ಮತ್ತೆ ನೀನೇ ಎದುರಿಗೆ ಬಂದು ನಿಂತು ಕಾಡಿಸುತ್ತಿದ್ದೀಯಾ..ಎಷ್ಟೇ ಮರೆಯೋಣವೆಂದರೂ ನೀನು ಮಾತ್ರ ಮಾಗಿ ಚಳಿಯಲ್ಲಿ ಹುಟ್ಟಿ ಬರುವ ಸೂರ್ಯನಂತೆ..  

   ಹೌದು, ಇಷ್ಟು ದಿನ ಕಾಣೆಯಾಗಿದ್ದ ನೀನು ಈ ಮುಸಾಫಿರ್‌ನ ಕಣ್ಮುಂದೆ ಹೆಜ್ಜೆ ಹಾಕಿದ್ದು ನೆನಪಿಸಿಕೊಂಡರೆ ಮುಂದಿನ ಏಳೂ ಜನ್ಮಕ್ಕೆ ನಿದ್ದೆ ಬರುವುದಿಲ್ಲ.. ನನಗೆ ಬೇಕಿತ್ತಾ..? ನಿನಗೆ ಬೇಡವಾಗಿತ್ತಾ..? ಅಥವಾ ಅದು ಪರಿಸ್ಥಿತಿಯ ಕೈಗೂಸಾಗಿತ್ತಾ..! ಅದ್ಯಾವುದೂ ಇಂದಿಗೆ ಅಪ್ರಸ್ತುತ. ಆದರೂ ಮತ್ತೆ ಮತ್ತೆ ನೀನು ನನ್ನೊಂದಿಗೆ ಹೃದಯದ ಬಡಿತದಂತೆ ಸದಾ ಇರಬೇಕೆಂದು ಬಯಸುತ್ತದೆ ಈ ಮನ. ಹಾಗಿದ್ದಾಗ ಋತುಗಳೇ ಉರುಳಿದ ಬಳಿಕ ಮಾಘ ಮಾಸದಲ್ಲಿ ನಿನ್ನಾಗಮನ ಬೆಂಕಿಯ ಗೂಡಿನ ಮುಂದೆ ಬೆಚ್ಚಗೆ ಮಲಗಿದ್ದ ಮನಸ್ಸಿಗೆ ಎಚ್ಚರ ತಪ್ಪಿಸುವಂತಾಗಿತ್ತು. ಆಗ ಎದ್ದಿದ್ದು ಒಂದೇ ಪ್ರಶ್ನೆ.. 

   ಏಕೆ ಬಂದೆ? 

   ಉತ್ತರವನ್ನು ಯಾರ ಬಳಿ ಕೇಳಲಿ.. ಹೇಗೆ ಅಂತ ವಿವರಿಸಲಿ ಆ ತಳಮಳ.. 

   ಆದರೂ ಮನದಲ್ಲಿ ಮೂಡಿದ ಸಾವಿರಾರು ಪ್ರಶ್ನೆಗಳಿಗೆ ಮುಗುಳು ನಗುತ್ತಾ ನೀ ಬೀರುವ ಕಣ್ಣೋಟವೊಂದೇ ಉತ್ತರವಾ! ಎಲ್ಲಿ ಹೇಳಿಕೊಳ್ಳಲಿ ಈ ದುಗುಡವನ್ನ.. 

   ಮತ್ತೇಕೆ ಇಂಥ ಡೋಲಾಯಮಾನದಲ್ಲಿ ತಂದು ನಿಲ್ಲಿಸಿ ಬಿಟ್ಟೆ ನನ್ನನ್ನು.. ಉತ್ತರಿಸುವವರ‍್ಯಾರು? ಎಲ್ಲಾ ಗೊತ್ತಿದ್ದರೂ ನನ್ನ ಬಾಯಲ್ಲೇ ಕೇಳಬೇಕೆನ್ನುವ ನಿನ್ನ ಹಠಮಾರಿತನಕ್ಕೆ ನಾನೇ ಬಲಿಯಾಗಬೇಕಾ? ಹಸಿ ಗೋಡೆಗೆ ಹೊಡೆಯುವ ಕಲ್ಲಿನಂತಿರುತ್ತದೆ ನೀನು ಕೇಳುವ ಮಾತುಗಳೊಂದೊಂದು.. ಉತ್ತರ ಹೇಳುವಂತಿಲ್ಲ.. ಬಿಡುವಂತಿಲ್ಲ.. ಗಾಯವಾಗುವುದು ಮಾತ್ರ ಈ ಬಡಪಾಯಿ ಹೃದಯಕ್ಕೆ. ಅದನ್ಯಾರ ಬಳಿ ಹೇಳಲಿ. ನನ್ನದೇನನ್ನೂ ಕೇಳದೆ, ಬರೀ ನಿನಗೇನು ಹೇಳಬೇಕೋ ಅದಷ್ಟನ್ನೂ ಮತ್ತು ಅದಷ್ಟನ್ನೇ ಹೇಳಿ ಸುಮ್ಮನಾಗುತ್ತೀ. ಆಗ ತಡಬಡಾಯಿಸುವುದೊಂದೇ ನನಗುಳಿದ ಮಾರ್ಗ. ಅಂಥ ತಪ್ಪು ನನ್ನದೇನು ಗೆಳತಿ? 

   ಯಾಕೆ ಇಂಥ ಪ್ರಶ್ನೆ ಕೇಳುತ್ತಿದ್ದೇನೆ ಅಂತ ಅಚ್ಚರಿಯಾಗುತ್ತಿದೆಯಾ? ಅದಕ್ಕೆ ವಿವರಿಸುವ ಅನಿವಾರ್ಯತೆ ನಿನಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಉತ್ತರ ಹುಡುಕಲೇಬೇಕಾದ ಸಂದಿಗ್ಧತೆಯಲ್ಲಿ ನಾನಿದ್ದೇನೆ. ಇಲ್ಲದಿದ್ದರೆ ವಿನಾಕಾರಣ ಮರುಗುವುದು ಈ ಬಡಪಾಯಿ ಹೃದಯ. 

   ಏಕೆಂದರೆ ನಮ್ಮಿಬ್ಬರ ಪರಿಚಯವಾದ ಇಷ್ಟು ವರ್ಷದಲ್ಲಿ ಒಮ್ಮೆಯೂ ನಿನಗೆ ಬೇಸರವಾಗುವಂತೆ ನಡೆದುಕೊಂಡ ಘಟನೆಗಳು ನನಗೆ ನೆನಪಿಲ್ಲ. ನಿನಗೆ ಬೇಕೆನಿಸಿದಾಗಲೆಲ್ಲ ಬಂದು ಏನೇನು ಹೇಳಬೇಕೋ ಅದೆಲ್ಲವನ್ನೂ ಅರುಹಿ ಮರೆಯಾಗುತ್ತಿದ್ದೆ. ಅಪರೂಪಕ್ಕೊಮ್ಮೆ ಕಣ್ಣೀರು ಒರೆಸಿದ್ದು ಬಿಟ್ಟರೆ ನಾನು ಹೇಗಿದ್ದೇನೆ ಅಂತ ಸೌಜನ್ಯಕ್ಕೂ ಒಂದು ಮಾತು ಆಲಿಸಿದ್ದಿಲ್ಲ.. ಇಲ್ಲವೆನ್ನುತ್ತಿಲ್ಲ. ಆದರೆ ನಿನ್ನಂತೆಯೇ ನನಗೂ ಒಂದು ಪುಟಾಣಿ ಹೃದಯವಿದೆ. ಅದರ ತುಂಬಾ ಸಮುದ್ರದಷ್ಟು ಭಾವನೆಗಳಿವೆ. ಯಾವಾಗಲಾದರೊಮ್ಮೆ ಏಳುವ ಸುನಾಮಿಯನ್ನು ತಣಿಸುವ ಕನಿಷ್ಟ ಭಾವವನ್ನೂ ತೋರಿಸಲಿಲ್ಲವಲ್ಲ. ಈಗ ಅವೆಲ್ಲವನ್ನೂ ಹೇಳಿದರೆ ಆಪಾದನೆಗಳಾಗುತ್ತವೆ. ಆದರೂ ನನಗದು ಬೇಸರ ಎನಿಸುವುದಿಲ್ಲ. ಎಷ್ಟು ದಿನ, ಹಗಲು-ರಾತ್ರಿ ಎನ್ನದೆ ಹರಟಿದ್ದಿದೆ.. ನಿದ್ದೆ ಬಿಟ್ಟು ಒಟ್ಟಾಗಿ ಓಡಾಡಿದ್ದಿದೆ.. ಎರಡು ದೇಹ ಒಂದು ಹೃದಯದಂತಿದ್ದವರು ಈಗ ಎಲ್ಲವೂ ಅಯೋಮಯ..! 

   ಯಾಕೆ ಹೀಗೆ..? 

ಯಾರ ಶಾಪ ತಟ್ಟಿತೋ ಈ ಸಂಬಂಧಕ್ಕೆ! 

============================================================== 

#Love #Life #LoveandLife #Features #Stories, $Samudra #Mind #Feeling #Smile #ElevateFOOT #ಕಾರಣ #ನೀನು #ಶಾಪ #ಸಂಬಂಧ #ಹೃದಯ #ಸಮುದ್ರ #ಭಾವನೆ #ಪರಿಚಯ #ಕಣ್ಣೀರು #ವರ್ಷ #ಬೇಸರ #ನನಗೆ #ನೆನಪಿಲ್ಲ   #ಅರುಹಿ #ಮರೆ #ಅಪರೂಪ #ಘಟನೆ  #ಸಂದಿಗ್ಧತೆ #ಮುಗುಳುನಗು #ಕಣ್ಣೋಟ #ಉತ್ತರ #ದೇಹ #ದುಗುಡ #ಡೋಲಾಯಮಾನ #ಹಠಮಾರಿತನ #ಬಲಿ #ಹಸಿಗೋಡೆ #ಕಲ್ಲು #ಮಾತು #ಗಾಯ #ಬಡಪಾಯಿ #ಮಾರ್ಗ #ತಪ್ಪು #Thought #Me #Friend #talk
Tags: #Love #Life #LoveandLife #Features #Stories

Post a Comment

0 Comments

Skip to main content