ಲಿ ನಿನಗೆ ಪರಿಣಿತಿಯೂ ಇದೆ. ಆದರೂ ನಿನ್ನ ಮುಖಕ್ಕೆ ಮೌನವೇ ಆಭರಣ. ಜೊತೆಯಲ್ಲಿ ಎಂದೆಂದಿಗೂ ಮಾಸದ ಆ ನಗು ಎಂಥವರನ್ನೂ ಕಳೆದು ಹೋಗುವಂತೆ ಮಾಡುತ್ತದೆ.

   ವಿಶೇಷವೆಂದರೆ ನೀನು ಮಾತನಾಡುತ್ತೀಯ. ಆದರೆ ನನ್ನ ಜೊತೆಗಲ್ಲ. ಸಾಕಷ್ಟು ಜನರ ಜೊತೆ ನಗುತ್ತಾ ಮಾತನಾಡುವ ನಿನಗೆ ನನ್ನೆಡೆಗೇಕೆ ಮೌನದೊಂದಿಗಿನ ಸರಸ..?

   ನೀನೊಂದು ತೀರ ನಾನೊಂದು ತೀರ.. ಇದು ನನಗೂ ಗೊತ್ತು, ನಿನಗೂ ಗೊತ್ತು. ಆದರೂ ಯಾಕೋ ನಮ್ಮಿಬ್ಬರ ನಡುವೆ ಮಾತುಕತೆ, ಗೆಳೆತನವೇಕೆ ಸಾಧ್ಯವಿಲ್ಲ...?

   ಕೆಲವು ವಿಚಾರಗಳಲ್ಲಿ ಇಬ್ಬರಿಗೂ ಸಾಮ್ಯತೆ ಇದೆಯಾ..? ಇದ್ದರೂ ಅದು ಮೌನದ ಮೂಲಕವೇ. ಎಲ್ಲರಿಗಿಂತ ಹೆಚ್ಚಿಗೆ ಮಾತನಾಡುವ ಇಬ್ಬರೂ ಎದುರು-ಬದುರಾದಾಗ ಮಾತ್ರ ಅಕ್ಷರಗಳೇ ಕಳೆದು ಹೋಗುತ್ತವೆ. ಏನೇನೋ ಬಡಬಡಾಯಿಸುತ್ತೇವೆ. ಮಾತನಾಡಬೇಕೆಂದುಕೊಂಡಿದ್ದೆಲ್ಲವನ್ನೂ ಬಿಟ್ಟು ಪ್ರಸ್ತುತ ಸಂಬಂಧವೇ ಇಲ್ಲದ ಹರಟೆ ಹೊಡೆಯುತ್ತೇವೆ.

   ಮುಖ್ಯವಾಗಿ ನನ್ನ ಮೌನಕ್ಕಿಂತ ನಿನ್ನದು ಹೆಚ್ಚು ಆಶ್ಚರ್ಯವನ್ನುಂಟುಮಾಡಿತ್ತದೆ. ಸುಮ್ಮನೆ ನಿನ್ನೊಂದಿಗೆ ಹರಟೆ ಹೊಡೆಯಲು ಬಂದರೂ ನೀನು ಉತ್ತರ ನೀಡದೆ ಎದ್ದು ಹೋಗುತ್ತೀಯಾ. ಅದರ ಹಿಂದೆ ಏನಿದೆ..? ಸಿಟ್ಟಾ..? ಬೇಸರವಾ..? ನನ್ನೆಡೆಗಿನ ಅಸಡ್ಡೆಯಾ..? ಗೊತ್ತಿಲ್ಲ. ಆದರೂ ನಿನ್ನೊಂದಿಗೆ ಮಾತನಾಡಬೇಕು. ಈ ಸಮುದ್ರದಂಥ ಮನದೊಳಗಿನ ಎಲ್ಲವನ್ನೂ ಹೇಳಿಕೊಳ್ಳಬೇಕು. ಹಿಂಗಾರಿನ ಮಳೆಯಂತೆ ಒಮ್ಮೆಲೆ ವಿವರಿಸಿ ಹೃದಯ ಹಗುರವಾಗಿಸಿಕೊಳ್ಳುವ ಬಯಕೆ. ಆದರೆ ನೀನು ಮಾತ್ರ ಅದಕ್ಕೂ ಅವಕಾಶ ನೀಡುತ್ತಿಲ್ಲ

   ನಿನ್ನೆಡೆಗೆ ನಡೆದಾಗಲೆಲ್ಲ ನನಗೆ ದೊರೆಯುವುದು ಮುಚ್ಚಿದ ಬಾಗಿಲು. ನಾನು ಮಾತ್ರ ಅದರೆದುರು ನಿಂತು ಬಗೆ ಬಗೆಯಾಗಿ ವಿವರಿಸುತ್ತಿದ್ದೇನೆ. ಒಮ್ಮೆಯಾದರೂ ಬಾಗಿಲು ತೆರೆದು ದರುಶನ ನೀಡು. ಈ ಹೃದಯದಲ್ಲಿ ಏನಿದೆ ಎಂದು ಕ್ಷಣಕಾಲವಾದರೂ ಇಣುಕಿ ನೋಡು. ಅರ್ಥವಾಗಬಹುದೆನೊ. (ಅರ್ಥವಾಗದಿದ್ದರೆ ಹೇಳು ನನಗೆ ಗೊತ್ತಿರುವಂತೆ ವಿವರಿಸುತ್ತೇನೆ.)

   ನೀಲ ಸಮುದ್ರದಂತಃ ವಿಶ್ವಾಸದೊಂದಿಗೆ ಮುಚ್ಚಿದ ಬಾಗಿಲೆದುರು ನಿಂತಿದ್ದೇನೆ. ನೀನೇ ಬಂದು ಅಗುಳಿ ತೆಗೆದು ನನ್ನೆದುರು ನಿಂತು ಬೊಗಸೆ ಕಣ್ಣಿನಲ್ಲಿ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡದೆಯೂ ಉತ್ತರಿಸಿದಂತೆ ಮುಗುಳು ನಗೆ ಬೀರುತ್ತೀಯ ಎಂದು.
ಇವೆಲ್ಲಾ ನನ್ನ ಭ್ರಮೆಯಾ.. ಗೊತ್ತಿಲ್ಲ..!

   ಆದರೂ ನಿನ್ನ ಮೌನ ಮಾತ್ರ ಇಂದಿಗೂ ನನ್ನನ್ನು ಕಾಡುತ್ತಿದೆ. ಸದಾ ಸೌಮ್ಯವಾಗಿ ನಗುವ ನಿನ್ನ ಮೊಗದಲ್ಲಿ ನನ್ನೆಡೆಗೇಕೆ ಈ ಬಗೆಯ ಎಲ್ಲದಕ್ಕೂ ಉತ್ತರವಿದ್ದೂ ಏನೂ ಇರದಂಥ ದಿವ್ಯ ಮೌನ..!

   ಉತ್ತರ ಮಾತ್ರ ನೀನೇ ಹೇಳಬೇಕು. ಯಾಕೆಂದರೆ ನನಗೋ ಅಷ್ಟೂ ಕೂಡಾ ಅರ್ಥವಾಗದಷ್ಟು ದಡ್ಡತನ. ನಾನು ನಿನ್ನಿಂದ ಬಯಸಿದ್ದು ಏನನ್ನು..? ಪ್ರೀತಿಯಾ..? ಗೆಳೆತನವಾ..? ಅವೆರಡೂ ಮೀರಿದ ಹೆಸರಿಡದ ರಿಲೇಷನ್‍ಶಿಪ್ಪಾ..? ನಿನಗೆ ಮಾತ್ರ ಏನು ಎಂದು ಕೇಳಲಾಗದ ಭಾವ.  

   ಈಗಲೂ ಹೇಳು, ನಿನಗೆ ನನ್ನ ಜೊತೆಗಿನ ಯಾವುದೇ ಸಂಬಂಧ ಬೇಡವೆಂದರೆ ತಿಳಿಸು. ನಾನೇ ಸ್ವತಹ ಎದ್ದು ಹೋಗುತ್ತೇನೆ. ಮತ್ತೆಂದೂ ನಿನ್ನ ಜೀವನದಲ್ಲಿ ನನ್ನ ನೆರಳೂ ಬೀಳದಂತೆ. ಆದರೆ ನೀನು ಮಾತ್ರ ಮೌನ ಮುರಿದು ಮಾತನಾಡಲೇ ಬೇಕು. ಆಗ ಮಾತ್ರ ಇದು ಸಾಧ್ಯ. ಇಲ್ಲವಾದರೆ ನಾನೂ ಕೂಡಾ ನಿನ್ನನ್ನು ಮಾತನಾಡಿಸಲು ವ್ಯರ್ಥ ಪ್ರಯತ್ನ ಮಾಡುತ್ತಲೇ ಇರುತ್ತೇನೆ.

   ಆದರೂ ನಿನ್ನ ಸೌಮ್ಯವಾದ ದಿವ್ಯ ಮೌನಕ್ಕೆ ಏನೆಂದು ಹೆಸರಿಡಲಿ...!!! 

========================================================================= 
#love, #features, #loveandlife, #life, #friends,  #ಸಮುದ್ರ, #ನದಿ, #ನೀರು, #ಆದಿ, #ಅಂತ್ಯ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಭಾರ, #ಉತ್ತರ, #ಹಾಳು #girlfriend
Tags: #Features#life#love#loveandlife

Post a Comment

0 Comments

Skip to main content