ನೀನು ಈಗ ದೂರಾಗಿರಬಹುದು... ಆದರೆ ನಿನ್ನ ನೆನಪುಗಳು ಮಾತ್ರ ಎಂದೆಂದಿಗೂ ನಿತ್ಯ ನೂತನ ಹೃದಯದಲ್ಲಿ... ಇಲ್ಲಿ ದೂಷಣೆಗಳಿಗೆ ಆಸ್ಪದವಿಲ್ಲ, ಅಥವಾ ಬೇಕೆಂದೇ ಹೊರಟೆ ಎಂಬ ಮಿಥ್ಯಾಪವಾದವನ್ನೂ ಮಾಡುವುದಿಲ್ಲ. ಕೆಲವೊಮ್ಮೆ ಹೀಗೆ ಪರಸ್ಪರ ಬೇರೆ ಬೇರೆಯಾಗಿರುವುದರಿಂದಲೂ ಪ್ರೀತಿ ಹೆಚ್ಚುತ್ತದಂತೆ, ಎನ್ನುತ್ತಾರೆ. ಇದು ಸತ್ಯವೋ...? ಸುಳ್ಳೋ...? ವಿಚಾರಿಸಲಾರೆ.
ನನ್ನೆದುರಿಗೆ ಇದ್ದಾಗಲೂ ಮಾತನಾಡದೆ ಮೌನವಾಗಿಯೇ ಎಲ್ಲವನ್ನೂ ಗಮನಿಸಿಯೂ ಏನನ್ನೂ ವಿವರಿಸದಂತೆ ಹೊರಟವರು ತಾವಲ್ಲವೇ? ಈಗ ಎಲ್ಲೋ ದೂರುದಲ್ಲಿ ಕುಳಿತು ನನ್ನೊಂದಿಗೆ ಹರಟುವೆಯೋ...? ಉತ್ತರಿಸಲಾರೆ..! ಏಕೆಂದರೆ ನನಗೋ ಒಂದರ ನಂತರ ಮತ್ತೊಂದನ್ನು ಕಳೆದುಕೊಳ್ಳುವುದು ಯಾವತ್ತಿನ ಹವ್ಯಾಸವಾಗಿದೆ. ಹುಟ್ಟಿನಿಂದಲೂ ನಾನು ಪಡೆಯದ ವಸ್ತುಗಳ ಪಟ್ಟಿಯನ್ನೇ ಇಟ್ಟಿಲ್ಲವೇನೋ..? ಅಥವಾ ಹೀಗೆ ಜೊತೆಗಿದ್ದರೂ ನನ್ನದಲ್ಲವೆಂದು ತಿಳಿದು ಬದುಕಿದೆನಾ..? ಗೊತ್ತಾಗುತ್ತಿಲ್ಲ....
ಹಾಗಾಗಿಯೇ ನನ್ನ ಸ್ನೇಹಿತರೆಲ್ಲರ ಮಧ್ಯದಲ್ಲಿ ಇಂದಿಗೂ ಒಬ್ಬಂಟಿಯೇ...! ಹೇಳಲೇ ಬೇಕಾದ ಎಲ್ಲವನ್ನೂ ಕೂಡಾ ಸಣ್ಣ ಸೂಚನೆಯನ್ನೂ ಕೊಡದೆ ತುಳಿದು ಎದ್ದುಬರುವುದು ಅನಿವಾರ್ಯವಾಗಿದೆ. ಅವುಗಳನ್ನು ವಿವರಿಸಲು ಹೊರಟರೆ ಯಾರಿಗೂ ಅರ್ಥವಾಗದೇನೋ..? ಅಲ್ಲದೆ ಜೊತೆಗಿರುವ ಗೆಳೆಯರೆಲ್ಲರೂ ತಮ್ಮ ಹೃದಯವನ್ನೇ ತೆರದಿಡುತ್ತಾರೆ. ಅದೆಲ್ಲವಕ್ಕೂ ಸಾಂತ್ವನ ಹೇಳಿ, ನನ್ನದೆಲ್ಲವನ್ನೂ ನುಂಗಿಕೊಂಡೇ ಇರುತ್ತೇನೆ. ವಿವರಿಸ ಹೊರಟರೆ ಮಳೆಗಾಲದ ನದಿಯಂತೆ ರಾಡಿ, ರಾಡಿಯಾಗುತ್ತದೆ ಈ ಮನ. ಸಂತೈಸ ಬಂದರೂ ಅವೆಲ್ಲವಕ್ಕೂ ಪೂರ್ಣ ವಿರಾಮವನ್ನಿಕ್ಕಿಯೇ ವ್ಯವಹರಿಸುತ್ತೇನೆ. ಹಾಗಾಗಿಯೇ ಕಳೆದುಕೊಳ್ಳುವುದರಲ್ಲಿಯ ಸುಖಕ್ಕಿಂತ ಹೆಚ್ಚು ದುಃಖವಿದ್ದರೂ, ಸಂತೋಷವಾಗಿದ್ದೇನೆ ಎಂಬ ಭ್ರಮೆಯಲ್ಲಿಯೇ ಬದುಕನ್ನು ಸವೆಸಬೇಕು.
ನಿನ್ನನ್ನೂ ಸೇರಿದಂತೆ ನಾನು ಕಳೆದುಕೊಂಡಿರುವ ಪಟ್ಟಿ ದೊಡ್ಡದಿದೆ. ಈಗ ಅದಕ್ಕೊಂದು ಹೊಸ ಸೇರ್ಪಡೆಯಾಗಿದೆ. ವಿಶೇಷವೇನೂ ಉಳಿದಿಲ್ಲ. ಈ ಜಗತ್ತಿನಲ್ಲಿ ``ಪ್ರತೀ ಕ್ಷಣವೂ ಸಾಯುತ್ತಿರಬಹುದು... ಆದರೆ ಎಲ್ಲರಿಗೂ ಹೊಸ ಹುಟ್ಟಿನ ಚಿಂತೆ ಮಾತ್ರ...'' ಇಲ್ಲಿ ಕಳೆದು ಕೊಂಡಿದ್ದಕ್ಕೆ ಯೋಚಿಸುತ್ತಾ ಕುಳಿತುಕೊಳ್ಳುವವರು ಯಾರೂ ಇಲ್ಲವೇನೋ...? ನನ್ನೊಬ್ಬನನ್ನು ಹೊರತುಪಡಿಸಿ...!
ಏನೇ ಕೂಡಿ, ಕಳೆದರೂ ಜೀವನ ಮಾತ್ರ ಸಾಗುತ್ತಿರುತ್ತದೆ. ಆದರೆ ನಮ್ಮ ಮೇಲೆ ಯಾವ ರೀತಿ ಪರಿಣಾಮವನ್ನು ಅದು ಬೀರಿದೆ ಎನ್ನುವುದು ಎಂದಿಗೂ ದೊಡ್ಡ ಸಂಗತಿಯಲ್ಲ...
========================================================================
#love, #college, #features, #loveandlife, #life, #ಸಮುದ್ರ, #ನೀರು, #ಆದಿ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಅನಿವಾರ್ಯತೆ, #ಭಾರ, #ಉತ್ತರ, #ಹಾಳು #ಯುಗಾದಿ #ಮಾಘ #ಹೃದಯ #ಸಮಾಧಾನ
0 Comments