ಸಾಹಸಯಾತ್ರೆಯ ಮಹಾ ಪರ್ವ!

=================== 
200ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಚಾರಣಕ್ಕೆ ಹೋಗುವುದು ಮೂರ್ನಾಲ್ಕು ದಶಕಗಳಿಂದೀಚೆಗೆ ಶೋಕಿಯ, ಖಯಾಲಿಯ ಸಂಗತಿಯಾಗಿದೆ.  ತನಗೆ ಶಕ್ತಿ ಇದೆ ಅಂತನೋ, ಜೇಬಿನಲ್ಲಿ ಹಣವಿದೆ ಅಂತಲೋ ಒಂದಷ್ಟು ಜನರನ್ನು ಕರೆದುಕೊಂಡು ವಾರಾಂತ್ಯದಲ್ಲಿ ಕಾಡು ಮೇಡು ಸುತ್ತಿ ಮೋಜು ಮಸ್ತಿ ಮಾಡುವುದು ಈಚಿನ ಟ್ರೆಂಡ್ ಆಗುತ್ತಿದೆ. ಅದು ಅಪಾಯ. ಜೀವ ಒಂದಿದ್ರೆ  ಬಿಕ್ಷೆ ಬೇಡಿಯಾದರೂ ಬದುಕಬಹುದೆಂಬ ಮಾತಿದೆ. ಜೀವವೇ ಇಲ್ಲದಿದ್ದರೆ..? ಚಾರಣ ಎಂದಿಗೂ ಬದುಕಿನೊಂದಿಗೆ ಆಡುವ ಆಟವಲ್ಲ. ಅದು  ಮನೋವಿಕಾಸದ ಮಾರ್ಗ. ನಮ್ಮೊಳಗಿನ ವ್ಯಕ್ತಿತ್ವದ ಪರಿಚಯಿಸುವ ಪಯಣ. ಅದಕ್ಕೊಂದು ಆಧ್ಯಾತ್ಮದ ಟಚ್ ಇದೆ. ಹೀಗಿದ್ದರೆ ನಾವು ಹೋಗುವ ಚಾರಣ ಹೇಗಿರಬೇಕು? ಎಂತಿರಬೇಕು? ಎಂಬ ಸಮಗ್ರ ಮಾಹಿತಿ ಇಲ್ಲಿದೆ.
===================

'It is not the mountain we conquer, but ourselves'

-ಸರ್ ಎಡ್ಮಂಡ್ ಹಿಲರಿ

ಯಾವುದೋ ಒಂದು ಬೆಟ್ಟವನ್ನೋ, ಪರ್ವತವನ್ನೋ ಹತ್ತಿಳಿದು ಬಂದ ನಂತರ ತುಂಬಾ ಜನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವುದು ಹೀಗೆ, 'we conquer the mountain'. ಆದರೆ ಚಾರಣದ ಮಹತ್ವ ಅರಿತ ಯಾರೊಬ್ಬರೂ ಯಾವ ಪರ್ವತವನ್ನಾಗಲಿ, ಗುಡ್ಡ ಬೆಟ್ಟಗಳನ್ನಾಗಲಿ ಅತಿಕ್ರಮಿಸುವುದಿಲ್ಲ. ಬದಲಿಗೆ ತನ್ನೊಳಗಿನ ಮನುಷ್ಯನ ಹುಡುಕಾಟಕ್ಕಾಗಿ ಆ ಪ್ರದೇಶಕ್ಕೆ ಹೋಗಿ ಬರುತ್ತಾನೆ. ತನ್ನನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಮನುಷ್ಯನೊಳಗಿನ ಸೊಕ್ಕು, ಸೆಡವು, ಅಹಮ್ಮಿಕೆಯನ್ನು ಹೊರಗೆಡವಲು ಚಾರಣ ಪ್ರಮುಖ ದಾರಿ ಎಂದರೂ ತಪ್ಪಾಗಲಾರದು. ಪ್ರಕೃತಿಯ ಎದುರು ನಾವೆಷ್ಟು ಕುಬ್ಜರು ಎಂಬುದನ್ನು ಕ್ಷಣಕ್ಷಣಕ್ಕೂ ತೋರಿಸಿಕೊಡುತ್ತಿರುತ್ತದೆ. ಅರುಹುತ್ತಿರುತ್ತದೆ ಚಾರಣ. ಹೀಗಾಗಿ ನೈಜ ಚಾರಣಿಗರಿಗೆ ಪರ್ವತಗಳನ್ನಾಗಲಿ, ಗುಡ್ಡ ಬೆಟ್ಟಗಳನ್ನಾಗಲಿ ಏರುವುದು ವಿಜಯದ ಸಂಕೇತವಲ್ಲ. ತನ್ನ ಅಹಂಕಾರವನ್ನು ಬದಿಗಿಟ್ಟು, ಜತೆಗಾರರ ತಪ್ಪು-ಒಪ್ಪುಗಳಿಗೆ ಸಹಭಾಗಿಯಾಗಿ, ‘ಎಲ್ಲರೊಳಗೊಂದಾಗು ಮಂಕುತಿಮ್ಮ' ಎಂಬ ನುಡಿ ಮುತ್ತಿನಂತೆ ಬದುಕುವುದನ್ನು ಕಲಿಸುವುದು ಚಾರಣ. ನೈಜ ಮನುಷ್ಯತ್ವದ ಅರಿವನ್ನು ತಿಳಿಸಿಕೊಡುತ್ತದೆ. ಪರೋಪಕಾರದ ಮಹತ್ವ, ಟೀಂ ಪ್ಲೇಯರ್ ಆಗುವುದು ಹೇಗೆ?, ಸಮಯಪ್ರಜ್ಞೆ, ಹೊಂದಾಣಿಕೆಯ ಗುಣ, ಮೊದಲಾದ ಕಲಿಕೆಯ ಪಾಠ ಪರಿಸರದ ಮಡಿಲಲ್ಲಾಗುತ್ತದೆ. ತೇನ್‌ಸಿಂಗ್ ನೋರ್ಗೆ ಜತೆಗೂಡಿ ಮೊಟ್ಟಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ ಹತ್ತಿದ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಹೇಳಿದ ಮಾತು ಸಾರ್ವಕಾಲಿಕ ಸತ್ಯ. 
================= 

   ಇತ್ತೀಚಿನ ವರ್ಷದಲ್ಲಿ ಚಾರಣಕ್ಕೆ ಹೋಗಿ ಬರುವ ಪ್ರವೃತ್ತಿ ಸಾರ್ವತ್ರಿಕವಾಗುತ್ತಿದೆ. ಅದಕ್ಕೆ ವಯಸ್ಸಿನ ಇತಿ ಮಿತಿ ಇಲ್ಲವಾಗಿದೆ. ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದವರು ವರ್ಷವಿಡೀ ಚಾರಣದ ಆನಂದ ಸವಿಯುತ್ತಾರೆ. ಹಲವರು ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಚಾರಣಕ್ಕೆ ಹೋಗಿಬಂದರೆ, ಮತ್ತೊಂದಿಷ್ಟು ಜನ ಹವ್ಯಾಸಕ್ಕಾಗಿ, ಸಾಹಸ ಪ್ರವೃತ್ತಿಯವರಾಗಿಯೋ ದೇಶ-ವಿದೇಶಗಳ ಕಾಡು ಮೇಡು,ಗುಡ್ಡ-ಗವಿ, ಪರ್ವತಗಳ ಎತ್ತರವನ್ನಳೆದೋ, ಕಂದಕಗಳ ಆಳವನ್ನು ಸ್ಪರ್ಷಿಸಿಯೋ, ಆಗಸದಿಂದ ಹಕ್ಕಿಯಂತೆ ಹಾರಿಯೋ ಮನದಾಸೆ ತಣಿಸಿಕೊಳ್ಳುತ್ತಾರೆ.

   ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗುತ್ತಿರುವ ಚಾರಣಕ್ಕೆ ಸುಮಾರು 200ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕಳೆದ ಮೂರ್ನಾಲ್ಕು ದಶಕಗಳಿಂದೀಚೆಗೆ ಟ್ರೆಕ್ಕಿಂಗ್‌ಗೆ ಹೋಗಿ ಬರುವವರ ಸಂಖ್ಯೆ ಅಧಿಕವಾಗುತ್ತಿದೆ. ಮೂಲತಃ ಅಲೆಮಾರಿಯಾಗಿದ್ದ ಮಾನವ ಬೇಟೆಯಾಡಿ ಜೀವನ ನಡೆಸುತ್ತಿದ್ದ. ಬಳಿಕ ಒಂದೆಡೆ ನೆಲೆ ನಿಂತು ಕೃಷಿ ಆರಂಭಿಸಿದ್ದು ಎಲ್ಲರಿಗೂ ತಿಳಿದಿದ್ದೆ. ಹೀಗೆ ನೆಲೆ ನಿಂತ ಮನುಷ್ಯ ಬೇಟೆಯಾಡುವುದನ್ನು ಎಂದಿಗೂ ನಿಲ್ಲಿಸಿಲ್ಲ. ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳ ಕಾಲ ಮನೆ, ಮಠ ಬಿಟ್ಟು ನೂರಾರು ಕಿ.ಮೀ. ದೂರದವರೆಗೆ ಹೋಗಿ ಬೇಟೆಯಾಡಿಕೊಂಡು ಬರುತ್ತಿದ್ದನಂತೆ. ಇಂಥವರ ಬಗ್ಗೆ ದಂತಕಥೆಗಳೂ ಅಮೆರಿಕಾದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಅವರು ಕುದುರೆ ಲಾಳ ತಯಾರಿಕೆ, ಮರ ಕೆಲಸ, ಬಂದೂಕು ತಯಾರಿಸುವುದು, ರಿಪೇರಿ ಮಾಡುವುದು, ಕೊಡಲಿಗಳ ಬಳಕೆ, ಹೀಗೆ ವೈವಿದ್ಯಮಯ ಕೆಲಸಗಳಲ್ಲಿ ಚತುರರಾಗಿದ್ದರು. ಅಲ್ಲದೆ ಬೇಟೆಯಾಡುವುದು, ಬಲೆ ಬೀಸುವುದು, ಶತ್ರುಗಳನ್ನು ಹಿಂಬಾಲಿಸುವುದು, ಅಡಗಿಕೊಳ್ಳುವುದು, ವಿಭಿನ್ನ ಚಿನ್ಹೆಗಳನ್ನು ಗುರುತಿಸುವುದು, ಬೇರೆ ಬೇರೆ ಹವಾಮಾನಗಳಲ್ಲಿ ಮನೆಗಳನ್ನು ಕಟ್ಟುವುದನ್ನು ಅರಿತುಕೊಂಡಿದ್ದರು. ಎಂಥದ್ದೇ ಸನ್ನಿವೇಶದಲ್ಲೂ ದೃತಿಗೆಡದೆ, ಸುರಕ್ಷಿತವಾಗಿ ಹೊರಬರುವ ತಾಂತ್ರಿಕತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಇವರಿಂದಲೂ ಇಂದಿನ ಚಾರಣದ ಸ್ವರೂಪ ಬೆಳೆದು ಬಂದಿದೆ ಎಂದು ಹೇಳಲಾಗುತ್ತದೆ.

   ಚಾರಣ ಹೇಗಿರಬೇಕು? ಯಾಕೆ ಮಾಡಬೇಕು? ಎಲ್ಲೆಲ್ಲಿ ಹೋಗಬೇಕು? ಅದಕ್ಕೆ ಪೂರ್ವ ತಯಾರಿಗಳೇನು? ಚಾರಣಕ್ಕೆ ಹೋದಾಗ ಊಟೋಪಚಾರದ ವ್ಯವಸ್ಥೆಗಳೇನು? ಉಡುಗೆ ತೊಡುಗೆಗಳ ಕಥೆ ಎಂಥದ್ದು? ಆರೋಗ್ಯ ಹದಗೆಟ್ಟರೆ ಔಷಧೋಪಚಾರ ಹೇಗೆ? ವರ್ಷದ ಯಾವ ಸಮಯದಲ್ಲಿ ಚಾರಣಕ್ಕೆ ಹೋಗಬೇಕು? ಎಷ್ಟು ದಿನಗಳ ದೈಹಿಕ ತಯಾರಿ ಅವಶ್ಯಕ? ಮಾನಸಿಕ ಸಿದ್ಧತೆಗಳೇನು? ಇವೆಲ್ಲ ತಿಳಿದುಕೊಳ್ಳುವ ಮುಂಚೆ ಹೈಕಿಂಗ್, ಟ್ರೆಕ್ಕಿಂಗ್ ಹಾಗೂ ಪರ್ವತಾರೋಹಣದ ವ್ಯತ್ಯಾಸ ಅರಿಯಲೇಬೇಕು. 

 ಹೈಕಿಂಗ್

ಹಳ್ಳಿಗಾಡಿನಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಸುಮ್ಮನೆ ನಡೆದುಕೊಂಡು ಹೋಗುವುದನ್ನು ಹೈಕಿಂಗ್ ಎಂದು ಹೇಳಲಾಗುತ್ತದೆ. ದಿನಕ್ಕೆ ಒಂದಷ್ಟು ಕಿ.ಮೀ.ಗಳಷ್ಟು ಸುತ್ತಾಟ ಮಾಡಿ ಗ್ರಾಮೀಣ ಭಾಗದ ಪರಿಸರ, ಅವರ ಆಚಾರ-ವಿಚಾರ, ಉಡುಗೆ-ತೊಡುಗೆಗಳನ್ನು ತಿಳಿದು ಕೊಳ್ಳುವುದಾಗಿರುತ್ತದೆ. ಹೀಗೆ ಸುತ್ತಾಡುವುದರ ಜತೆಯಲ್ಲಿ ಒಂದಷ್ಟು ಕಲಿಕೆಯೂ ಸಾಧ್ಯವಾಗುತ್ತದೆ.ಒಂದೆರಡು ದಿನಗಳಿರಬಹುದು, ವಾರಗಳ ಲೆಕ್ಕದಲ್ಲಾದರೂ ಹೈಕಿಂಗ್ ಮಾಡಬಹುದು. ಎರಡು ಮೂರು ಜನ ಸ್ನೇಹಿತರು ಕೂಡಿಕೊಂಡು ಹೋಗುವುದು ಅಥವಾ ಆರೆಂಟು ಜನ ಗುಂಪುಗೂಡಿಕೊಂಡೂ ಹೈಕಿಂಗ್‌ನ ಮಜ ಅನುಭವಿಸಬಹುದು. ಇಲ್ಲಿ ದೈಹಿಕ ಸವಾಲು, ಅಪಾಯದ ಸನ್ನಿವೇಶಗಳು ಬಹಳ ಕಡಿಮೆ. ಪೂರ್ವ ತಯಾರಿ ಇಲ್ಲದೆಯೂ ಹೈಕಿಂಗ್‌ಗೆ ಹೋಗಬಹುದು. ನಾವು ತೆಗದುಕೊಂಡು ಹೋಗುವ ಬ್ಯಾಗ್‌ನಲ್ಲಿ ಏನೆಲ್ಲ ಇರಬೇಕು ಎಂಬುದಷ್ಟೇ ಮುಖ್ಯವಾಗುತ್ತದೆ. ಒಂದೆರಡು ಬಟ್ಟೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಒಂದಷ್ಟು ಹಣ್ಣು, ನೀರು, ಮೊದಲಾದವುಗಳನ್ನು ಪ್ಯಾಕ್ ಮಾಡಿಕೊಂಡರೆ ಸಾಕು ಎಂಬುದು ಅನುಭವಿಗಳ ಅಂಬೋಣ. 

ಟ್ರೆಕ್ಕಿಂಗ್

ಹೈಕಿಂಗ್ ಹಾಗೂ ಟ್ರೆಕ್ಕಿಂಗ್‌ಗೆ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಹೆಚ್ಚಿನವರಿಗೆ ಇವೆರಡೂ ಒಂದೇ ಎಂಬ ಭಾವನೆ ಇದೆ. ಟ್ರೆಕ್ಕಿಂಗ್‌ ಎಂದರೆ ‘ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಎಂಥದ್ದೇ ಪರಿಸ್ಥಿತಿಯಲ್ಲೂ ಪ್ರವಾಸ ಅಥವಾ ವಲಸೆ ಹೋಗುವುದು’ ಎಂಬ ಅರ್ಥವಿದೆ. ಹೈಕಿಂಗ್‌ಗೆ ಹೋಲಿಸಿದರೆ ಟ್ರೆಕ್ಕಿಂಗ್ ಸ್ವಲ್ಪ ಅಪಾಯಕಾರಿ. ಸಾಹಸ ಪ್ರವೃತ್ತಿ ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ ಪ್ರವಾಸ. ಒಂದಷ್ಟು ಜನ ಸ್ನೇಹಿತರು ಒಟ್ಟಾಗಿ ಅಗತ್ಯ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ನಿರ್ದಿಷ್ಟ ಜಾಗಕ್ಕೆ ಪ್ರವಾಸ ಹೋಗುವುದಾಗಿದೆ.
   ಟ್ರೆಕ್ಕಿಂಗ್‌ಗೆ ಇಂಥದ್ದೇ ಜಾಗದಲ್ಲಿ ಹೋಗಬೇಕು ಎಂಬ ಕಟ್ಟುಪಾಡುಗಳೇನೂ ಇಲ್ಲ. ಕಾಡು ಮೇಡು ಅಲೆಯುವುದು, ಒಂದು ಪ್ರದೇಶದಿಂದ ಮತ್ತೊಂದೂರಿಗೆ ರಸ್ತೆಯ ಮೇಲೆ ನಡೆದುಕೊಂಡು ಹೋಗುವುದು, ಪರ್ವತದ ತಪ್ಪಲು ಅಥವಾ ಹಿಮನದಿಗಳ ಉಗಮ ಸ್ಥಾನಕ್ಕೆ ಹೋಗಿ ಬರುವುದನ್ನೂ ಮಾಡಬಹುದು. ಹೀಗೆ ಹೋಗಿ ಬರಲು ವಾರಗಳು ಅಥವಾ ಇನ್ನೂ ಹೆಚ್ಚಿನ ದಿನ ಬೇಕಾಗಬಹುದು. 

ಪರ್ವತಾರೋಹಣ

ಇದು ಅತಿ ಅಪಾಯಕಾರಿ ಸಾಹಸದ ಕಾರ್ಯ. ಸಮುದ್ರ ಮಟ್ಟದಿಂದ 5,000 ಮೀ. ಹಾಗೂ ಅದಕ್ಕಿಂತ ಎತ್ತರದ ಪರ್ವತಗಳನ್ನು ಹತ್ತುವುದು ಪರ್ವತಾರೋಹಣ ಎಂದೆನಿಸಿಕೊಳ್ಳುತ್ತದೆ. ಚಾರಣದಲ್ಲಿ ಹಿಮ ಪರ್ವತಗಳನ್ನು ಏರುವಾಗ ತಾಂತ್ರಿಕವಾಗಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಅಗತ್ಯ. ವೇಗವಾಗಿ ಬೀಸುವ ಹಿಮ ಗಾಳಿ, ಅಪಾಯಕಾರಿ ಕ್ರೆವಾಸ್‌ಗಳು, ಅವಲಾಂಚ್ (ಹಿಮದ ಬೆಟ್ಟಗಳು ಕುಸಿದು ಜಾರಿ ಬರುವುದು), ಹವಾಮಾನ ವೈಪರಿತ್ಯ, ಹಿಮಪಾತದಿಂದ ಬಚಾವಾಗುವುದು, ಇವೆಲ್ಲವುಗಳ ಜತೆಜತೆಯಲ್ಲಿ ಐಸ್‌ಆ್ಯಕ್ಸ್‌ ಬಳಕೆ,  ಹಿಮದ ಮೇಲೆ ನಡೆಯುವ ರೀತಿ, ಕ್ರ್ಯಾಂಪಾನ್‌ಗಳ ಉಪಯೋಗ, ಹಿಮದಲ್ಲಿ ಹಗ್ಗವನ್ನು ಫಿಕ್ಸ್‌ ಮಾಡುವ ವಿಧಾನ ಹೀಗೆ ಹಲವು ಟೆಕ್ನಿಕ್‌ಗಳನ್ನು ಅರಿತಿರಬೇಕು. ಪುಸ್ತಕ ಜ್ಞಾನದೊಂದಿಗೆ ಪ್ರಾಯೋಗಿಕ ಅನುಭವವೂ ಪರ್ವತಗಳ ಮೇಲೆ ಅತ್ಯವಶ್ಯಕ. ಅತಿ ಕಡಿಮೆ ಪ್ರಮಾಣದ ಆಮ್ಲಜನಕವಿರುವ ಪ್ರದೇಶಗಳಲ್ಲಿ ದಿನಗಳ ಲೆಕ್ಕದಲ್ಲಿ ಬದುಕುಳಿದು ಬರಬೇಕಾಗುತ್ತದೆ. ಹೀಗೆ ಜೀವದ ಮೇಲಿನ ಹಂಗು ತೊರೆದು, ಜೀವನವನ್ನು ಪಣಕ್ಕಿಟ್ಟು ಪರ್ವತವನ್ನು ಹತ್ತಿಳಿಯುವುದು ಸಾವಿರದಲ್ಲೊಬ್ಬರಿಗೋ ಇಬ್ಬರಿಗೋ ಸಾಧ್ಯವಾಗುವ ಮಾತು. 

   ಈ ಮೇಲಿನ ಮೂರರಲ್ಲಿ ಹೈಕಿಂಗ್ ಮಾಡುವುದು ಸುಲಭದ ಕೆಲಸ. ಒಂದಷ್ಟು ನಡೆಯುವ ಹವ್ಯಾಸ ಬೆಳೆಸಿಕೊಂಡರೆ ಯಾರು ಬೇಕಾದರೂ ಒಂದೆರಡು ದಿನಗಳ ಹೈಕಿಂಗ್ ಮಾಡಬಹುದು. ಟ್ರೆಕ್ಕಿಂಗ್ ಮತ್ತು ಮೌಂಟೆನಿಯರಿಂಗ್‌ನಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆ, ಸಾಮರ್ಥ್ಯದ ಅರಿವಾಗುತ್ತದೆ. ಜತೆಯಲ್ಲಿ ತಾಂತ್ರಿಕವಾಗಿಯೂ ತಿಳಿದುಕೊಂಡಿರಬೇಕು. ಚಾರಣದಲ್ಲಿ ಅವಶ್ಯಕವಿರುವ ಸೂಕ್ತ ಸಲಕರಣೆಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗುತ್ತದೆ. ಹಲವು ಪ್ರದೇಶಗಳಲ್ಲಿ ಅಗತ್ಯವಿರುವ ವಸ್ತುಗಳು ಬಾಡಿಗೆಗೆ ದೊರೆಯುತ್ತವೆ.

 ಚಾರಣದ ಪೂರ್ವ ತಯಾರಿ

   ಮೊಟ್ಟಮೊದಲು ಯಾವ ಜಾಗಕ್ಕೆ ಚಾರಣ ಹೋಗುತ್ತೇವೆ? ಯಾವ ಕಾಲದಲ್ಲಿ ಹೋದರೆ ಒಳಿತು ಎಂಬುದನ್ನು ಅರಿತು, ಸೂಕ್ತ ತಯಾರಿ ಮಾಡಿಕೊಳ್ಳಬೇಕು. ಟ್ರೆಕ್ಕಿಂಗ್ ಹಾಗೂ ಪರ್ವತಾರೋಹಣಕ್ಕೆ ಹೋಗುವ ಕನಿಷ್ಟ ಎರಡು ತಿಂಗಳ ಪೂರ್ವದಲ್ಲಿ ದೈಹಿಕ ವ್ಯಾಯಾಮ, ಯೋಗ,  ಧ್ಯಾನ, ಈಜು, ಭಾರ ಹೊತ್ತು ಒಂದಷ್ಟು ಕಿ.ಮೀ. ನಡಿಗೆ, ದೂರದ ಓಟಗಳ ಜತೆಯಲ್ಲಿ ಸ್ವಲ್ಪ ಹೆಚ್ಚು ಸತ್ವಯುತ ಆಹಾರ ಸೇವನೆ, ದಿನಕ್ಕೆ ಎಂಟರಿಂದ ಒಂಬತ್ತು ಗಂಟೆಗಳ ನಿದ್ದೆ ಅತ್ಯವಶ್ಯಕ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನ ಅಂಶ, ಕ್ಯಾಲ್ಶಿಯಂ, ವಿಟಮಿನ್‌ಗಳಿರಲಿ ಹಾಗೂ ಹೆಚ್ಚು ನೀರು ಸೇವನೆ ಮಾಡಬೇಕಾಗುತ್ತದೆ. ಈ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಸಕಾರಾತ್ಮಕ ಚಿಂತನೆ ಹಾಗೂ ಹೋಗುವ ಸ್ಥಳದ ಕುರಿತ ಮಾಹಿತಿ ಕಲೆಹಾಕಿ. ಗೂಗಲ್‌ನಲ್ಲಿ ಹುಡುಕಾಡಿ. ಸದ್ಯ ಆ ಸ್ಥಳಕ್ಕೆ ಹೋಗಿ ಬಂದವರು ಸಿಕ್ಕರೆ ಅವರೊಂದಿಗೆ ಚರ್ಚಿಸಿ. ಅವರು ನೀಡುವ ಸಲಹೆಗಳು ನಮಗೆ ಉಪಯುಕ್ತವಾಗಬಹುದು. ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ದೇಹದ ತೂಕ, ಹೃದಯ ಬಡಿತ, ರಕ್ತದೊತ್ತಡ ಚೆಕಪ್ ಮಾಡಿಸಿ. ಚಾರಣಕ್ಕೆ ಹೋಗುವ ತಂಡದ ಸದಸ್ಯರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಿ. ವಾರಕ್ಕೊಮ್ಮೆಯಾದರೂ ಪರಸ್ಪರ ಚರ್ಚೆ ನಡೆಸಿ.


ಸುರಕ್ಷಿತ ಚಾರಣ

   ಚಾರಣದಲ್ಲಿ ಸುರಕ್ಷತೆ ಪ್ರಮುಖ ಘಟ್ಟ. ತಂಡದಲ್ಲಿರುವ ಯಾರೊಬ್ಬರೋ ಮಾಡುವ ಕ್ಷುಲ್ಲಕ ಕಾರಣ ಎಲ್ಲರ ಪ್ರಾಣಕ್ಕೂ ಎರವಾಗಬಹುದು. ಪ್ರತಿ ನಡೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಸಣ್ಣ ಪುಟ್ಟ ಮನಸ್ಥಾಪಗಳಿಗೆ, ಜಗಳಗಳಿಗೆ ಮುಂದಾಗಬೇಡಿ. ಹಾಗೇನಾದರೂ ವೈಮನಸ್ಸಿದ್ದರೆ ಎಲ್ಲರೊಂದಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ನಮ್ಮಿಂದ ತಂಡದ ಉಳಿದವರಿಗೆ ಬೇಸರವಾಗುವುದು ಬೇಡ. ನಾನು ಎಂಬ ಅಹಮ್ಮಿಕೆಯನ್ನು ಚಾರಣದ ವೇಳೆಯಲ್ಲಿ ಮನೆಯಲ್ಲೇ ಬಿಟ್ಟು ಹೋಗುವುದು ಉತ್ತಮ. ಪರಸ್ಪರ ಸಹಾಯ ಮಾಡಿ. ಸಹಕರಿಸಿ. ನನಗೇ ಎಲ್ಲದೂ ತಿಳಿದಿದೆ ಎನ್ನುವ ನಡವಳಿಕೆ ಸರ್ವಥಾ ಸಲ್ಲದು. ಚಾರಣಕ್ಕೆ ಹೋದಾಗ ಅಲ್ಲಿನ ಕಾನೂನನ್ನು ಗೌರವಿಸಿ. ಗೈಡ್‌ಗಳು, ತಂಡದ ನಾಯಕ ಹೇಳುವ ಮಾತುಗಳನ್ನು ಮೀರಬಾರದು. ಕಾಡು ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಿದರೆ ಅವು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುತ್ತವೆ. 

ಚಾರಣ ಮತ್ತು ಕಾನೂನು

   ಭಾರತದಲ್ಲಿ ಪರ್ವತಾರೋಹಣ ಹಾಗೂ ಟ್ರೆಕ್ಕಿಂಗ್‌ಗೆ ಸಂಬಂಧಪಟ್ಟಂತೆ ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (ಐಎಂಎಫ್) ಇದ್ದು, ಇದು ಚಾರಣದ ಕುರಿತಾಗಿ ಸಾಕಷ್ಟು ಸಲಹೆ, ಸೂಚನೆ, ಒಂದು ಚೌಕಟ್ಟನ್ನು ರೂಪಿಸಿದೆ. ಇದರ ಹೊರತಾಗಿ ದೇಶದಲ್ಲಿ ಹಲವು ಖ್ಯಾತ ಪರ್ವತಾರೋಹಣ ತರಬೇತಿ ಸಂಸ್ಥೆಗಳು, ಸಾಹಸ ಕ್ರೀಡೆಗಳ ಕಲಿಕಾ ಕೇಂದ್ರಗಳೂ ಇವೆ. ಇಲ್ಲಿ ಪ್ರಶಿಕ್ಷಣ ಪಡೆದ ತರಬೇತುದಾರರು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಟ್ರೆಕ್ಕಿಂಗ್ ಅಥವಾ ಪರ್ವತಾರೋಹಣಕ್ಕೆ ಹೋಗುವ ಮೊದಲು ಸ್ಥಳೀಯ ಸರಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ನಾವು ಹೋಗುವ ಸ್ಥಳ, ಎಷ್ಟು ದಿನದ ಚಾರಣ, ಎಷ್ಟು ಜನ ಹೋಗುತ್ತಿದ್ದೇವೆ? ಮೊದಲಾದ ಮಾಹಿತಿಗಳನ್ನು ನೀಡುವುದು ಒಳಿತು. ಹತ್ತಿರದ ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಪರ್ವತಾರೋಹಣ ಸಂಸ್ಥೆಗಳಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡುವುದು ಅವಶ್ಯ. ನಮ್ಮ ಸುರಕ್ಷತೆಗೆ ಅಗತ್ಯವಿರುವ ಒಂದಷ್ಟು ಟಿಪ್ಸ್‌‌ಗಳನ್ನು ಅವರು ಕೊಡುತ್ತಾರೆ. ನಮಗೇನಾದರೂ ತೊಂದರೆಯಾದರೆ ತಕ್ಷಣದಲ್ಲಿ ಸಹಾಯಕ್ಕೆ ಧಾವಿಸುತ್ತಾರೆ.

ಚಾರಣದಲ್ಲಿ ಎದುರಾಗುವ ಅಡೆ ತಡೆಗಳು
   ಕೆಟ್ಟ ವಾತಾವರಣ, ಮಳೆ, ಬಿರುಗಾಳಿ, ಮೈ ಕೊರೆಯುವ ಚಳಿ, ಬಿಸಿಲು, ನೀರಿನ ಅಭಾವ, ಕಾಡು ಪ್ರಾಣಿಗಳ ಕಾಟ, ಆರೋಗ್ಯದ ಸಮಸ್ಯೆಗಳು, ಹಿಮಾಲಯದ ಪರ್ವತಗಳಲ್ಲಿ ಆಲ್ಟಿಟ್ಯೂಡ್ ಸಿಕ್‌ನೆಸ್, ಸಂವಹನದ ತೊಂದರೆ, ತುರ್ತುಪರಿಸ್ಥಿತಿಗಳಲ್ಲಿ ಸುರಕ್ಷಿತ ಸ್ಥಳಕ್ಕೆ ಮರಳುವುದು, ಇತ್ಯಾದಿ ಸಮಸ್ಯೆಗಳು ಕಾಡಬಹುದು. 


ಆರೋಗ್ಯಕ್ಕೂ ಪೂರಕ
   ವರ್ಷಕ್ಕೊಮ್ಮೆಯಾದರೂ ಟ್ರೆಕ್ಕಿಂಗ್ ಮಾಡಿ ಬಂದರೆ ರೊಟೀನ್ ಕೆಲಸಕ್ಕೊಂದು ವಿರಾಮ ಸಿಗುತ್ತದೆ. ದೇಹ ಮತ್ತು ಮನಸ್ಸಿಗೆ ಹೊಸ ಹುಮ್ಮಸ್ಸು ದೊರೆಯುತ್ತದೆ. ಕಚೇರಿಯ ಕೆಲಸದಲ್ಲೂ ವಿಭಿನ್ನತೆಯನ್ನು ಕಂಡುಕೊಳ್ಳಬಹುದು. ದೈನಂದಿನ ಕೆಲಸಗಳಲ್ಲಿದ್ದ ನಿರಾಸಕ್ತಿ ಹೋಗಲಾಡಿಸುತ್ತದೆ. ಹೊಸ ವಿಷಯಗಳ ಕಲಿಕೆಗೆ ಸಹಕಾರಿ. ಚಾರಣ ಮಾಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಿಸಿಕೊಳ್ಳುತ್ತದೆ.ಭಾರವಾದ ವಸ್ತುಗಳನ್ನು ಹೊರುವುದು, ದೂರದ ನಡಿಗೆಗಳಂಥ ದೈಹಿಕ ಚಟುವಟಿಕೆಗಳಿಂದ ದೇಹದಲ್ಲಿ ಶೇಖರವಾಗಿರುವ ಅನಗತ್ಯ ಬೊಜ್ಜು ಕರಗುತ್ತದೆ. ಹೃದಯದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ವೃದ್ಧಿಸುತ್ತದೆ. ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಮೂಳೆಗಳು ಗಟ್ಟಿಮುಟ್ಟಾಗುತ್ತದೆ. ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ದೇಹದಲ್ಲಿ ಎಂಡೋರ್ಫಿನ್ ಬಿಡುಗಡೆಯಾಗುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಡಿಪ್ರೆಷನ್‌ನಿಂದ ಹೊರಬರಲು ಸಹಕಾರಿಯಾಗಿದೆ. ನೆನಪಿನ ಶಕ್ತಿ ವೃದ್ಧಿಸಿ, ಮೆದುಳಿನ ಚಟುವಟಿಕೆಯನ್ನು ತ್ವರಿತಗೊಳಿಸುತ್ತದೆ.

   ಚಾರಣದಲ್ಲಿ ನಾವು ತೊಡುವ ಬಟ್ಟೆಯೂ ಪ್ರಮುಖವಾಗಿರುತ್ತದೆ. ದೂರದ ಪ್ರದೇಶಗಳಿಗೆ ಹೋಗುವಾಗ ಕಡ್ಡಾಯವಾಗಿ ಹತ್ತಿಯ ಬಟ್ಟೆಗಳನ್ನು ಕೊಂಡೊಯ್ಯಿರಿ. ದೇಹ, ತಲೆ, ಕುತ್ತಿಗೆ, ಅಂಗೈ, ಅಂಗಾಲು, ಕಣ್ಣುಗಳ ರಕ್ಷಣೆಗೆ ಅಗತ್ಯ ವಸ್ತುಗಳು ನಮ್ಮ ಬಳಿ ಇರಲೇಬೇಕು. ಚಳಿಯಿಂದ ರಕ್ಷಣೆಗೆ ತಲೆಗೊಂದು ಟೊಪ್ಪಿ, ಯುವಿ ಕಿರಣಗಳಿಂದ ಬಚಾವಾಗಲು ಕಪ್ಪು ಕನ್ನಡಕ, ಗ್ಲೌಸ್, ರೈನ್ ಕೋಟ್, ಹೈಕಿಂಗ್ ಶೂ, ವಿಂಡ್ ಪ್ರೂಫ್ ಪ್ಯಾಂಟ್ ಮತ್ತು ಜಾಕೆಟ್, ಕ್ಯಾಂಪ್‌ ಶೂ, ಕಾಟನ್ ಸಾಕ್ಸ್‌‌ಗಳು, ಎರಡು ಅಥವಾ ಮೂರು ಜೊತೆ ಒಳಉಡುಪುಗಳು, ಉದ್ದ ತೋಳಿನ ಅಂಗಿಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿರಬೇಕು.




ಚಾರಣಕ್ಕೆ ಹೋಗುವ ಮೊದಲು ಕೆಲವು ಅಗತ್ಯ ಮಾಹಿತಿ ಗಮನದಲ್ಲಿಟ್ಟುಕೊಳ್ಳಿ. ಅದರಲ್ಲೂ ಮೊದಲ ಬಾರಿಗೆ ಟ್ರೆಕ್ಕಿಂಗ್ ಹೋಗುತ್ತಿರುವವರಾದರೆ ಈ ಕೆಳಗಿನ ಅಂಶ ಮರೆಯಬೇಡಿ.

  • ಸುಲಭವಾಗಿ ಚಾರಣ ಮಾಡುವ ಸ್ಥಳ ಹುಡುಕಿ
  • ದೈಹಿಕವಾಗಿ ಫಿಟ್ ಆಗಿರಬೇಕು
  • ಚಾರಣದ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಕಲೆಹಾಕಿ
  • ಚಾರಣದ ವೇಳಾಪಟ್ಟಿ ನಿಗದಿಪಡಿಸಿಕೊಳ್ಳಿ
  • ಆಯವ್ಯಯ ತಿಳಿದಿರಲಿ
  • ಅಗತ್ಯ ವಸ್ತುಗಳನ್ನು ಮರೆಯಬೇಡಿ
  • ಬೇಕೆನಿಸಿದರೆ ಕ್ಯಾಮೆರಾ, ಬೈನಾಕ್ಯುಲರ್, ಛತ್ರಿ ಮೊದಲಾದವುಗಳನ್ನು ಕೊಂಡೊಯ್ಯಿರಿ
  • ಫೋಟೋಗ್ರಫಿ ಪ್ರಿಯರಾಗಿದ್ದರೆ ಪೂರ್ವಾನುಮತಿ ಕಡ್ಡಾಯ.
  • ನಿಮ್ಮ ಇತಿಮಿತಿಗಳ ಅರಿವಿರಬೇಕು. ಅದನ್ನು ಮೀರಿ ಹೋಗಲು ಪ್ರಯತ್ನಿಸಬೇಡಿ.

ಟ್ರೆಕ್ಕಿಂಗ್ ಆಯ್ಕೆ ಹೇಗೆ?

  • ವರ್ಷದ ಯಾವ ಸಮಯದಲ್ಲಿ ಟ್ರೆಕ್ಕಿಂಗ್ ಹೋಗುವ ಗುರಿ ಹೊಂದಿದ್ದೀರಿ.
  • ಚಾರಣದಲ್ಲಿ ಏನನ್ನು ನೋಡಬೇಕು, ತಲುಪಬೇಕಾದ ಗಮ್ಯ ಯಾವುದು?
  • ಎಷ್ಟು ದಿನ ಚಾರಣ ಮಾಡಲು ನೀವು ಶಕ್ತರಿದ್ದೀರಿ? (ದೈಹಿಕ ಹಾಗೂ ಹಣಕಾಸಿನ ವಿಚಾರಗಳಲ್ಲಿ) 

   ಭಾರತದಲ್ಲಿ ಹೈಕಿಂಗ್, ಟ್ರೆಕ್ಕಿಂಗ್ ಹಾಗೂ ಪರ್ವತಾರೋಹಣ ಮಾಡಲೇಬೇಕಾದ ಜಾಗಗಳು ಹಿಮಾಲಯ, ಈಶಾನ್ಯ ರಾಜ್ಯಗಳು, ಸಿಕ್ಕೀಂ, ಪಶ್ಚಿಮ ಘಟ್ಟಗಳು, ಪೂರ್ವದ ಘಟ್ಟಗಳು, ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗಿನ ಸುಂದರ ತೀರ ಪ್ರದೇಶ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ದ್ವೀಪಗಳು, ರಾಜಸ್ಥಾನದ ಮರುಭೂಮಿ, ಕಣಿವೆಗಳು, ಗುಹಾಂತರ ದೇಗುಲಗಳು, ದೇಶದ ಉದ್ದಗಲಕ್ಕೂ ಇರುವ ಅಸಂಖ್ಯ ಅಭಯಾರಣ್ಯಗಳು, ಜಲಪಾತ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕಕ್ಕೆ ಸಿಗದಷ್ಟಿದೆ.


ಹೀಗಿರಲಿ  ಚಾರಣದ ಬ್ಯಾಕ್‌ಪ್ಯಾಕ್ 

ಚಾರಣದ ಬ್ಯಾಗ್‌ನಲ್ಲಿ ಏನೆಲ್ಲ ಇರಬೇಕು ಎನ್ನುವುದು ಮೊದಲ ಪ್ರಶ್ನೆ. ಅನಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋದರೆ ಚಾರಣವೇ ಕಠಿಣವಾಗುತ್ತದೆ. ಬ್ಯಾಕ್‌ಪ್ಯಾಕ್ ನಮ್ಮ ಬೆನ್ನ ಮೇಲಿರುತ್ತದೆ ಎನ್ನುವುದನ್ನು ಮರೆಯಬಾರದು. ಹೀಗಾಗಿ ಬ್ಯಾಗ್‌ನಲ್ಲಿರಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ.

* ಬ್ಯಾಗ್: ಎಷ್ಟು ದಿನದ ಚಾರಣ ಎಂದು ತೀರ್ಮಾನಿಸಿ ಅದಕ್ಕೆ ತಕ್ಕಂತೆ ಬ್ಯಾಗ್ ತೆಗೆದುಕೊಳ್ಳಬೇಕು. ಚಾರಣದ ಬ್ಯಾಗ್‌ಗಳನ್ನು ಲೀಟರ್‌ಗಳ ಲೆಕ್ಕದಲ್ಲಿ ಹೇಳಲಾಗುತ್ತದೆ. ವಾರಕ್ಕಿಂತ ಹೆಚ್ಚು ದಿನಗಳ ಟ್ರೆಕ್ಕಿಂಗ್ ಮಾಡುವುದಾದರೆ 50ರಿಂದ 70 ಲೀ.ಗಳ  ಇಟ್ಟುಕೊಳ್ಳಿ.

* ಟೆಂಟ್: ಚಾರಣದ ವೇಳೆ ತಂಗಲು, ರಾತ್ರಿ ಕಳೆಯಲು, ಬೇಸ್ ಕ್ಯಾಂಪ್ ಹಾಕಲು ಟೆಂಟ್‌ಗಳನ್ನು ಉಪಯೋಗ ವಾಗುತ್ತದೆ. ಎರಡರಿಂದ ಎಂಟು ಜನ ಬಳಸುವ ಟೆಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಡುಗೆಗೆ ಹಾಗೂ ಸಾಮಾನು ಸರಂಜಾಮುಗಳನ್ನು ಸೇರಿಸಿಡಲು ದೊಡ್ಡ ಟೆಂಟ್‌ಗಳನ್ನು ಬಳಸಲಾಗುತ್ತದೆ. ತಂಡದ ಗಾತ್ರಕ್ಕೆ ತಕ್ಕಂತೆ ಟೆಂಟ್‌ಗಳನ್ನು ಖರೀದಿಸಬಹುದು ಅಥವಾ ಬಾಡಿಗೆಗೂ ಪಡೆಯಬಹುದು.

* ಸ್ಲೀಪಿಂಗ್ ಬ್ಯಾಗ್ ಮತ್ತು ಮ್ಯಾಟ್: ಟೆಂಟ್‌ನಲ್ಲಿ ರಾತ್ರಿ ಮಲಗಲು ಸ್ಲೀಪಿಂಗ್ ಬ್ಯಾಗ್ ಬಳಕೆಯಾಗುತ್ತದೆ. ಮೊದಲು ಮ್ಯಾಟ್  ಅದರ ಮೇಲೆ ಇತರ ವಸ್ತುಗಳನ್ನು ಇಟ್ಟು ಕೊಳ್ಳುತ್ತಾರೆ. ಸ್ಲೀಪಿಂಗ್ ಬ್ಯಾಗ್‌ನಲ್ಲಿ ಹಲವು ವಿಧಗಳಿವೆ. ಗುಣಮಟ್ಟಕ್ಕನುಗುಣವಾಗಿ ದರ ಬದಲಾಗುತ್ತದೆ.

* ಗ್ಯಾಸ್ ಸ್ಟೌವ್ ಮತ್ತು ಪಾತ್ರೆಗಳು: ಚಾರಣಕ್ಕೆ ಹೋದಾಗ  ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಇಟ್ಟುಕೊಳ್ಳುವುದು ಒಳಿತು. ತಂಡದ ಗಾತ್ರಕ್ಕನುಗುಣವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಪಾತ್ರೆಗಳನ್ನು ಕೊಂಡೊಯ್ಯಿರಿ.

* ಪ್ರಥಮ ಚಿಕಿತ್ಸಾ ಪೆಟ್ಟಿಗೆ: ಚಾರಣದಲ್ಲಿ ಕಡ್ಡಾಯವಾಗಿ ತೆಗೆದು ಕೊಂಡು ಹೋಗಲೇಬೇಕಾದ ವಸ್ತುಗಳ ಪಟ್ಟಿಯಲ್ಲಿ ಫಸ್ಟ್ ಏಯ್ಡ್ ಕಿಟ್‌ಗೆ ಪ್ರಮುಖ ಸ್ಥಾನ. ಜ್ವರ, ತಲೆ ನೋವು, ವಾಂತಿ, ತರಚಿದ ಗಾಯಕ್ಕೆ ಅಗತ್ಯವಾದ ಮಾತ್ರೆ, ಸನ್‌ಸ್ಕ್ರೀನ್ ಲೋಶನ್, ಹತ್ತಿ, ಬ್ಯಾಂಡೇಜ್ ಬಟ್ಟೆ, ಟಿಂಚರ್‌ಗಳನ್ನು ವೈದ್ಯರ ಸಲಹೆಯಂತೆ ಜೊತೆಗಿಟ್ಟುಕೊಳ್ಳಿ.

* ಚಾಕು: ಹೊರ ಪ್ರದೇಶಗಳಿಗೆ ತೆರಳಿ ದಾಗ ಜತೆಗೊಂದು ಆಯುಧವಿದ್ದರೆ ಒಂಥರ ಧೈರ್ಯ. ತರಕಾರಿ ಹೆಚ್ಚಲು, ಕೈ-ಕಾಲಿಗೆ ಚುಚ್ಚಿದ ಮುಳ್ಳು ತೆಗೆಯಲು, ಬೆಂಕಿ ಹಚ್ಚಲು, ಕಾಡು ಪ್ರಾಣಿ ದಾಳಿಗಳಿಂದ ರಕ್ಷಣೆಗೆ ಚಾರಣದ ವೇಳೆಯಲ್ಲಿ ಪುಟ್ಟ ಚಾಕುವಿದ್ದರೆ ಉಪಯುಕ್ತ.

* ಬ್ಯಾಟರಿ: ತಲೆಗೆ ಕಟ್ಟಿಕೊಳ್ಳುವ ಅಥವಾ ಕೈಲಿ ಹಿಡಿದುಕೊಳ್ಳುವ ಬ್ಯಾಟರಿ ಕತ್ತಲೆಯಲ್ಲಿ ಸಂಚರಿಸುವಾಗ, ದೂರದಲ್ಲಿರುವ ಚಾರಣಿಗರಿಗೆ ದಾರಿ ತೋರಿಸಲು ಬ್ಯಾಟರಿ ಸಹಕಾರಿ.

* ವಾಟರ್ ಬ್ಯಾಗ್ ಮತ್ತು ಬಾಟಲ್: ಟ್ರೆಕ್ಕಿಂಗ್ ಮಾಡುವಾಗ ದೇಹ ಬಳಲಿ, ನಿರ್ಜಲೀಕರಣಗೊಳ್ಳುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಶುದ್ಧ ನೀರು ಸಿಗುವ ಸ್ಥಳಗಳನ್ನು ಮೊದಲೇ ಗುರುತಿಸಿಟ್ಟು ಕನಿಷ್ಟ ಒಂದೆರಡು ಬಾಟಲಿಗಳಲ್ಲಿ ಕುಡಿಯುವ ನೀರು ಶೇಖರಿಸಿಟ್ಟುಕೊಳ್ಳಬೇಕು.

* ಟ್ರೆಕ್ಕಿಂಗ್ ಶೂ: ಕಲ್ಲು-ಮುಳ್ಳಿನ ಹಾದಿ ಸವೆಸುವ ಚಾರಣಿಗರು ಕಾಲು ಸುರಕ್ಷಿತವಾಗಿಟ್ಟು ಕೊಳ್ಳಬೇಕು. ಕಾಲಿಗೆ ಹೊಂದುವ ಶೂ ಮತ್ತು ಸಾಕ್ಸ್ ಧರಿಸಿ. ಉತ್ತಮ ಗುಣ ಮಟ್ಟದ ಶೂ ಇದ್ದರೆ ಒಳ್ಳೆಯದು.

* ನಕ್ಷೆ ಮತ್ತು ಕಂಪಾಸ್: ಚಾರಣಕ್ಕೆ ಹೋಗಲು ಮಾರ್ಗಸೂಚಿ ಅತ್ಯವಶ್ಯಕ. ಅದಿಲ್ಲದಿದ್ದರೆ ದಿಕ್ಕು, ಜಾಗ, ಬದಲಾಗಿ ಮತ್ತೆಲ್ಲಿಗೋ ಹೋಗುತ್ತೇವೆ. ಮ್ಯಾಪ್ ಹಾಗೂ ಕಂಪಾಸ್ ಇದ್ದರೆ ಸುರಕ್ಷಿತ ಪ್ರಯಾಣಕ್ಕೆ ಸಹಕಾರಿಯಾಗುತ್ತದೆ.
===================


   ಸೂಕ್ತ ಯೋಜನೆ, ಪೂರ್ವ ತಯಾರಿ, ಹೋಗುವ ಸ್ಥಳದ ಮಾಹಿತಿ, ಹವಾಮಾನದ ವಿವರಣೆಗಳ ಜತೆಯಲ್ಲಿ ಸ್ಥಳೀಯ ಗೈಡ್, ಅಗತ್ಯ ವಸ್ತುಗಳನ್ನು ಹೊತ್ತುಕೊಂಡೊಯ್ಯಲು ಬೇಕಾಗುವ ಪೋರ್ಟರ್‌ಗಳು ಮತ್ತು ಟೆಂಟ್‌ಗಳು, ದೊಡ್ಡ ಬ್ಯಾಗ್, ಹಗ್ಗದ ಬಂಡಲ್‌ಗಳು, ಚಾರಣಕ್ಕೆ ಬೇಕಾಗುವ ಇತರ ಸಲಕರಣೆಗಳು, ಆಹಾರ ಪದಾರ್ಥಗಳು, ಅಡುಗೆ ಪಾತ್ರೆಗಳನ್ನು ಬಾಡಿಗೆಗೆ ಪಡೆದು, 15-20 ಕೆಜಿ ಬ್ಯಾಕ್‌ಪ್ಯಾಕ್‌ಗಳನ್ನು ವಾರಗಳ ಲೆಕ್ಕದಲ್ಲಿ ಹೆಗಲ ಮೇಲೆ ಹೊತ್ತುಕೊಂಡು ನಡೆಯುವ ಸಾಮರ್ಥ್ಯ ಹೊಂದಿರುವವರು ವರ್ಷಕ್ಕೊಂದೋ ಎರಡೋ ಚಾರಣಕ್ಕೆ ಹೋಗಿ ಬರಬಹುದು.

   ಜರ್ನಿಯನ್ನು ಖುಷಿಯಿಂದ ಎಂಜಾಯ್ ಮಾಡಿ. 

========================================================================
#ಜರ್ನಿ, #ಖುಷಿ, #ಎಂಜಾಯ್, #ಗೈಡ್, #ವಿಶ್ವವಾಣಿ, #ದಿನಪತ್ರಿಕೆ, #ಭಾನುವಾರ, #ವಿರಾಮ, #ಲೇಖನ, #vishwavani, #news, #trucking, #himalaya, #Adventuresports, #expedition, #travel, #ಬ್ಯಾಕ್‌ಪ್ಯಾಕ್‌, #Tent, #Backpack, #Porter, #ಭಾರತ, #ಹೈಕಿಂಗ್, #ಟ್ರೆಕ್ಕಿಂಗ್, #ಪರ್ವತಾರೋಹಣ, #ಹಿಮಾಲಯ, #ಈಶಾನ್ಯರಾಜ್ಯ, #ಸಿಕ್ಕೀಂ, #ಪಶ್ಚಿಮಘಟ್ಟ, #ಪೂರ್ವಘಟ್ಟ, #ಗುಜರಾತ್‌, #ಪಶ್ಚಿಮಬಂಗಾಳ, #ತೀರಪ್ರದೇಶ, #ಲಕ್ಷದ್ವೀಪ, #ಅಂಡಮಾನ್, #ನಿಕೋಬಾರ್, #ದ್ವೀಪಗಳು, #ರಾಜಸ್ಥಾನ, #ಮರುಭೂಮಿ, #ಕಣಿವೆ, #ಗುಹಾಂತರದೇಗುಲ, #ಅಭಯಾರಣ್ಯ, #ಜಲಪಾತ, #ತೇನ್‌ಸಿಂಗ್_ನೋರ್ಗೆ, #ವಿಶ್ವ, #ಎತ್ತರ, #ಶಿಖರ, #ಮೌಂಟ್_ಎವರೆಸ್ಟ್‌, #ನ್ಯೂಜಿಲೆಂಡ್‌, #ಸರ್_ಎಡ್ಮಂಡ್_ಹಿಲರಿ, #mountain, #Everest, #Peak, #SirEdmundHillary, #tenzingnorgay, #NewZealand, #mountaineer, #MountEverest,
Tags: expeditionstoriestravel

Post a Comment

1 Comments

Skip to main content